ADVERTISEMENT

ಫ್ಲೋರೈಡ್‌ಯುಕ್ತ ಗ್ರಾಮ ದತ್ತು ಪಡೆಯಲು ಪ್ರಕಾಶ್ ರೈ ಚಿಂತನೆ

ಗ್ರಾಮಸ್ಥರೊಂದಿಗೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 19:39 IST
Last Updated 27 ಜನವರಿ 2018, 19:39 IST
ಹಿರಿಯೂರು ತಾಲ್ಲೂಕು ಐಮಂಗಲ ಹೋಬಳಿಯ ಬಂಡ್ಲಾರಹಟ್ಟಿ ಗ್ರಾಮಕ್ಕೆ ಶನಿವಾರ ಭೇಟಿನೀಡಿದ ಬಹುಭಾಷ ನಟ ಪ್ರಕಾಶ್ ರೈ ಗ್ರಾಮಸ್ಥರೊಂದಿಗೆ ಮಾತನಾಡಿದರು.
ಹಿರಿಯೂರು ತಾಲ್ಲೂಕು ಐಮಂಗಲ ಹೋಬಳಿಯ ಬಂಡ್ಲಾರಹಟ್ಟಿ ಗ್ರಾಮಕ್ಕೆ ಶನಿವಾರ ಭೇಟಿನೀಡಿದ ಬಹುಭಾಷ ನಟ ಪ್ರಕಾಶ್ ರೈ ಗ್ರಾಮಸ್ಥರೊಂದಿಗೆ ಮಾತನಾಡಿದರು.   

ಚಿತ್ರದುರ್ಗ: ಫ್ಲೋರೈಡ್ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯೂರು ತಾಲ್ಲೂಕಿನ ಬಂಡ್ಲಾರಹಟ್ಟಿ ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ದಿಪಡಿಸಲು ಬಹುಭಾಷಾ ನಟ ಪ್ರಕಾಶ್ ರೈ ಮುಂದಾಗಿದ್ದಾರೆ.

ಬಂಡ್ಲಾರಹಟ್ಟಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಅವರು ಗ್ರಾಮದಲ್ಲಿ ಸುತ್ತಾಡಿ, ಗ್ರಾಮಸ್ಥರೊಂದಿಗೆ ಫ್ಲೋರೈಡ್ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದರು. ಜತೆಗೆ, ನೀರಿನ ಸಮಸ್ಯೆಗೆ ಪರಿಹಾರೋಪಾಯಗಳ ಬಗ್ಗೆ ಚರ್ಚಿಸಿದರು.

ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರೈ, ’ಈ ಊರಿನ ಜನರನ್ನು ಗಮನಿಸಿದರೆ, ಇಲ್ಲಿ ಕೇವಲ ಫ್ಲೋರೈಡ್ ನೀರಿನ ಸಮಸ್ಯೆ ಮಾತ್ರವಲ್ಲ, ಮಕ್ಕಳಲ್ಲಿ ಅಪೌಷ್ಟಿಕತೆ ಸೇರಿದಂತೆ ಕಣ್ಣಿಗೆ ಕಾಣದ ಹಲವು ಸಮಸ್ಯೆಗಳಿವೆ. ಸ್ಥಳೀಯರ ಸಹಕಾರದಿಂದ ಈ ಗ್ರಾಮವನ್ನು ಅಭಿವೃದ್ಧಿಪಡಿಸಬಹುದು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಈ ಹಿಂದೆ ಆಂಧ್ರಪ್ರದೇಶದ ಕೊಂಡರೆಡ್ಡಿಪಲ್ಲಿ ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ದಿಪಡಿಸಿದ್ದೇನೆ. ಹಳ್ಳಿ ಅಭಿವೃದ್ಧಿಯ ಬಗ್ಗೆ ಸಾಕಷ್ಟು ಅನುಭವ ಪಡೆದಿದ್ದೇನೆ. ಬಯಲು ಸೀಮೆಯ ಗ್ರಾಮವೊಂದನ್ನು ಅಭಿವೃದ್ದಿಪಡಿಸುವ ಯೋಚನೆ ಬಂದಾಗ ಜಲತಜ್ಞ ಎನ್. ದೇವರಾಜರೆಡ್ಡಿ, ಬಂಡ್ಲಾರಹಟ್ಟಿಯನ್ನು ಸೂಚಿಸಿದರು. ಹಾಗಾಗಿ ಇಲ್ಲಿಗೆ ಬಂದಿದ್ದೇನೆ. ಸ್ಥಳೀಯರು ಸಹಕಾರ ನೀಡಿದರೆ, ಮಾದರಿ ಗ್ರಾಮವೆಂದರೆ, ಬಂಡ್ಲಾರಹಟ್ಟಿಯ ಹಾಗೆ ಇರಬೇಕು ಎನ್ನುವಂತೆ ಮಾಡಬಹುದು’ ಎಂದರು.

