ADVERTISEMENT

ಧಾರಾವಾಹಿಗೆ ಅಗ್ರಸ್ಥಾನ!

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 19:30 IST
Last Updated 23 ಜನವರಿ 2018, 19:30 IST
ಧಾರಾವಾಹಿಗೆ ಅಗ್ರಸ್ಥಾನ!
ಧಾರಾವಾಹಿಗೆ ಅಗ್ರಸ್ಥಾನ!   

ಬೆಂಗಳೂರು: ರಾಜ್ಯದಾದ್ಯಂತ ವ್ಯಾಪಿಸಿದ್ದ ಟಿಆರ್‌ಪಿ ಅಕ್ರಮ ಜಾಲದಿಂದಲೇ ಕನ್ನಡದ ಎರಡು ಹೊಸ ಧಾರಾವಾಹಿಗಳು, ಒಂದೇ ವಾರದಲ್ಲಿ ಮೊದಲೆರಡು ಸ್ಥಾನಕ್ಕೇರಿದ್ದವು ಎಂಬ ಸಂಗತಿ ಸಿಸಿಬಿ ಪೊಲೀಸರ ತನಿಖೆಯಿಂದ ಬಯಲಾಗಿದೆ.

‘ಟಿಆರ್‌ಪಿ ಪ್ಯಾನಲ್ ಮೀಟರ್‌’ ಇರುವ ಮನೆಯವರಿಗೆ ನಗದು ಹಾಗೂ ಉಡುಗೊರೆಗಳ ಆಮಿಷವೊಡುತ್ತಿದ್ದ ಜಾಲವು ನಿರ್ದಿಷ್ಟ ವಾಹಿನಿ, ಧಾರಾವಾಹಿ, ರಿಯಾಲಿಟಿ ಶೋ ಹಾಗೂ ಕಾರ್ಯಕ್ರಮ ನೋಡುವಂತೆ ಪ್ರಚೋದಿಸುತ್ತಿತ್ತು. ಹೀಗಾಗಿ ಕೆಲ ಧಾರಾವಾಹಿಗಳ ವೀಕ್ಷಣೆಯ ಪ್ರಮಾಣವೂ ದಿಢೀರ್‌ ಏರಿಕೆ ಆಗುತ್ತಿತ್ತು.

‘ಕನ್ನಡದ ಎರಡು ವಾಹಿನಿಗಳಲ್ಲಿ 2017ರ ಜುಲೈನಲ್ಲಿ ಆರಂಭವಾದ ಎರಡು ಧಾರಾವಾಹಿಗಳ ಟಿಆರ್‌ಪಿ ಒಂದೇ ವಾರದಲ್ಲಿ ಏರಿಕೆ ಆಗಿತ್ತು. ಆ ಧಾರಾವಾಹಿಗಳೇ ಮೊದಲೆರಡು ಸ್ಥಾನದಲ್ಲಿದ್ದವು. ನಾಲ್ಕು ವಾರವೂ ಅದೇ ಸ್ಥಿತಿ ಮುಂದುವರಿದಿತ್ತು’ ಎಂದು ಸಿಸಿಬಿಯ ಪೊಲೀಸರು ತಿಳಿಸಿದರು.

ADVERTISEMENT

‘ಆ ಎರಡೂ ಧಾರಾವಾಹಿಗಳಿಗೆ ಜಾಹೀರಾತು ನೀಡುವರ ಸಂಖ್ಯೆ ಹೆಚ್ಚಾಗಿತ್ತು. ಅವುಗಳ ಟಿಆರ್‌ಪಿಯನ್ನು ಕೆಲ ಧಾರಾವಾಹಿಗಳ ನಿರ್ದೇಶಕರು
ಹಾಗೂ ನಿರ್ಮಾಪಕರು ಪ್ರಶ್ನಿ ಸಿದ್ದರು. ಆಂತರಿಕ ತನಿಖೆ ನಡೆಸುವಂತೆಯೇ ಬಾರ್ಕ್‌ ಅಧಿಕಾರಿಗಳನ್ನು ಕೇಳಿಕೊಂಡಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಅಧಿಕಾರಿಗಳು, ಏರಿಳಿತದ ಬಗ್ಗೆ ಮಾಹಿತಿ ಕಲೆಹಾಕಲು ಆರಂಭಿಸಿದ್ದರು. ಅದೇ ವೇಳೆ ಅಕ್ರಮ ಜಾಲದಕೃತ್ಯ ಬಯಲಾಯಿತು’ ಎಂದು ತಿಳಿಸಿದರು.

