ADVERTISEMENT

ಕೇಂದ್ರ ಬಜೆಟ್‌ ನಿರಾಶಾದಾಯಕ, ಅಭಿವೃದ್ಧಿಗೆ ಪೂರಕವಾಗಿಲ್ಲ: ಡಾ.ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 10:24 IST
Last Updated 1 ಫೆಬ್ರುವರಿ 2018, 10:24 IST
ಡಾ.ಜಿ. ಪರಮೇಶ್ವರ
ಡಾ.ಜಿ. ಪರಮೇಶ್ವರ   

ಬೆಳಗಾವಿ: ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ ನಿರಾಶಾದಾಯಕವಾಗಿದ್ದು, ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಭಾಗ್ಯನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ಗುರುವಾರ ನಡೆದ ಕಾಂಗ್ರೆಸ್ ದಕ್ಷಿಣ ಮತಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ರೈತರ ಸಾಲ ಮನ್ನಾ ಮಾಡಬೇಕು ಎಂದು ಎಲ್ಲ ರಾಜ್ಯಗಳ ರೈತರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಬೇಡಿಕೆಗೆ ಸ್ಪಂದಿಸಿಲ್ಲ’ ಎಂದರು.

ADVERTISEMENT

ಇದೇ ವೇಳೆ ‘ ಹೋದ ಚುನಾವಣೆಯಲ್ಲಿ ಶೇಕಡ 15 ರಷ್ಟು ಮತಗಳನ್ನು ಮಾತ್ರ ಪಡೆದಿದ್ದೇವೆ. ಮುಖಂಡರು ಹಾಗೂ ಕಾರ್ಯಕರ್ತರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಶತ್ರುಗಳನ್ನು ಎದುರಿಸಬೇಕು ಅನ್ನೋ ರೋಷ ಬಂದಿಲ್ಲ. ಇದರಿಂದಾಗಿಯೇ ಪದೇ ಪದೇ ಸೋಲುತಿದ್ದೇವೆ. ಈ ಕ್ಷೇತ್ರದ ಜನ ಮನಸ್ಸು ಮಾಡಿ ಮುಂಬರುವ ಚುನಾವಣೆಯಲ್ಲಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

‘ಪಕ್ಷದ ಕಾರ್ಯಕರ್ತರು ಸಂಘಟನೆಗೆ ಆದ್ಯತೆ ನೀಡಬೇಕು. ಮನೆ ಮನೆಗೆ ಹೋಗಬೇಕು. ಆಗ ನಮ್ಮನ್ನು ಯಾರೂ ಸೋಲಿಸಲು ಆಗುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಗೆಲುವು ಸಾಧಿಸುವ ಸಾಮರ್ಥ್ಯವಿರುವವರಿಗೆ ಮಾತ್ರ ಟಿಕೆಟ್‌ ಕೋಡುತ್ತೇವೆ. ಅವರನ್ನು ನೀವೇ ಆಯ್ಕೆ ಮಾಡಿ’ ಎಂದರು.

ಇಡೀ ಪಕ್ಷ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ಅಭಿವೃದ್ಧಿಯಲ್ಲಿ ಸಮತೋಲನ ಕಾಪಾಡಿಕೊಳ್ಳಲು ಅನುದಾನ ಒದಗಿಸಿದ್ದೇವೆ. ಇದರಿಂದ ಎಲ್ಲ ವರ್ಗದ ಜನರಿಗೂ ಉಪಯೋಗ ಆಗಿದೆ. ಈಗ ಧೈರ್ಯದಿಂದ ನಾವು ಮತ ಕೇಳಬಹುದಾಗಿದೆ ಎಂದು ತಿಳಿಸಿದರು.

‘ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿದೆ, ರಾಜ್ಯ ಕೊಟ್ಟಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಕೊಟ್ಟಿದ್ದೇ ಆದಲ್ಲಿ ಬಿಜೆಪಿ ಅಧಿಕಾರದಲ್ಲಿರುವ 18 ರಾಜ್ಯಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಿಲ್ಲ ಏಕೆ’ ಎಂದು ಪ್ರಶ್ನಿಸಿದರು.

‘ಬಜೆಟ್‌ನಲ್ಲಿ ರೈತರ ಬಗ್ಗೆ ಚಕಾರ ಎತ್ತಲಿಲ್ಲ. ಸಾಲ ಮನ್ನಾ ಮಾಡಿ ಎಂದು ಪರಿಪರಿಯಾಗಿ ಕೇಳಿಕೊಂಡರೂ ಮಾಡಿಲ್ಲ. ದೇಶದಲ್ಲಿ 12 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಪ್ರಧಾನಿ ಹಾಗೂ ಹಣಕಾಸು ಸಚಿವರಿಗೆ ರೈತರ ಬಗ್ಗೆ ಕರುಣೆ ಇಲ್ಲ’ ಎಂದು ಟೀಕಿಸಿದರು.

ಸ್ವಾಮೀಜಿಗಳ ಬಗ್ಗೆ ನಮಗೆ ಗೌರವ ಇದೆ. ಯೋಗಿ ಆದಿತ್ಯನಾಥ ನಮಗೆ ಹಿಂದುತ್ವ ಹೇಳಿಕೊಡುತ್ತಿದ್ದಾರೆ. ಹಿಂದುತ್ವ ಏನು ಎನ್ನುವುದು ನಮಗೆ ಗೊತ್ತಿದೆ. ಇತರ ಧರ್ಮೀಯರನ್ನು ಜತೆಯಾಗಿ ಕರೆದುಕೊಂಡು ಹೋಗುತ್ತೇವೆ ಎಂದರು.

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ, ‘ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ ಯಾವುದೇ ಕ್ಷೇತ್ರವನ್ನೂ ತೃಪ್ತಿ ಪಡಿಸಿಲ್ಲ. ಮಹಿಳಾ ಸಬಲೀಕರಣದ ಬಗ್ಗೆ ಗಮನ ಕೊಟ್ಟಿಲ್ಲದಿರುವುದನ್ನು ಖಂಡಿಸುತ್ತೇವೆ. ಜನರ ಕಣ್ಣಿಗೆ ಮಣ್ಣೆರಚುವ ಬಜೆಟ್ ಇದಾಗಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.