ADVERTISEMENT

ರೆಡ್ಡಿ ಸಹೋದರರಿಗೆ ಕಾಂಗ್ರೆಸ್‌ ಶಾಕ್‌

ಸಕ್ರಿಯ ರಾಜಕೀಯಕ್ಕೆ ಮರಳಲು ಮೂವರು ಸಹೋದರರ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 19:51 IST
Last Updated 18 ಜನವರಿ 2018, 19:51 IST

ಬೆಂಗಳೂರು: ರಾಜ್ಯ ರಾಜಕೀಯಕ್ಕೆ ಮರಳಿ ಬರಲು ಸಿದ್ಧತೆ ನಡೆಸುತ್ತಿರುವ ಬಳ್ಳಾರಿಯ ರೆಡ್ಡಿ ಸಹೋದರರ ವಿರುದ್ಧದ ಅಕ್ರಮ ಅದಿರು ಸಾಗಣೆ ಪ್ರಕರಣವನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಎಸ್‌ಐಟಿಗೆ ವಹಿಸುವ ಮೂಲಕ ಶಾಕ್‌ ನೀಡಿದೆ.

ಅಕ್ರಮ ಗಣಿಗಾರಿಕೆ ವಿಷಯವನ್ನೇ ಮುಂದಿಟ್ಟು 2013 ಚುನಾವಣೆ ಎದುರಿಸಿದ್ದ ಕಾಂಗ್ರೆಸ್‌, ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಬಿಜೆಪಿಯ ಭದ್ರಕೋಟೆ ಎನಿಸಿದ್ದ ಬಳ್ಳಾರಿಯಲ್ಲಿ ಈ ಅಭಿಯಾನದ ಮೂಲಕ ಕಾಂಗ್ರೆಸ್‌ ಮತ್ತೆ ಪಾರುಪತ್ಯ ಸಾಧಿಸಿತ್ತು.

ಏಳು ವರ್ಷಗಳ ಹಿಂದೆ ಭಾರಿ ಸದ್ದು ಮಾಡಿದ ಈ ಹಗರಣ ಆನಂತರ ತಣ್ಣಗಾಗಿತ್ತು. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮತ್ತೆ ರಾಜಕೀಯದ ಮುಖ್ಯವಾಹಿನಿಯಲ್ಲಿ ಸಕ್ರಿಯರಾಗಲು ಈ ಸಹೋದರರು ಸಜ್ಜಾಗುತ್ತಿರುವ ಸಂದರ್ಭದಲ್ಲೇ ಅದಿರು ಅಕ್ರಮ ಸಾಗಣೆ ಪ್ರಕರಣಗಳನ್ನು ಸರ್ಕಾರ ಎಸ್‌ಐಟಿಗೆ ಕೊಡುವ ತೀರ್ಮಾನ ಮಾಡಿದೆ.

ADVERTISEMENT

ಹಗರಣ ಬಯಲಿಗೆ ಬಂದ ಬಳಿಕ ಸಹೋದರರ ಪೈಕಿ ಹಿರಿಯರಾದ ಕರುಣಾಕರ ರೆಡ್ಡಿ ಉಳಿದವರಿಂದ ದೂರವಾಗಿದ್ದರು. ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಕ್ಷೇತ್ರದಿಂದ 2008ರಲ್ಲಿ ಆಯ್ಕೆಯಾಗಿದ್ದ ಅವರು, 2013ರಲ್ಲಿ ಸೋಲು ಕಂಡಿದ್ದರು. ‘ಟಿಕೆಟ್ ಸಿಕ್ಕರೆ ಹರಪನಹಳ್ಳಿ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುತ್ತೇನೆ’ ಎಂದು ಕರುಣಾಕರ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘2008ರಲ್ಲಿ ಸ್ಪರ್ಧಿಸಿ ಬಳ್ಳಾರಿ ನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದೆ. ಮತ್ತೆ ಅದೇ ಕ್ಷೇತ್ರದಿಂದ ಟಿಕೆಟ್‌ ಕೊಡುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಗೆಲ್ಲುವ ವಿಶ್ವಾಸವೂ ಇದೆ’ ಎಂದು ಸೋಮಶೇಖರ ರೆಡ್ಡಿ ತಿಳಿಸಿದರು.