‘ನಮಗೆ ದೂರು ನೀಡುವುದಕ್ಕೂ ಹಲವು ತಿಂಗಳ ಮುನ್ನವೇ ಅಕ್ರಮದ ಬಗ್ಗೆ ಬಾರ್ಕ್‌ ಸಂಸ್ಥೆಗೆ ಮಾಹಿತಿ ಗೊತ್ತಾಗಿದೆ. ಸಂಸ್ಥೆಯವರೇ ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ಅವುಗಳನ್ನು ನಮಗೂ ಕೊಟ್ಟಿದ್ದಾರೆ. ಪರಿಶೀಲನೆ ನಡೆಸುತ್ತಿದ್ದೇವೆ’ ಎಂದರು.

ಸವಾಲಾದ ಪ್ರಕರಣ: ಅಕ್ರಮದ ಬಗ್ಗೆ ಬಾರ್ಕ್‌ (ಬ್ರಾಡ್‌ಕಾಸ್ಟಿಂಗ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌) ಸಂಸ್ಥೆಯ ಪಾಲುದಾರ ಆರ್‌.ಎಸ್‌.ಮಹೇಶ್‌ 2017ರ ಡಿ. 30ರಂದೇ ಸಿಸಿಬಿ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದರು. ಇದು ಆನ್‌ಲೈನ್‌ಗೆ ಸಂಬಂಧಪಟ್ಟ ಪ್ರಕರಣವಿರಬಹುದು ಎಂದು ತಿಳಿದಿದ್ದ ಪೊಲೀಸರು, ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಷ್ಟೇ ಎಫ್‌ಐಆರ್‌ ದಾಖಲಿಸಿಕೊಂಡಿದ್ದರು.

ತನಿಖೆಗೆ ಮುಂದಾಗಿದ್ದಾಗಲೇ ಇದೊಂದು ದೊಡ್ಡ ಅಕ್ರಮದ ಜಾಲವೆಂಬುದು ಪೊಲೀಸರ ಗಮನಕ್ಕೆ ಬಂತು. ಟಿಆರ್‌ಪಿ ಎಂದರೇನು ಅದನ್ನು ನಿರ್ಧರಿಸುವುದು ಹೇಗೆ ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡ ಪೊಲೀಸರ ವಿಶೇಷ ತಂಡ,  ‘ಟಿಆರ್‌ಪಿ ಪ್ಯಾನಲ್ ಮೀಟರ್‌’ ಅಳವಡಿಸಿದ್ದ ಕೆಲ ಮನೆಗಳಿಗೆ ಮಾರುವೇಷದಲ್ಲಿ ಭೇಟಿ ನೀಡಿತ್ತು. ಮೀಟರ್‌ ನಿರ್ವಹಣೆಯ ಬಗ್ಗೆ ಮಾಹಿತಿ ಕಲೆಹಾಕಿತ್ತು.

ಅನುಮಾನದ ಆಧಾರದಲ್ಲೇ ಇಬ್ಬರು ಯುವಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಧಾರಾವಾಹಿಯೊಂದರ ನಿರ್ಮಾಪಕ ರಾಜುವಿನ ಹೆಸರನ್ನು ಅವರೇ ಬಾಯ್ಬಿಟ್ಟಿದ್ದರು. ಅಕ್ರಮದ ರೂವಾರಿ ಆತನೇ ಎಂಬುದಕ್ಕೆ ಪುರಾವೆಗಳು ಸಿಗುತ್ತಿದ್ದಂತೆ ಪೊಲೀಸರು ಬಂಧಿಸಿದರು.

