ADVERTISEMENT

ಸಾಮಾಜಿಕ ಗಣತಿ ವರದಿಗೂ ಚುನಾವಣೆಗೂ ಸಂಬಂಧವಿಲ್ಲ: ಕಾಂತರಾಜ್‌

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 19:30 IST
Last Updated 26 ಜನವರಿ 2018, 19:30 IST
ಎಚ್‌. ಕಾಂತರಾಜ್‌
ಎಚ್‌. ಕಾಂತರಾಜ್‌   

ಮೊಳಕಾಲ್ಮುರು: ಸಾಮಾಜಿಕ ಹಾಗೂ ಆರ್ಥಿಕ ಗಣತಿ ವರದಿಗೂ ಚುನಾವಣೆಗೂ ಯಾವುದೇ ರೀತಿ ಸಂಬಂಧವಿಲ್ಲ. ಇದು ಜನಾಂಗಗಳ ಅಭಿವೃದ್ಧಿಗಾಗಿ ಸಿದ್ಧಪಡಿಸುವ ಸಮಗ್ರ ವರದಿ ಮಾತ್ರ ಆಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್‌. ಕಾಂತರಾಜ್‌ ಹೇಳಿದರು.

ಶುಕ್ರವಾರ ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಸಮುದಾಯಗಳ ಆರ್ಥಿಕ, ಸಾಮಾಜಿಕ ಪ್ರಸ್ತುತ ಪರಿಸ್ಥಿತಿ ಹೇಗಿದೆ. ಇದನ್ನು ಯಾವ ಮಾನದಂಡದಲ್ಲಿ ಅಭಿವೃದ್ಧಿಪಡಿಸಲು ಸಾಧ್ಯ ಎಂಬ ನಿಟ್ಟಿನಲ್ಲಿ ವರದಿ ನೀಡಬೇಕಿದೆ. ಕೇವಲ ಅಂಕಿ–ಅಂಶಗಳ ವರದಿಯಿಂದ ಯಾವುದೇ ಲಾಭವಿಲ್ಲ. ಆದ್ದರಿಂದ ವಿಶ್ಲೇಷಣಾ ವರದಿ ಸಿದ್ಧಪಡಿಸಲಾಗುತ್ತಿದೆ. ಮಾಹಿತಿಗಳ ಅಪ್‌ಲೋಡ್‌‘ ಕೆಲಸ ಪ್ರಗತಿಯಲ್ಲಿದ್ದು, ಒಂದು ತಿಂಗಳ ಒಳಗೆ ವರದಿ ಸಲ್ಲಿಸುವ ನಿರೀಕ್ಷೆ ಇದೆ’ ಎಂದು ಹೇಳಿದರು.

ಈವರೆಗೆ ಸರ್ಕಾರದ ಯೋಜನೆಗಳು ಯಾವ ರೀತಿ ಜನರಿಗೆ ಮುಟ್ಟಿದೆ. ಮುಂದೆ ಮಾಡಬೇಕಾಗಿರುವ ಮಾರ್ಪಾಡು, ಅನುಷ್ಠಾನ ಬದಲಾವಣೆ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.

ADVERTISEMENT

‘ವರದಿಯನ್ನು ಪ್ರಾಮಾಣಿಕವಾಗಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವ ಕೆಲಸ ಆಯೋಗದ್ದು. ಇದನ್ನು ಮುಂದೆ ಸರ್ಕಾರ ರಾಜಕೀಯವಾಗಿ ಅಥವಾ ಚುನಾವಣೆಗೆ ಬಳಸಿಕೊಳ್ಳಲಿದೆಯೇ ಎಂಬ ವಿಷಯ ಆಯೋಗಕ್ಕೆ ಸಂಬಂಧಿಸಿದ್ದಲ್ಲ’ ಎಂದು ಕಾಂತರಾಜ್‌ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.