ADVERTISEMENT

‘ಕೋಮು ಗಲಭೆಯಲ್ಲಿ ಒಂಬತ್ತು ಹಿಂದೂಗಳ ಹತ್ಯೆ’

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 19:30 IST
Last Updated 24 ಜನವರಿ 2018, 19:30 IST
ಗೃಹ ಸಚಿವ ರಾಮಲಿಂಗಾರೆಡ್ಡಿ
ಗೃಹ ಸಚಿವ ರಾಮಲಿಂಗಾರೆಡ್ಡಿ   

ಬೆಂಗಳೂರು: ‘ರಾಜ್ಯದಲ್ಲಿ ಕೋಮು ದ್ವೇಷಕ್ಕೆ ಒಂಬತ್ತು ಮಂದಿ ಹಿಂದೂಗಳ ಹತ್ಯೆಯಾಗಿದೆ. ಆದರೆ, ಬಿಜೆಪಿ 23 ಹಿಂದೂಗಳ ಹತ್ಯೆ ನಡೆದಿರುವುದಾಗಿ ಸುಳ್ಳು ಹೇಳುತ್ತಿದೆ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾಹಿತಿ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಒಂಬತ್ತು ಹಿಂದುಗಳ ಹತ್ಯೆಯಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳ ಕೈವಾಡ ಇದೆ. ಕಾಂಗ್ರೆಸ್‌ ಪಕ್ಷದ ಒಬ್ಬ ಕಾರ್ಯಕರ್ತನೂ ಈ ಕೃತ್ಯಗಳಲ್ಲಿ ಭಾಗಿಯಾಗಿಲ್ಲ’ ಎಂದರು.

ಸಂಸದೆ ಶೋಭಾ ಕರಂದ್ಲಾಜೆ 23 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ಗೆ ಪತ್ರ ಬರೆದಿದ್ದರು. ಈ ಎಲ್ಲ ಪ್ರಕರಣಗಳ ತನಿಖೆ ಪೂರ್ಣಗೊಂಡಿದ್ದು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಗಳನ್ನೂ ಸಲ್ಲಿಸಲಾಗಿದೆ. 23 ಪ್ರಕರಣಗಳ ಪೈಕಿ 10  ಕೊಲೆಗಳು ಖಾಸಗಿ ವಿಚಾರಕ್ಕೆ ನಡೆದಿದೆ. ಇಬ್ಬರದು ಆತ್ಮಹತ್ಯೆ ಪ್ರಕರಣ, ಮತ್ತಿಬ್ಬರು ಅವಘಡದಲ್ಲಿ ಮೃತಪಟ್ಟಿದ್ದು, ಒಬ್ಬರು ಜೀವಂತ ಇದ್ದಾರೆ ಎಂದು ವಿವರಿಸಿದರು.

ADVERTISEMENT

‘ನಾವು ನೀಡಿರುವುದು ಸುಳ್ಳು ಮಾಹಿತಿ ಅಲ್ಲ. ಇವುಗಳಿಗೆ ಸಂಬಂಧಿಸಿದ ತನಿಖಾ ವರದಿಗಳನ್ನು ಅಧಿವೇಶನದಲ್ಲಿ ಮಂಡಿಸಿದ್ದೇನೆ. ಮಾಹಿತಿ ಹಕ್ಕು ಕಾಯ್ದೆಯಡಿ ಯಾರಾದರೂ ಪಡೆದುಕೊಳ್ಳಬಹುದು’ ಎಂದರು.

‘ಶೋಭಾ ಕರಂದ್ಲಾಜೆ ಪತ್ರ ಆಧರಿಸಿ ಕೇಂದ್ರದ ಗೃಹ ಸಚಿವ ರಾಜನಾಥಸಿಂಗ್‌ ರಾಜ್ಯ ಸರ್ಕಾರದಿಂದ ಈವರೆಗೆ ಮಾಹಿತಿ ಕೇಳಿಲ್ಲ. ಆದರೆ, ಸಾರ್ವಜನಿಕ ಹಿತದೃಷ್ಟಿಯಿಂದ ನಾನೇ ಎಲ್ಲಾ ಪ್ರಕರಣಗಳ ದೋಷಾರೋಪ ಪಟ್ಟಿಗಳನ್ನು ಗೃಹ ಸಚಿವರಿಗೆ ಕಳುಹಿಸುತ್ತೇನೆ. ಅದರ ಒಂದು ಪ್ರತಿಯನ್ನು ಬಿ.ಎಸ್‌.ಯಡಿಯೂರಪ್ಪ ಅವರಿಗೂ ಕಳುಹಿಸುತ್ತೇನೆ’ ಎಂದರು.

