ADVERTISEMENT

ಬೀದರ್‌ನಲ್ಲಿ ಲಾಠಿ ಪ್ರಹಾರ: ಸಂಸದ ಸೇರಿ ಐವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 19:30 IST
Last Updated 30 ಜನವರಿ 2018, 19:30 IST
ವಿದ್ಯಾರ್ಥಿನಿ ಕೊಲೆಯನ್ನು ಖಂಡಿಸಿ ಮಂಗಳವಾರ ಕರೆ ನೀಡಿದ್ದ ಬೀದರ್ ಬಂದ್ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು
ವಿದ್ಯಾರ್ಥಿನಿ ಕೊಲೆಯನ್ನು ಖಂಡಿಸಿ ಮಂಗಳವಾರ ಕರೆ ನೀಡಿದ್ದ ಬೀದರ್ ಬಂದ್ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು   

ಬೀದರ್‌:  ಭಾಲ್ಕಿ ತಾಲ್ಲೂಕಿನ ಗ್ರಾಮವೊಂದರ ವಿದ್ಯಾರ್ಥಿನಿ ಕೊಲೆ ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆ ಮಂಗಳವಾರ ಕರೆ ನೀಡಿದ್ದ ಬೀದರ್‌ ಬಂದ್ ವೇಳೆ ಕಿಡಿಗೇಡಿಗಳು ಕಲ್ಲು ತೂರಿದಾಗ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಲಾಠಿ ಪ್ರಹಾರ ಸಂದರ್ಭದಲ್ಲಿ ಸಂಸದ ಸೇರಿ ಐದು ಜನರಿಗೆ ಗಾಯಗಳಾಗಿವೆ.

ತಳ್ಳಾಟದಲ್ಲಿ ಸಂಸದ ಭಗವಂತ ಖೂಬಾ ಅವರ ಮುಖಕ್ಕೆ ತರಚಿದ ಗಾಯವಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್ ಅವರ ಭುಜಕ್ಕೆ ಕಲ್ಲು ತಾಗಿದೆ. ಪೊಲೀಸ್‌ ವಾಹನವೊಂದರ ಗಾಜು ಜಖಂಗೊಂಡಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಓಲ್ಡ್‌ಸಿಟಿಯೊಳಗೆ ಮೆರವಣಿಗೆಗೆ ಅವಕಾಶ ಕೊಡುವಂತೆ ಪಟ್ಟು ಹಿಡಿದಾಗ, ಪೊಲೀಸರು ನಿರಾಕರಿಸಿದರು. ಈ ವೇಳೆ ಕಲ್ಲುಗಳು ತೂರಿ ಬಂದವು. ಪೊಲೀಸರು ಲಾಠಿ ಪ್ರಹಾರ ಮಾಡಿ ಪ್ರತಿಭಟನಾಕಾರರನ್ನು ಚದುರಿಸಿದರು.

ADVERTISEMENT

ಮಧ್ಯಾಹ್ನದವರೆಗೂ ನಗರದಲ್ಲಿ ಉದ್ರಿಕ್ತ ಸ್ಥಿತಿ ಇತ್ತು. ಮುಂಜಾಗ್ರತಾ ಕ್ರಮವಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ವಿದ್ಯಾರ್ಥಿನಿ ಕೊಲೆ ವಿಷಯವಾಗಿ ಭಾಲ್ಕಿ ಹಾಗೂ ಬಸವಕಲ್ಯಾಣ ಬಂದ್ ಸಂಪೂರ್ಣ ಶಾಂತಿಯುತವಾಗಿತ್ತು. ಔರಾದ್‌ನಲ್ಲಿ ಹಡಪದ ಸಮಾ
ಜದವರು ಮೆರವಣಿಗೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಕಿಡಿಗೇಡಿಗಳ ಕೃತ್ಯ:  ‘ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾಗ ಹೊರ ರಾಜ್ಯದ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದೇ ಘಟನೆಗೆ ಕಾರಣವಾಗಿದೆ. ಪೊಲೀಸರಿಗೆ ಮೊದಲೇ ಮಾಹಿತಿ ಇದ್ದರೂ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ’ ಎಂದು ಸಂಸದ ಭಗವಂತ ಖೂಬಾ ಆರೋಪಿಸಿದರು.ಪೊಲೀಸರು ನಡೆಸಿದ ಲಾಠಿ ಪ್ರಹಾರ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.