ADVERTISEMENT

ಸಂವಿಧಾನವೇ ನನ್ನ ಧರ್ಮ ಮತ್ತು ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದೇ ನನ್ನ ರಾಜಧರ್ಮ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 7:44 IST
Last Updated 26 ಜನವರಿ 2018, 7:44 IST
ಸಂವಿಧಾನವೇ ನನ್ನ ಧರ್ಮ ಮತ್ತು ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದೇ ನನ್ನ ರಾಜಧರ್ಮ
ಸಂವಿಧಾನವೇ ನನ್ನ ಧರ್ಮ ಮತ್ತು ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದೇ ನನ್ನ ರಾಜಧರ್ಮ   

ಬೆಂಗಳೂರು:  69ನೇ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕಾಶವಾಣಿಯಲ್ಲಿ ರಾಜ್ಯದ ಜನತೆಗೆ ಸಂದೇಶ ನೀಡಿದ್ದಾರೆ.

ಮುಖ್ಯಮಂತ್ರಿಯವರ ಸಂದೇಶ ಇಲ್ಲಿದೆ
ಸ್ವತಂತ್ರ ಭಾರತದ ಇತಿಹಾಸದಲ್ಲಿ ಜನವರಿ 26ಕ್ಕೆ ವಿಶೇಷವಾದ ಮಹತ್ವ ಇದೆ. 1947 ರ ಆಗಸ್ಟ್ 15 ನಾವು ಬ್ರಿಟಿಷರ ಗುಲಾಮಗಿರಿಯಿಂದ ಬಿಡುಗಡೆ ಪಡೆದ ಮಹತ್ವದ ದಿನವಾದರೆ, 1950 ರ ಜನವರಿ 26 ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಸೋದರತ್ವ ಮತ್ತು ಜಾತ್ಯತೀತ ಮೌಲ್ಯಗಳ ಆಧಾರದಲ್ಲಿ ದೇಶವನ್ನು ಕಟ್ಟಲು ಸಂಕಲ್ಪಮಾಡಿದ ನಿರ್ಣಾಯಕ ದಿನ. ಸಂವಿಧಾನದ ಈ ಮೂಲಭೂತ ಆಶಯಗಳಿಗೆ ನಮ್ಮ ಸರ್ಕಾರ ಕೂಡಾ ಬದ್ಧವಾಗಿದೆ.

“ ನಮ್ಮ ಸ್ವರಾಜ್ಯ ಬ್ರಿಟಿಷ್ ಸಂಸತ್ತಿನ ಉಡುಗೊರೆಯಾಗಿರುವುದಿಲ್ಲ, ಅದು ಭಾರತದ ಸಂಪೂರ್ಣ ಅಭಿವ್ಯಕ್ತಿಯ ಘೋಷಣೆ ಆಗಿರುತ್ತದೆ. ಅದು ನಮ್ಮ ದೇಶದ ಉತ್ಕೃಷ್ಟ ರಕ್ತದಿಂದ ಪಡೆದ ನಿಧಿಯಾಗಿರುತ್ತದೆ” ಎಂದು ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯಪೂರ್ವದಲ್ಲಿ ಭವಿಷ್ಯ ನುಡಿದಿದ್ದರು. ಆ ನಿಧಿ ದೇಶದ ಜನರ ಬದುಕಲ್ಲಿ ಸಾಕಾರಗೊಂಡಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವ ಸಂವಿಧಾನದ ಮೂಲಕ.
ನಮ್ಮಲ್ಲಿ ದೇಶದ ಅರಿವನ್ನೂ ದೇಶಾಭಿಮಾನದ ಕಿಚ್ಚನ್ನೂ ಹೊತ್ತಿಸಿದ್ದು ರಾಷ್ಟ್ರೀಯ ಚಳವಳಿ. ಅದರ ನೇತೃತ್ವವನ್ನು ಹೊತ್ತಿದ್ದು ಮಹಾತ್ಮ ಗಾಂಧೀಜಿಯವರ ಮುಂದಾಳತ್ವದ ರಾಷ್ಟ್ರೀಯ ಕಾಂಗ್ರೆಸ್. ಈ ರಾಷ್ಟ್ರೀಯ ಚಳವಳಿಯ ಭದ್ರ ಬುನಾದಿಯ ಮೇಲೆ ರೂಪುಗೊಂಡಿದ್ದೇ ಭಾರತದ ಸಂವಿಧಾನ ಮತ್ತು ಅದನ್ನು ಆಧರಿಸಿ ನಡೆದುಕೊಂಡು ಬರುತ್ತಿರುವ ಭಾರತದ ಪ್ರಜಾಪ್ರಭುತ್ವ.

