ADVERTISEMENT

ಜ್ಯೇಷ್ಠತಾ ಪಟ್ಟಿ: ಒಂದೂವರೆ ತಿಂಗಳ ಸಮಯ

'ಸುಪ್ರೀಂ' ಆದೇಶ ಪಾಲಿಸದಿರಲು ಸಮರ್ಥನೆ ಬೇಡ..

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 19:30 IST
Last Updated 29 ಜನವರಿ 2018, 19:30 IST
ಜ್ಯೇಷ್ಠತಾ ಪಟ್ಟಿ: ಒಂದೂವರೆ ತಿಂಗಳ ಸಮಯ
ಜ್ಯೇಷ್ಠತಾ ಪಟ್ಟಿ: ಒಂದೂವರೆ ತಿಂಗಳ ಸಮಯ   

ನವದೆಹಲಿ: ಸರ್ಕಾರಿ ನೌಕರಿಯಲ್ಲಿ ಬಡ್ತಿ ಮೀಸಲಾತಿ ವಿಧಾನ ಅನುಸರಿಸುವ ಕಾಯ್ದೆಯನ್ನು ರದ್ದುಗೊಳಿಸಿ, ಹೊಸ ಜ್ಯೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸುವಂತೆ ನೀಡಿರುವ ಆದೇಶ ಜಾರಿಗಾಗಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಒಂದೂವರೆ ತಿಂಗಳು ಕಾಲಾವಕಾಶ ನೀಡಿದೆ.

ಬಿ.ಕೆ. ಪವಿತ್ರಾ ಮತ್ತಿತರರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆದರ್ಶಕುಮಾರ್‌ ಗೋಯಲ್‌ ಹಾಗೂ ಯು.ಯು. ಲಲಿತ್‌ ಅವರ ನೇತೃತ್ವದ ಪೀಠವು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ಪ್ರಸ್ತಾವಿತ ಮಸೂದೆಯ ಕಾರಣವನ್ನು ನೀಡಿ ಆದೇಶ ಪಾಲಿಸದಿರುವುದು ಸರಿಯಲ್ಲ ಎಂದು ಸೋಮವಾರ ಅಭಿಪ್ರಾಯಪಟ್ಟಿತು.

ಆದೇಶ ಪಾಲನೆಯಿಂದ ತೊಂದರೆಗೀಡಾಗುವ ಸಿಬ್ಬಂದಿ ರಕ್ಷಣೆಗಾಗಿ ಸರ್ಕಾರವು ಮಸೂದೆ ಮಂಡಿಸಿದ್ದು, ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯುತ್ತಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ ಸರ್ಕಾರದ ಪರ ವಕೀಲ ಬಸವಪ್ರಭು ಪಾಟೀಲ, ಪಟ್ಟಿ ಸಿದ್ಧಪಡಿಸಲು ಮತ್ತೆ ಮೂರು ತಿಂಗಳ ಕಾಲಾವಕಾಶ ಕೋರಿದರು.

ADVERTISEMENT

ರಾಜ್ಯ ಸರ್ಕಾರ ಮಸೂದೆ ರೂಪಿಸಿ ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯುತ್ತಿರುವುದರಿಂದ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿಸಿದ ಅವರು, ಆದೇಶ ಹೊರಬಿದ್ದ ನಂತರ ಸರ್ಕಾರ ಇದುವರೆಗೆ 41 ಇಲಾಖೆಗಳ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿದೆ ಎಂಬ ಮಾಹಿತಿ ನೀಡಿದರಾದರೂ ಅದಕ್ಕೆ ಒಪ್ಪದ ಪೀಠವು, ಆದೇಶ ಪಾಲನೆಗಾಗಿ ಕೇವಲ ಒಂದೂವರೆ ತಿಂಗಳ ಕಾಲಾವಕಾಶ ನೀಡಿತು.

ಮಸೂದೆ ಮಂಡಿಸಿ ಕಾನೂನು ರೂಪಿಸುವುದರ ಬಗ್ಗೆಯೇ ಸರ್ಕಾರ ಗಮನ ಹರಿಸಿದೆ. ಆದೇಶ ಪಾಲಿಸದಿರಲು ಪ್ರಸ್ತಾವಿತ ಮಸೂದೆಯು ಸಮರ್ಥನೆ ಎಂಬಂತೆ ಬಳಕೆಯಾಗಬಾರದು. ಕಾಯ್ದೆ ರೂಪುಗೊಂಡ ನಂತರ ಕೈಗೊಳ್ಳುವ ನಿರ್ಧಾರಗಳು ಆಗ ಮಾತ್ರ ಅನ್ವಯವಾಗಲಿವೆ ಎಂಬುದನ್ನು ಮರೆಯಬಾರದು. ಕೋರ್ಟ್‌ ಆದೇಶವನ್ನು ಪಾಲಿಸದೆ ವಿಳಂಬ ನೀತಿ ಅನುಸರಿಸುವಂತಿಲ್ಲ ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿತು.

ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ ಕಳೆದ ಮೇ 8ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಕೋರ್ಟ್‌ನ ಇನ್ನೊಂದು ಪೀಠವು ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿದೆ. ಅಲ್ಲದೆ, ಅರ್ಜಿಯ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ. ಆ ಆದೇಶವು 18 ಜನ ಅರ್ಜಿದಾರರಿಗೆ ಮಾತ್ರಅನ್ವಯವಾಗಲಿದ್ದು, ಬಡ್ತಿ ಮೀಸಲಾತಿ ಕಾಯ್ದೆ ರದ್ದುಪಡಿಸಿ ಹೊರಡಿ
ಸಲಾಗಿರುವ ಆದೇಶದ ಪಾಲನೆ ಆಗಬೇಕಿದೆ ಎಂದು ಅರ್ಜಿದಾರರ ಪರ ವಕೀಲ ರಾಜೀವ್‌ ಧವನ್‌ ವಿವರಿಸಿದರು.

ಬಡ್ತಿ ಮೀಸಲಾತಿ ವಿಧಾನ ಅನುಸರಿಸುವ ರಾಜ್ಯ ಸರ್ಕಾರದ 2002ರ ಕಾಯ್ದೆಯನ್ನು ರದ್ದುಪಡಿಸಿ ಕಳೆದ ಫೆಬ್ರುವರಿ 9ರಂದು ಆದೇಶಿಸಿದ್ದ ಪೀಠವು, ಜ್ಯೇಷ್ಠತಾ ಪಟ್ಟಿ ಪರಿಷ್ಕರಣೆಗಾಗಿ ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಆದೇಶ ಪಾಲಿಸದ ಕಾರಣ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿ, ಡಿಸೆಂಬರ್‌ ಅಂತ್ಯದವರೆಗೆ ಗಡುವು ವಿಧಿಸಿತ್ತು.

ಮಸೂದೆ ರಾಷ್ಟ್ರಪತಿಗೆ ಹೋಗುವುದೇ ಅನುಮಾನ?
ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಬಡ್ತಿ ಮೀಸಲು ಮಸೂದೆ ಒಂದು ತಿಂಗಳಿನಿಂದ ಕೇಂದ್ರ ಗೃಹ ಸಚಿವಾಲಯದಲ್ಲಿದ್ದು, ರಾಷ್ಟ್ರಪತಿ ಅಂಗಳಕ್ಕೆ ತಲುಪುವ ಬಗ್ಗೆಯೇ ಅನುಮಾನಗಳು ವ್ಯಕ್ತವಾಗಿವೆ.

ರಾಷ್ಟ್ರಪತಿ ಅಂಕಿತಕ್ಕಾಗಿ ಕಳುಹಿಸಿದ ಮಸೂದೆಯ ಔಚಿತ್ಯದ ಬಗ್ಗೆಯೇ ಕೇಂದ್ರ ಕಾನೂನು ಇಲಾಖೆ ಹಲವು ಪ್ರಶ್ನೆಗಳನ್ನು ಎತ್ತಿ ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಕೇಳಿದೆ. ಈ ಬಗ್ಗೆ ಎರಡು ದಿನಗಳ ಹಿಂದೆಯಷ್ಟೆ ಸರ್ಕಾರ ಉತ್ತರ ನೀಡಿದೆ.

‘ರಾಜ್ಯ ಸರ್ಕಾರ ನೀಡಿರುವ ವಿವರಣೆಯನ್ನು ಕೇಂದ್ರ ಕಾನೂನು ಇಲಾಖೆ ಪರಾಮರ್ಶೆ ಮಾಡಲಿದೆ. ವಿವರಣೆಗಳು ತೃಪ್ತಿಕರವಾಗದಿದ್ದರೆ ಮತ್ತಷ್ಟು ಮಾಹಿತಿಗಳನ್ನು ನೀಡುವಂತೆ ಮತ್ತೆ ಕೇಳಬಹುದು. ಉತ್ತರ ತೃಪ್ತಿ ಆದರೆ ಗೃಹ ಸಚಿವಾಲಯ ಮಸೂದೆಯನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಲಿದೆ’ ಎಂದೂ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಸುಪ್ರೀಂ ಕೋರ್ಟ್‌ ಆದೇಶದ ವಿರುದ್ಧ ಮಸೂದೆ ಅಂಗೀಕರಿಸಿದ ಅಗತ್ಯವೇನು ಎಂದು ಪ್ರಶ್ನಿಸಿರುವ ಕೇಂದ್ರ ಕಾನೂನು ಇಲಾಖೆ, ಸಮಗ್ರ ವಿವರಣೆ ನೀಡುವಂತೆ ನಿರ್ದೇಶನ ನೀಡಿತ್ತು. ಅಡ್ವೊಕೇಟ್‌ ಜನರಲ್‌ ಜೊತೆ ಚರ್ಚಿಸಿದ ಬಳಿಕ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿದ್ಧಪಡಿಸಿ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.