ADVERTISEMENT

ಬಂಡೀಪುರದಲ್ಲಿ 2 ಹುಲಿ, 1 ಆನೆ ಸಾವು

​ಪ್ರಜಾವಾಣಿ ವಾರ್ತೆ
Published 25 ಜನವರಿ 2018, 19:30 IST
Last Updated 25 ಜನವರಿ 2018, 19:30 IST
ಬಂಡೀಪುರ ರಾಷ್ಟ್ರೀಯ ಉದ್ಯಾನದ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಗುರುವಾರ ಪತ್ತೆಯಾದ ಹುಲಿಗಳ ಮೃತದೇಹಗಳು
ಬಂಡೀಪುರ ರಾಷ್ಟ್ರೀಯ ಉದ್ಯಾನದ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಗುರುವಾರ ಪತ್ತೆಯಾದ ಹುಲಿಗಳ ಮೃತದೇಹಗಳು   

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದ ಗೋಪಾಲಸ್ವಾಮಿ ಬೆಟ್ಟ ವಲಯದ ಹಿರಿಕೆರೆ ಪ್ರದೇಶದಲ್ಲಿ ಎರಡು ಹುಲಿಗಳು ಮತ್ತು ಒಂದು ಆನೆ ಮೃತದೇಹ ಗುರುವಾರ ಪತ್ತೆಯಾಗಿವೆ.

4 ದಿನಗಳ ಹಿಂದೆ ಮೃತಪಟ್ಟಿರುವ 3 ವರ್ಷದ ಗಂಡು ಹುಲಿ ಮತ್ತು 2 ವರ್ಷದ ಹೆಣ್ಣು ಹುಲಿಯ ಕಳೇಬರ ಕೊಳೆತ ಸ್ಥಿತಿಯಲ್ಲಿವೆ. ಹುಲಿ ಮೃತದೇಹ ಸಿಕ್ಕಿರುವ 50 ಮೀಟರ್ ದೂರದಲ್ಲಿ ಹೆಣ್ಣಾನೆ ಕಳೇಬರ ಕಂಡುಬಂದಿದೆ. ಕೆಲವು ಭಾಗಗಳನ್ನು ಪ್ರಾಣಿಗಳು ತಿಂದು ಹಾಕಿವೆ. ಆನೆಯು ಒಂದು ವಾರದ ಹಿಂದೆಯೇ ಮೃತಪಟ್ಟಿರಬಹುದು ಎಂದು ಅಂದಾಜು ಮಾಡಲಾಗಿದೆ.

'ವಿಷ ಹಾಕಿರುವ ಮಾಂಸವನ್ನು ತಿಂದು ಹುಲಿಗಳು ಮೃತಪಟ್ಟಿರುವ ಸಾಧ್ಯತೆ ಇದೆ. ಆದರೆ, ಆನೆಯ ಸಾವಿಗೆ ಕಾರಣ ತಿಳಿಯುತ್ತಿಲ್ಲ. ಅರಣ್ಯ ವ್ಯಾಪ್ತಿಯ ಸುತ್ತಮುತ್ತಲ ಗ್ರಾಮಗಳ ಜನರು ಕಾಡಿನಲ್ಲಿ ದನಕರುಗಳನ್ನು ಮೇಯಿಸಿ ಕೆರೆಯಲ್ಲಿ ನೀರು ಕುಡಿಸುತ್ತಿದ್ದರು. ಇಲ್ಲಿ ಜಾನುವಾರುಗಳನ್ನು ಬಿಡದಂತೆ ತಡೆದು ಕೆಲ ದಿನಗಳ ಹಿಂದೆ ಕಾವಲುಗಾರನನ್ನು ನೇಮಿಸಲಾಗಿತ್ತು. ಇದರಿಂದ ಕೋಪಗೊಂಡ ಕೆಲವರು ಮಾಂಸದಲ್ಲಿ ವಿಷಹಾಕಿ ಹುಲಿ ಕೊಂದಿರಬಹುದು' ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಮರಣೋತ್ತರ ಪರೀಕ್ಷೆ ವೇಳೆ ಹುಲಿಯ ಎಲ್ಲ ಉಗುರುಗಳು, ಹಲ್ಲುಗಳು ಸಿಕ್ಕಿವೆ. ಬೇಟೆಗಾರರು ಹುಲಿಗಳನ್ನು ಕೊಂದಿರುವ ಸಾಧ್ಯತೆ ಕಡಿಮೆ. ತಲೆ ಭಾಗ ಸಂಪೂರ್ಣ ಕೊಳೆತಿರುವುದರಿಂದ ಹುಲಿಗಳು ಪರಸ್ಪರ ಕಾದಾಡಿ ಸಾವನ್ನಪ್ಪಿವೆ ಎಂಬ ತೀರ್ಮಾನಕ್ಕೂ ಬರಲಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

‘ಸಾವಿಗೆ ನಿಖರ ಕಾರಣ ತಿಳಿದುಕೊಳ್ಳಲು ಹುಲಿಗಳ ಅಂಗಾಂಗಗಳ ಮಾದರಿಯನ್ನು ಸಂಗ್ರಹಿಸಲಾಗಿದೆ. ಅವುಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮತ್ತು ಡಿಎನ್‌ಎ ಪರೀಕ್ಷೆಗಾಗಿ ರಾಷ್ಟ್ರೀಯ ಜೀವ ವಿಜ್ಞಾನಗಳ ಕೇಂದ್ರಕ್ಕೆ ಕಳುಹಿಸಲಾಗಿದೆ. ನಿಯಮದ ಪ್ರಕಾರ ಮರಣೋತ್ತರ ಪರೀಕ್ಷೆ ನಡೆಸಿ, ದೇಹವನ್ನು ಸುಡಲಾಗಿದೆ.’ ಎಂದು ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ್ ತಿಳಿಸಿದರು.

ಆನೆಗಳ ಸರಣಿ ಸಾವು: ಬಂಡೀಪುರ ವ್ಯಾಪ್ತಿಯಲ್ಲಿ ಈ ತಿಂಗಳಲ್ಲಿ ಮೂರು ಮರಿಯಾನೆಗಳು ಮತ್ತು ಒಂದು ಗಂಡಾನೆ ಅನಾರೋಗ್ಯದಿಂದ ಸತ್ತಿದ್ದವು. ಗುರುವಾರ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ಸತ್ತ ಆನೆಗಳ ಸಂಖ್ಯೆ 5ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.