ADVERTISEMENT

ಹಟ ಹಿಡಿದು ಭಕ್ತರಿಗೆ ದರ್ಶನ ನೀಡಿದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 19:30 IST
Last Updated 28 ಜನವರಿ 2018, 19:30 IST
ಡಾ.ಶಿವಕುಮಾರ ಸ್ವಾಮೀಜಿಯವರು ಮಂಚದ ಮೇಲೆ ಕುಳಿತು ಭಕ್ತರಿಗೆ ಭಾನುವಾರ ದರ್ಶನ ನೀಡಿದರು
ಡಾ.ಶಿವಕುಮಾರ ಸ್ವಾಮೀಜಿಯವರು ಮಂಚದ ಮೇಲೆ ಕುಳಿತು ಭಕ್ತರಿಗೆ ಭಾನುವಾರ ದರ್ಶನ ನೀಡಿದರು   

ತುಮಕೂರು: ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶನಿವಾರವಷ್ಟೇ ಮಠಕ್ಕೆ ಮರಳಿದ್ದ ಸಿದ್ಧಗಂಗಾ ಮಠದ ಮಠಾಧೀಶ  ಶಿವಕುಮಾರ ಸ್ವಾಮೀಜಿ ಅವರು ಭಾನುವಾರ ಭಕ್ತರಿಗೆ ದರ್ಶನ ನೀಡಿದರು.

ಶ್ರೀಗಳಿಗೆ ಎಂಟು ದಿನಗಳ ಕಾಲ ವಿಶ್ರಾಂತಿ ಅಗತ್ಯವಿದೆ. ಯಾರ ಭೇಟಿಗೂ ಅವಕಾಶ ನೀಡಬಾರದು. ಸೋಂಕು ತಗುಲುವ ಅಪಾಯವಿದೆ ಎಂದು ವೈದ್ಯರು ತಿಳಿಸಿದ್ದರು.

’ಭಕ್ತರಿಗೆ ದರ್ಶನ ನೀಡಬೇಕು ಎಂದು ಬೆಳಿಗ್ಗೆ ಶ್ರೀಗಳು ತಿಳಿಸಿದರು. ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿಲ್ಲ ಎಂದು ನಾವು ಹೇಳಿದೆವು. ಆದರೂ ಅವರು ಒಪ್ಪಲಿಲ್ಲ. ನಂತರ ಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ, ವೈದ್ಯರು ಬಂದು ವಿಶ್ರಾಂತಿ ಪಡೆಯುವಂತೆ ಹೇಳಿದರೂ ಶ್ರೀಗಳು ಕೇಳಲಿಲ್ಲ’ ಎಂದು ಸ್ವಾಮೀಜಿ ಸಹಾಯಕರೊಬ್ಬರು ತಿಳಿಸಿದರು.

ADVERTISEMENT

’ಏನೂ ಆಗುವುದಿಲ್ಲ. ನಾನು ಭಕ್ತರಿಗೆ ದರ್ಶನ ನೀಡಬೇಕು ಎಂದು  ತಾವೇ ತಮ್ಮ ಪೇಟ ಸುತ್ತಿಕೊಳ್ಳಲು ಪ್ರಯತ್ನಿಸಿದರು. ಹೀಗಾಗಿ ಅನಿವಾರ್ಯ
ವಾಗಿ ಭಕ್ತರಿಗೆ ದರ್ಶನ ನೀಡಲು ವ್ಯವಸ್ಥೆ ಮಾಡಲಾಯಿತು’ ಎಂದು ಮಠದ ಮೂಲಗಳು ತಿಳಿಸಿವೆ.

ಹೊಸಮಠದ ಎದುರಿಗೆ ಇರುವ, ಶ್ರೀಗಳು ಯಾವಾಗಲೂ ಕೂರುವ ಮಂಚದ ಮೇಲೆ ಕುಳಿತು ಮಧ್ಯಾಹ್ನ 1 ಗಂಟೆಯವರೆಗೂ  ದರ್ಶನ ನೀಡಿದರು. 

ವಾಹನದಲ್ಲಿ ವಿಹಾರ: ಮಧ್ಯಾಹ್ನ 2 ಗಂಟೆ ಹೊತ್ತಿಗೆ ಶ್ರೀಗಳು ಸ್ವಲ್ಪ ವಿಹರಿಸಬೇಕು ಎಂದು ಬಯಸಿದಾಗ  ದೇವರಾಯನದುರ್ಗ ರಸ್ತೆಯಲ್ಲಿ 3–4 ಕಿ.ಮೀನಷ್ಟು ದೂರ ಕಾರಿನಲ್ಲಿ ಕರೆದುಕೊಂಡು ಹೋಗಿ ಪುನಃ ಮಠಕ್ಕೆ ಕರೆತರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.