‘ವಾಹಿನಿ ಹಾಗೂ ಅವುಗಳಲ್ಲಿ ಪ್ರಸಾರವಾಗುವ ಧಾರಾವಾಹಿ, ಕಾರ್ಯಕ್ರಮಗಳಿಗೆ ಜಾಹೀರಾತು ನೀಡಲು ಟಿಆರ್‌ಪಿ ಮಾನದಂಡ. ಇದನ್ನು ನಿರ್ಧರಿಸುವ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದು ಇದೇ ಮೊದಲು. ತನಿಖೆಗೆ ವಿಶೇಷ ತಂಡ ರಚಿಸಿದ್ದೇವೆ’ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಸತೀಶ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆರೋಪಿಗಳು ಕಸ್ಟಡಿಗೆ: ಪ್ರಕರಣದಡಿ ನಿರ್ಮಾಪಕ ರಾಜು, ಆತನ ಸಹಚರರಾದ ಸುರೇಶ್, ಜೆಮ್ಸಿ, ಸುಭಾಷ್ ಹಾಗೂ ಮೈಸೂರಿನ ಮಧು ಎಂಬುವವ
ರನ್ನು ಪೊಲೀಸರು ಬಂಧಿಸಿದ್ದರು. ಅವರ ಪೈಕಿ ರಾಜು ಹಾಗೂ ಸುರೇಶ್‌ನನ್ನು ವಿಚಾರಣೆಗಾಗಿ ಜ. 25ರವರೆಗೆ ಸಿಸಿಬಿ ಪೊಲೀಸರ ಕಸ್ಟಡಿಗೆ ನೀಡಲಾಗಿದೆ.

‘ರಾಜುವೇ ‍ಪ್ರಕರಣದ ಪ್ರಮುಖ ಆರೋಪಿ ಎಂದು ತಿಳಿದಿದ್ದೇವೆ. ಆತನ ಹಿಂದೆ ಹಲವರು ಇದ್ದರೂ ಇರಬಹುದು. ವಿಚಾರಣೆ ಬಳಿಕವೇ ಮತ್ತಷ್ಟು ಮಾಹಿತಿ ದೊರೆಯಬಹುದು’ ಎಂದರು.

‘ಮೀಟರ್‌ ಇರುವ ಪ್ರತಿ ಮನೆಗೂ ಹೋಗಿ ಮಾಹಿತಿ ಕಲೆಹಾಕುವ ಕೆಲಸ ನಡೆಯುತ್ತಿದೆ. ರಾಜು ಹಾಗೂ ಆತನ ಸಹಚರರು ಯಾರು ಎಂಬುದೇ ಗೊತ್ತಿಲ್ಲವೆಂದು ಕೆಲ ಮನೆಯವರು ಹೇಳುತ್ತಿದ್ದಾರೆ. ಯುವಕನೊಬ್ಬ ಬಂದು ವಾಹಿನಿ ನೋಡುವಂತೆ ಹೇಳುತ್ತಿದ್ದ. ಹಣ ಕೊಡುತ್ತಿದ್ದ ಎಂದಷ್ಟೇ ಅವರು ತಿಳಿಸಿದ್ದಾರೆ. ಆ ಯುವಕರನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದರು.

ಬಾರ್ಕ್‌ ಸಂಸ್ಥೆಗೆ ಇ–ಮೇಲ್‌

ಟಿಆರ್‌ಪಿ ನಿಗದಿಗೆ ಅನುಸರಿಸುವ ಪ್ರಕ್ರಿಯೆ ಹಾಗೂ ಸಂಸ್ಥೆಯಡಿ ರಾಜ್ಯದಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಸಿಸಿಬಿ ಪೊಲೀಸರು, ಬಾರ್ಕ್‌ ಸಂಸ್ಥೆಗೆ ಇ–ಮೇಲ್‌ ಕಳುಹಿಸಿದ್ದಾರೆ.

‘ಅಕ್ರಮದಲ್ಲಿ ಬಾರ್ಕ್‌ ಸಂಸ್ಥೆಯ ಹಾಲಿ ಹಾಗೂ ಮಾಜಿ ನೌಕರರೂ ಭಾಗಿಯಾಗಿರುವ ಶಂಕೆ ಇದೆ. ಹೀಗಾಗಿ ಅವರೆಲ್ಲರ ಪೂರ್ವಾಪರದ ಬಗ್ಗೆ ಮಾಹಿತಿ ಕೇಳಿದ್ದೇವೆ. ಅದು ಕೈ ಸೇರಿದ ಬಳಿಕ ಪರಿಶೀಲನೆ ನಡೆಸುತ್ತೇವೆ. ಅಗತ್ಯಬಿದ್ದರೆ, ಬಾರ್ಕ್‌ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಪಡೆದುಕೊಳ್ಳಲಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.