ADVERTISEMENT

ಶಾಸಕ ಸಿ.ಟಿ.ರವಿಗೆ ಕೊಲೆ ಬೆದರಿಕೆ ಪತ್ರ

ಅಲೆ–ಹದೀಸ್‌ ಗ್ರೂಪ್‌ ಆಫ್‌ ಕರ್ನಾಟಕ ‌ಹೆಸರಲ್ಲಿ ಪತ್ರ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 19:30 IST
Last Updated 30 ಜನವರಿ 2018, 19:30 IST

ಚಿಕ್ಕಮಗಳೂರು: ಶಾಸಕ ಸಿ.ಟಿ.ರವಿ ಅವರಿಗೆ ಕೊಲೆ ಬೆದರಿಕೆಯ ಪತ್ರವೊಂದು ಅಲೆ–ಹದೀಸ್‌ ಗ್ರೂಪ್‌ ಆಫ್‌ ಕರ್ನಾಟಕ (ಲಾಲ್‌ ಮಸ್ಜಿದ್‌, ಶಿವಾಜಿನಗರ) ಎಂಬ ಹೆಸರಿನಲ್ಲಿ ಅಂಚೆ ಮೂಲಕ ಬಂದಿದೆ.

ಶಾಸಕ ಸಿ.ಟಿ.ರವಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಸೋಮವಾರ ಪತ್ರ ಬಂದಿದೆ. ಮಂಗಳವಾರ ಬೆಳಿಗ್ಗೆ ಪತ್ರಗಳನ್ನು ನೋಡುತ್ತಿದ್ದಾಗ ಇದು ಕಣ್ಣಿಗೆ ಬಿತ್ತು. ವಿಎಚ್‌ಪಿ ಮುಖಂಡರು, ಬಿ.ಎಸ್‌.ಯಡಿಯೂರಪ್ಪ ಅವರ ಬಗ್ಗೆ ಅವಾಚ್ಯವಾಗಿ ಬರೆದಿದ್ದಾರೆ. ನನ್ನನ್ನು, ವಿಎಚ್‌ಪಿ ಮುಖಂಡ ಗೋಪಾಲ್‌, ಮಂಗಳೂರಿನ ಇಬ್ಬರನ್ನು ಹತ್ಯೆ ಮಾಡುತ್ತೇವೆ ಎಂದು ಪತ್ರದಲ್ಲಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅವರಿಗೆ ದೂರು ಸಲ್ಲಿಸಿದ್ದೇನೆ’ ಎಂದು ತಿಳಿಸಿದರು.

‘ಪತ್ರವು ಡಿಟಿಪಿ ರೂಪದಲ್ಲಿದೆ. ಪತ್ರದಲ್ಲಿ ಬೆಂಗಳೂರಿನ ಅಂಚೆ ಮೊಹರಿದೆ. ಪತ್ರದೊಂದಿಗೆ ಯುವಕನೊಬ್ಬನ ಚಿತ್ರ ಇತ್ತು, ಇವೆಲ್ಲವನ್ನೂ ಪೊಲೀಸರಿಗೆ ನೀಡಿದ್ದೇನೆ. ಪತ್ರದ ಹಿಂದೆ ಯಾರ ಕೈವಾಡ ಇದೆ ಎಂಬುದು ಗೊತ್ತಿಲ್ಲ. ಅಲೆ–ಹದೀಸ್‌ ಗ್ರೂಪ್‌ ಆಫ್‌ ಕರ್ನಾಟಕ ಹೆಸರಿನ ಸಂಘಟನೆ ಬಗ್ಗೆ ಏನೂ ಗೊತ್ತಿಲ್ಲ. ಪೊಲೀಸರು ಸತ್ಯಾಂಶ ಪತ್ತೆ ಮಾಡಬೇಕು’ ಎಂದರು.

ADVERTISEMENT

‘ಈ ಹಿಂದೆ ಇನ್‌ಲ್ಯಾಂಡ್‌ ಲೆಟರ್‌ನಲ್ಲಿ ಕೈಬರಹದಲ್ಲಿ ಬರೆದ ಎರಡು ಬೆದರಿಕೆ ಪತ್ರಗಳು ಬಂದಿದ್ದವು. ಇಂಥದಕ್ಕೆಲ್ಲ ಹೆದರಿಕೊಂಡರೆ ರಾಜಕಾರಣ ಮಾಡಲು ಆಗುವುದಿಲ್ಲ ಎಂದು ನಿರ್ಲಕ್ಷ ಮಾಡಿದ್ದೆ. 30 ವರ್ಷಗಳಿಂದ ಇಂಥ ಬೆದರಿಕೆಗಳನ್ನು ಎದುರಿಸಿಕೊಂಡು ಬಂದಿದ್ದೇನೆ. ಪ್ರತಿಯೊಬ್ಬರ ಆಯುಷ್ಯವನ್ನು ಭಗವಂತ ನಿರ್ಧರಿಸಿರುತ್ತಾನೆ. ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯ ಇಲ್ಲ ಎಂಬ ನಂಬಿಕೆ ನನಗಿದೆ’ ಎಂದರು.

‘ನನ್ನ ಸತ್ಯದ ಧ್ವನಿಯನ್ನು ಬೆದರಿಕೆ ಮೂಲಕ ಯಾರೂ ಹತ್ತಿಕ್ಕಲು ಸಾಧ್ಯ ಇಲ್ಲ. ಬೆದರಿಕೆಗೆ ಬಗ್ಗುವುದೂ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.