ADVERTISEMENT

ಗಣರಾಜ್ಯೋತ್ಸವದ ಶುಭ ದಿನವಾದ ಇಂದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಒಂದಿಷ್ಟು ಚಿಂತನೆಗಳನ್ನು ನನ್ನ ನಾಡಿನ ಜನತೆಯಲ್ಲಿ ಹಂಚಿಕೊಳ್ಳಬೇಕೆನಿಸುತ್ತಿದೆ.

ಭಾರತದ ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ಚಿಂತನೆ, ಅಭಿವ್ಯಕ್ತಿ ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿಪಡಿಸಿ ಎಲ್ಲರ ನಡುವೆ ಭಾತೃತ್ವವನ್ನು ಉದ್ದೀಪನಗೊಳಿಸುವುದೇ ಸಂವಿಧಾನದಮೂಲ ಆಶಯವಾಗಿದೆ.

‘ಸಂವಿಧಾನವೇ ನನ್ನ ಧರ್ಮ ಮತ್ತು ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದೇ ನನ್ನ ರಾಜಧರ್ಮ’ಎಂದು ಮುಖ್ಯಮಂತ್ರಿಯಾದ ನಾನು ತ್ರಿಕರಣಪೂರ್ವಕವಾಗಿ ನಂಬಿಕೊಂಡು ಬಂದಿದ್ದೇನೆ. ಅಭಿವೃದ್ಧಿಯ ಬಾಗಿಲುಗಳನ್ನು ತೆರೆಯಲು ರಾಜಕೀಯ ಅಧಿಕಾರ ಮುಖ್ಯ ಕೀಲಿ ಕೈ ಎಂಬ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕಿವಿಮಾತು ನನ್ನ ರಾಜಕೀಯ ಜೀವನದ ನಿಲುವು ಕೂಡಾ ಆಗಿದೆ.

ವಿಶ್ವಕ್ಕೆ ಮಾದರಿ ಸ್ವರೂಪದ ಇಂತಹದ್ದೊಂದು ಸಂವಿಧಾನವನ್ನು ನೀಡಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡು ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಸಂವಿಧಾನ ಎನ್ನುವುದು ಪ್ರಜಾಪ್ರಭುತ್ವದ ಆತ್ಮ. ಸಂವಿಧಾನ ಇಲ್ಲದ ಪ್ರಜಾಪ್ರಭುತ್ವ, ಆತ್ಮ ಇಲ್ಲದ ಜೀವ. ಇತ್ತೀಚೆಗೆ ಸಂವಿಧಾನ ಬದಲಾವಣೆಯ ಕೂಗು ಅಲ್ಲಲ್ಲಿ ಕೇಳಿಬರುತ್ತಿದೆ. ಇದನ್ನು ಪ್ರಜಾಪ್ರಭುತ್ವ ಪ್ರೇಮಿಗಳೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ. ಈ ಖಂಡನೆಗೆ ನಾನೂ ದನಿಗೂಡಿಸುತ್ತೇನೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಸಂವಿಧಾನದ ಬಗ್ಗೆ ಗೌರವ ಮತ್ತು ಅದರ ಆಶಯಗಳ ಬಗ್ಗೆ ಬದ್ಧತೆ ಇರಲೇಬೇಕು. ಸಂವಿಧಾನೇತರ ಶಕ್ತಿಗಳಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾಗ ಇಲ್ಲ. ಸಂವಿಧಾನದ ಬಗ್ಗೆ ಭಿನ್ನಾಭಿಪ್ರಾಯ ಇಟ್ಟುಕೊಂಡು ಸಂಸದೀಯ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಾರದು. ಇದು ಸಂವಿಧಾನಕ್ಕೆ ಮಾಡುವ ಅಪಚಾರ ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಕೂಡಾ ಹೌದು.