ಬಿಜೆಪಿ ವಿರುದ್ಧ ಮಾನನಷ್ಟ: ಬಿಜೆಪಿ ನಾಯಕರು ಹಿಂದುಗಳ ಹತ್ಯೆಗೆ ಸಂಬಂಧಿಸಿದಂತೆ ಆಧಾರ ರಹಿತ ಮತ್ತು ಕೋಮು ಪ್ರಚೋದನೆಯ ಹೇಳಿಕೆಗಳನ್ನು ನೀಡಿದರೆ, ಅವರ ವಿರುದ್ಧ ಪೊಲೀಸರಿಗೆ ದೂರು ನೀಡುವುದರ ಜೊತೆಗೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಕೆ‍ಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್‌  ಎಚ್ಚರಿಕೆ ನೀಡಿದರು.

‘ಈಗಾಗಲೇ ಸಿ.ಟಿ.ರವಿ ಮತ್ತು ಸುನೀಲ್‌ ಕುಮಾರ್‌ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇನೆ. ಇನ್ನು ಮುಂದೆ ಜಿಹಾದಿಗಳು ಎಂದು ಕರೆಯುವುದನ್ನು ನಿಲ್ಲಿಸದಿದ್ದರೆ, ನಾವು ಸುಮ್ಮನಿರಲು ಸಾಧ್ಯವಿಲ್ಲ. ಕೋಮು ಪ್ರಚೋದನೆ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ, ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿ’ ಎಂದರು.

ಸಂಸದೆ ಶೋಭಾ ಪತ್ರದಲ್ಲಿ ಸುಳ್ಳು
ಬಿಜೆಪಿಯ ಆರೋಪ ಮತ್ತು ವಾಸ್ತವ ಸಂಗತಿಯ ಬಗ್ಗೆ ರಾಮಲಿಂಗಾರೆಡ್ಡಿ ಬಿಡುಗಡೆ ಮಾಡಿರುವ ಪಟ್ಟಿಯ ಸಾರಾಂಶ ಈ ರೀತಿ ಇದೆ.

ಪ್ರಶಾಂತ್ ಪೂಜಾರಿಯನ್ನು ಕೋಮು ದ್ವೇಷದಿಂದ ಕೊಲ್ಲಲಾಗಿದೆ. ಎಲ್ಲ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯದ ಮುಂದೆ  ಹಾಜರು ಪಡಿಸಲಾಗಿದೆ.

ಮೈಸೂರು ರಾಜು ಮಸೀದಿ ಮುಂದೆ ಹಂದಿ ಮಾಂಸ ಎಸೆದಿದ್ದರಿಂದ ಪ್ರತಿಕಾರದ ಹಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ.  ರಾಜೇಶ್‌ ಕೋಟ್ಯಾನ್‌ ಹತ್ಯೆಗೆ ಸಂಬಂಧಿಸಿದಂತೆ ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಮಡಿಕೇರಿ ಪ್ರವೀಣ್‌ ಪೂಜಾರಿ, ಚರಣ್‌ ಪೂಜಾರಿ, ಶಿವಮೊಗ್ಗ ವಿಶ್ವನಾಥ್‌, ರುದ್ರೇಶ್‌ ಮತ್ತು  ಶರತ್‌ ಮಡಿವಾಳ ಅವರ ಕೊಲೆಗಳು ಕೋಮು ಗಲಭೆಯಿಂದ ಆಗಿವೆ. ಈ ಸಂಬಂಧ ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಡಿ.ಕೆ.ಕುಟ್ಟಪ್ಪ ಹಿಂದೂ– ಮುಸ್ಲಿಂ ಗಲಭೆ ವೇಳೆ ಮೇಲಿನಿಂದ ಬಿದ್ದು ಸತ್ತು ಹೋಗಿದ್ದಾರೆ. ರಾಜು ಮಡಿಕೇರಿ ಆಸ್ಪತ್ರೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಾಮನ ಪೂಜಾರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅತ್ತಿಬೆಲೆ ಅಶ್ವತ್‌ಕುಮಾರ್‌, ಯೋಗೇಶ್‌ ಗೌಡ, ಸಿ.ಎನ್‌.ಶ್ರೀನಿವಾಸ್, ಕಾರ್ತಿಕ್‌ ರಾಜ್‌, ಚಿಕ್ಕತಿಮ್ಮೇಗೌಡ, ಶ್ರೀನಿವಾಸ್‌ ಪ್ರಸಾದ್‌, ಹರೀಶ್‌, ಮಹಾದೇವ್‌ ಕಾಳೆ, ತಿಪ್ಪೇಶ್‌, ಬಂಡಿ ರಮೇಶ್‌ ಅವರು ರಾಜಕೀಯ/ ವೈಯಕ್ತಿಕ ಕಾರಣಕ್ಕೆ ಕೊಲೆಯಾಗಿದ್ದಾರೆ.

ಅಶೋಕ ಪೂಜಾರಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಬದುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.