ಆದರೆ, ಜನಾರ್ದನ ರೆಡ್ಡಿ ರಾಜಕೀಯ ನಡೆ ಕುತೂಹಲ ಹುಟ್ಟಿಸಿದೆ. ಸಿಬಿಐ ತನಿಖೆ ನಡೆಸಿದ್ದ ₹ 16,085 ಕೋಟಿ ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಜಾಮೀನು ಪಡೆದಿದ್ದಾರೆ. ಜಾಮೀನಿನ ಷರತ್ತು ಪ್ರಕಾರ ಬಳ್ಳಾರಿ, ಅನಂತಪುರ ಮತ್ತು ಕಡಪ ಜಿಲ್ಲೆಗಳಿಗೆ ಅವರು ಭೇಟಿ ನೀಡುವಂತಿಲ್ಲ.

‘ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ನನಗೆ ಅವಕಾಶ ನೀಡಿದರೆ ಕಾಂಗ್ರೆಸ್‌ ಸಂಪೂರ್ಣ ನಿರ್ನಾಮ ಮಾಡಲಿದ್ದು, ಬಿಜೆಪಿ ಮತ್ತೆ ಅಧಿಕಾರಕ್ಕೆ ತರುತ್ತೇನೆ’ ಎಂದು ಜನಾರ್ದನ ರೆಡ್ಡಿ ಇತ್ತೀಚೆಗೆ ಆನೇಕಲ್‌ನಲ್ಲಿ ಹೇಳಿದ್ದರು.

ಜನಾರ್ದನ ರೆಡ್ಡಿಯ ನಂಬಿಗಸ್ಥರಾದ ಬಿಜೆಪಿ ಸಂಸದ ಬಿ. ಶ್ರೀರಾಮುಲು, ಜನಾರ್ದನ ರೆಡ್ಡಿಗೆ ಮತ್ತೆ ಅವಕಾಶ ನೀಡುವಂತೆ ಪಕ್ಷದ ನಾಯಕರಲ್ಲಿ ಸಾರ್ವಜನಿಕವಾಗಿ ಮನವಿ ಮಾಡಿದ್ದಾರೆ.

‘ರೆಡ್ಡಿ ಪಕ್ಷದ ಜೊತೆ ಇದ್ದರೆ ಯಾವುದೇ ಪ್ರಚಾರ ನಡೆಸದೆ ಬಳ್ಳಾರಿ ಜಿಲ್ಲೆಯ ಎಲ್ಲ ಒಂಬತ್ತು ಸ್ಥಾನಗಳನ್ನು ಬಿಜೆಪಿ ಗೆಲ್ಲುವುದು ಖಚಿತ’ ಎಂದೂ ಶ್ರೀರಾಮಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಅವರನ್ನು ಮತ್ತೆ ಪಕ್ಷಕ್ಕೆ ತಂದರೆ ಹೆಚ್ಚಿನ ಅನುಕೂಲವಾಗುವುದಂತೂ ಸತ್ಯ’ ಎಂದು ಸೋಮಶೇಖರ ರೆಡ್ಡಿ ತಿಳಿಸಿದರು.

ಆದರೆ, ಜನಾರ್ದನ ರೆಡ್ಡಿ ಬಗ್ಗೆ ಬಿಜೆಪಿ ಮೌನ ವಹಿಸಿದೆ. ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಆರೋಪಗಳಿರುವುದರಿಂದ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಸೇರಿಸಿಕೊಂಡರೆ ವರ್ಚಸ್ಸಿಗೆ ಧಕ್ಕೆ ಉಂಟಾಗಬಹುದು ಎಂಬ ಆತಂಕವೂ ಬಿಜೆಪಿ ವಲಯದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.