ಡಾ.ಬಿ.ಆರ್.ಅಂಬೇಡ್ಕರ್ 1950ರ ಜನವರಿ 26ರಂದು ಸಂವಿಧಾನ ಜಾರಿಗೊಳ್ಳುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಸದಾ ನೆನಪಿಡಬೇಕಾದಂತಹ ಒಂದು ಮಾತನ್ನು ಹೇಳಿದ್ದರು. “ ಈ ದಿನ ಭಾರತೀಯರಾದ ನಾವು ಒಂದು ವೈರುಧ್ಯಗಳ ಘಟ್ಟಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ರಾಜಕೀಯವಾಗಿ ಸಮಾನತೆಯನ್ನು ಪ್ರತಿಪಾದಿಸುತ್ತಾ ಹೋಗುತ್ತಿರುತ್ತೇವೆ. ಆದರೆ ಅದೇ ವೇಳೆಗೆ ಸಾಮಾಜಿಕ ಮತ್ತು ಆರ್ಥಿಕ ರಚನೆಗಳಲ್ಲಿ ಅಸಮಾನತೆ ಮುಂದುವರಿಯುತ್ತಲೇ ಇರುತ್ತದೆ. ಇಂತಹ ವೈರುಧ್ಯಗಳು ಮುಂದುವರಿದುಕೊಂಡು ಹೋದರೆ ನಾವು ಶ್ರಮವಹಿಸಿ ಕಟ್ಟಿದ ಪ್ರಜಾಪ್ರಭುತ್ವದ ಸೌಧವನ್ನೇ ಅಸಮಾನತೆಯಿಂದ ಬಾಧಿತರಾಗುವ ಶೋಷಿತರೇ ಕೆಡವಿಹಾಕಬಹುದು ಎಂಬ ಎಚ್ಚರಿಕೆಯನ್ನು ಅಂಬೇಡ್ಕರ್ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಗಣರಾಜ್ಯದ ದಿನ ನಾವು ಮುಖ್ಯವಾದ ಎರಡು ಜವಾಬ್ದಾರಿಗಳನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಮೊದಲನೆಯದು ಈ ದೇಶದಲ್ಲಿ ರಾಜಕೀಯ ಪ್ರಜಾಪ್ರಭುತ್ವದ ರಕ್ಷಣೆ, ಆ ಮೂಲಕ ದೇಶದ ಸಾರ್ವಭೌಮತೆಯನ್ನು ಕಾಪಾಡುವುದು. ಎರಡನೆಯದಾಗಿ ಆರ್ಥಿಕ ಪ್ರಜಾಪ್ರಭುತ್ವವನ್ನು ಸಾಧಿಸುತ್ತಾ ಹೋಗುವುದು.

ದೇಶ ನಿಜಕ್ಕೂ ಬಲಗೊಳ್ಳುವುದು ಮತ್ತು ಸದೃಢಗೊಳ್ಳುವುದು ಆರ್ಥಿಕ ಪ್ರಜಾಪ್ರಭುತ್ವದಿಂದ. ಇದನ್ನು ಸಾಧಿಸಬೇಕೆಂದರೆ ಸಾವಿರಾರು ಜಾತಿಗಳಾಗಿ, ಮೇಲು ಕೀಳು ಎಂಬ ತಾರತಮ್ಯಗಳಲ್ಲಿ ಛಿದ್ರವಾಗಿರುವ ಈ ದೇಶದಲ್ಲಿ ಸಾಮಾಜಿಕ ನ್ಯಾಯದ ಮೂಲಕ ಆರ್ಥಿಕ ಸಮಾನತೆಯನ್ನು ಸ್ಥಾಪಿಸಿ ದೇಶವನ್ನು ಆಂತರಿಕವಾಗಿ ಸದೃಡಗೊಳಿಸಬೇಕಾಗಿದೆ. ಈ ಪ್ರಯತ್ನದ ಹಾದಿಯಲ್ಲಿ ನಮ್ಮ ಸರ್ಕಾರ ಮುನ್ನಡೆದಿದೆ.

ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ಬದುಕಿನ ಪ್ರಾಥಮಿಕ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗದ ಭಾಗ್ಯ ನೀಡಿದ್ದೇವೆ. ಬಡವ-ಬಲ್ಲಿದನೆಂಬ ತಾರತಮ್ಯ ಇಲ್ಲದೆ, ಜಾತಿ-ಧರ್ಮಗಳ ಭೇದ ಇಲ್ಲದೆ ಎಲ್ಲರೂ ನಿರ್ಭಯವಾಗಿ ಘನತೆ ಮತ್ತು ಗೌರವವದಿಂದ ಬದುಕುವ ವಾತಾವರಣ ನಿರ್ಮಿಸಿದ್ದೇವೆ. ಕೃಷಿ ಸಂಪತ್ತು ಹೆಚ್ಚಿದೆ, ಉದ್ಯಮ ಕ್ಷೇತ್ರದಲ್ಲಿ ಪ್ರಗತಿಯಾಗಿದೆ, ದುಡಿಯುವ ಕೈಗಳಿಗೆ ಉದ್ಯೋಗ ಸಿಗುತ್ತಿದೆ, ಸಂಪತ್ತು, ಅಧಿಕಾರ ಮತ್ತು ಅವಕಾಶ ಸಮನಾಗಿ ಹಂಚಿಕೆಯಾಗುವಂತೆ ನೀತಿಯನ್ನು ರೂಪಿಸಿದ್ದೇವೆ. ಈ ಮೂಲಕ ಸಮೃದ್ಧ, ಸ್ವಾಭಿಮಾನಿ ಮತ್ತು ಸ್ವಾವಲಂಬಿಯಾದ ನವಕರ್ನಾಟಕ ನಿರ್ಮಾಣವಾಗುತ್ತಿದೆ. ಇದನ್ನು ‘ಕರ್ನಾಟಕ ಅಭಿವೃದ್ದಿ ಮಾದರಿ’ ಎಂದು ಹೆಮ್ಮೆಯಿಂದ ಹೇಳುತ್ತಿದ್ದೇನೆ.

ಜಾತ್ಯತೀತತೆ ಸಂವಿಧಾನದ ಮುಖ್ಯ ಆಶಯಗಳಲ್ಲಿ ಒಂದು. ಇದು ಅನ್ಯಧರ್ಮವನ್ನು ದ್ವೇಷಿಸದೆ ಸ್ವಂತ ಧರ್ಮವನ್ನು ಪ್ರೀತಿಸುವ ಉದಾತ್ತ ಮಾನವೀಯ ಗುಣ. ಜಾತಿ,ಧರ್ಮವನ್ನು ಮೀರಿ ‘ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಕವಿವಾಣಿ ಕೂಡಾ ಸಂವಿಧಾನದ ಈ ಆಶಯವನ್ನೇ ನೆನಪು ಮಾಡಿಕೊಡುತ್ತದೆ.

ಧಾರ್ಮಿಕ ರಾಷ್ಟ್ರೀಯತೆಯ ಮೂಲಕ ದೇಶ ಕಟ್ಟಲು ಸಾಧ್ಯವಾಗದು. ಇದು ಬಹುಧರ್ಮ,ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಪ್ರತಿಪಾದಿಸುವ ಪ್ರಜಾಪ್ರಭುತ್ವಕ್ಕೆ ಮಾರಕವಾದುದು. ಪ್ರಜಾಪ್ರಭುತ್ವವನ್ನು ನಂಬಿರುವ ಯಾರೂ ಇದನ್ನು ಒಪ್ಪಲು ಸಾಧ್ಯ ಇಲ್ಲ.