’ನಾನಿಲ್ಲಿ ನಾಯಕನಾಗಲು ಬಂದಿಲ್ಲ. ರಾಜಕೀಯ ನನಗೆ ಬೇಕಿಲ್ಲ. ನನಗೆ ಸಮಾಜ ಸಾಕಷ್ಟು ಕೊಟ್ಟಿದೆ. ನನ್ನನ್ನು ಪ್ರೀತಿಸುವವರು ಇಂಥ ಕಾರ್ಯಗಳಿಗೆ ಸಹಕಾರ ನೀಡುತ್ತಾರೆ. ಎಲ್ಲರ ಸಹಕಾರ, ಸ್ಥಳೀಯರ ಸಹಭಾಗಿತ್ವದೊಂದಿಗೆ ಗ್ರಾಮವನ್ನು ಅಭಿವೃದ್ಧಿಪಡಿಸಬೇಕೆನ್ನುವುದು ನನ್ನ ಉದ್ದೇಶ. ಇದಕ್ಕೆ ಗ್ರಾಮಸ್ಥರಿಂದ ಪಕ್ಷಾತೀತ, ಧರ್ಮಾತೀತ ಹಾಗೂ ಜಾತ್ಯಾತೀತ ಸಹಕಾರ ಅಗತ್ಯವಾಗಿದೆ’ ಎಂದರು.

ಇದೇ ವೇಳೆ ಜಲತಜ್ಞ ಎನ್. ದೇವರಾಜ ರೆಡ್ಡಿ, ಗ್ರಾಮದ ಉಪನ್ಯಾಸಕ ರಮೇಶ್, ನೀಲಮ್ಮ, ಗೀತಾ ಸೇರಿದಂತೆ ಹಲವರು ಗ್ರಾಮದಲ್ಲಿ ಫ್ಲೋರೈಡ್ ಸಮಸ್ಯೆಯಿಂದಾಗುತ್ತಿರುವ ಸಮಸ್ಯೆಗಳ ಕುರಿತು ರೈ ಅವರೊಂದಿಗೆ ಹಂಚಿಕೊಂಡರು. ಇದೇ ವೇಳೆ ಪ್ರಕಾಶ್ ರೈ ಗ್ರಾಮಸ್ಥರೊಂದಿಗೆ ಗ್ರಾಮದ ಸಮೀಪವಿರುವ ಗೋಕಟ್ಟೆಯನ್ನು ವೀಕ್ಷಿಸಿದರು. ’ಈ ಗೋಕಟ್ಟೆ ಅಭಿವೃದ್ಧಿಪಡಿಸಿದರೆ, ಗ್ರಾಮದವರಿಗೆ ಕುಡಿಯಲು ಸಿಹಿನೀರು ಲಭ್ಯವಾಗುತ್ತದೆ’ ಎಂದು ದೇವರಾಜರೆಡ್ಡಿ ಸಲಹೆ ನೀಡಿದರು.

'ಒಂದು ತಿಂಗಳಲ್ಲಿ ಈ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯೋಜನೆ ರೂಪಿಸೋಣ. ನಂತರ ತಜ್ಞರ ಸಲಹೆ ಪಡೆದು, ಮುಂದಿನ ಕಾರ್ಯಗಳ ರೂಪುರೇಶೆ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸೋಣ' ಎಂದು ಪ್ರಕಾಶ್ ರೈ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.