ವೈಚಾರಿಕ ಮತ್ತು ಸಾಮಾಜಿಕ ಸಹಿಷ್ಣುತೆಯೇ ಪ್ರಜಾಪ್ರಭುತ್ವದ ಸೌಂದರ್ಯ. ಇತ್ತೀಚೆಗೆ ‘ಅಸಹಿಷ್ಣುತೆ’ ಎನ್ನುವುದು ರಾಷ್ಟ್ರೀಯ ಚರ್ಚೆಯ ಕೇಂದ್ರ ಸ್ಥಾನಕ್ಕೆ ಬಂದಿದೆ. ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿ ಸಾಂಸ್ಕೃತಿಕವಾಗಿ ದೇಶವನ್ನು ಕಟ್ಟಲು ಪ್ರಯತ್ನಿಸುತ್ತಿರುವ ಸಾಹಿತಿಗಳು,ಕಲಾವಿದರು,ಬುದ್ದಿಜೀವಿಗಳಿಂದ ಹಿಡಿದು ಸಾಮಾನ್ಯ ಮನುಷ್ಯನ ವರೆಗೆ ಎಲ್ಲರೂ ದೇಶಾದ್ಯಂತ ‘ಅಸಹಿಷ್ಣುತೆಯ ವಿರುದ್ಧ ದನಿ ಎತ್ತತೊಡಗಿದ್ದಾರೆ. ಈ ರೀತಿ ದನಿ ಎತ್ತುವವರ ದಮನಕಾರ್ಯವೂ ನಡೆಯುತ್ತಿದೆ.ಅವರನ್ನು ನಿಂದಿಸಿ ಹಂಗಿಸಿ ನೈತಿಕವಾಗಿ ಕುಸಿದುಹೋಗುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ. ಇದು ಪ್ರಜಾತಾಂತ್ರಿಕ ನಡೆ ಅಲ್ಲ.

ಕೇವಲ ರಾಜಕೀಯದಿಂದಾಗಲೀ ಮತಧರ್ಮದ ಚಿಂತನೆಗಳಿಂದಾಗಲೀ ದೇಶದ ಅಭಿವೃದ್ಧಿ ಸಾಧ್ಯವಾಗದು. ನಿಜವಾಗಿಯೂ ದೇಶ ಅಭಿವೃದ್ಧಿ ಹೊಂದುವುದು ವೈಜ್ಞಾನಿಕ ಪ್ರಗತಿ, ತಂತ್ರಜ್ಞಾನದ ಅಭಿವೃದ್ದಿ ಮತ್ತು ವೈಚಾರಿಕ ಚಿಂತನೆಯಿಂದ.

‘’ರಾಜಕೀಯ ಮತ್ತು ಧರ್ಮ ಎರಡೂ ಹಳತಾಗಿಬಿಟ್ಟಿವೆ. ಈ ಕಾಲ ವಿಜ್ಞಾನ ಮತ್ತು ಆಧ್ಯಾತ್ಮಿಕತೆಯನ್ನು ಅಪ್ಪಿಕೊಳ್ಳುವ ಕಾಲ’ ಎಂದು ದೇಶದ ಮೊದಲ ಪ್ರಧಾನಿ ಮತ್ತು ಮುತ್ಸದ್ದಿ ರಾಜಕಾರಣಿ ಪಂಡಿತ ಜವಾಹರಲಾಲ ನೆಹರೂ ಹೇಳಿದ್ದರು.

ಈ ಆಶಯಗಳನ್ನು ಸಾಕಾರಗೊಳಿಸುವುದು ಜನರಿಂದ ಆಯ್ಕೆಯಾದ ಪ್ರತಿಯೊಂದು ಸರ್ಕಾರದ ಕರ್ತವ್ಯ. ಈ ಕರ್ತವ್ಯ ಪಾಲನೆ ಮಾಡುವ ನಮ್ಮ ಕೈಗಳಿಗೆ ನಿಮ್ಮ ಸಹಕಾರ ಮತ್ತು ಸದಾಶಯದ ಬೆಂಬಲ ಸದಾ ಇರಲಿ. ನಿಮ್ಮೆಲ್ಲರಿಗೂ ಮತ್ತೊಮ್ಮೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.