ADVERTISEMENT

ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿದ ವೀರಶೈವ ಬಣ

ಲಿಂಗಾಯತ–ವೀರಶೈವ ತಜ್ಞರ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 19:30 IST
Last Updated 2 ಫೆಬ್ರುವರಿ 2018, 19:30 IST

ಬೆಂಗಳೂರು: ‘ವೀರಶೈವ– ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಬಗ್ಗೆ ಅಧ್ಯಯನ ನಡೆಸಿ ವರದಿ ಕೊಡಲು ನಿಮಗಿರುವ  ಸಾಂವಿಧಾನಿಕ ಮಾನ್ಯತೆ ಏನು’ ಎಂದು ವೀರಶೈವ ಮುಖಂಡರು ನ್ಯಾ. ನಾಗಮೋಹನದಾಸ್‌ ನೇತೃತ್ವದ ತಜ್ಞರ ಸಮಿತಿಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಪ್ರಶ್ನಿಸಿದೆ.

ವೀರಶೈವ–ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆ ಪರಾಮರ್ಶೆಗೆ ರಾಜ್ಯ ಸರಕಾರ ರಚಿಸಿರುವ ತಜ್ಞರ ಸಮಿತಿ ಸಭೆ ಶುಕ್ರವಾರ ವಿಧಾನಸೌಧದಲ್ಲಿ ನಡೆಯಿತು.

ಈ ಸಭೆಗೆ ಹಾಜರಾಗಲು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಅನೀಸ್ ರಾಜ್‌ ಕಳುಹಿಸಿದ್ದ ಪತ್ರಕ್ಕೆ ಉತ್ತರಿಸಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯದರ್ಶಿ ಎಚ್‌.ಎಂ.ರೇಣುಕ ಪ್ರಸನ್ನ, ‘ನಾವು ಎತ್ತಿರುವ ಪ್ರಶ್ನೆಗೆ ಸಮಿತಿ ಇದುವರೆಗೆ ಉತ್ತರ ನೀಡದಿರುವುದರಿಂದ ಸಭೆಗೆ ಬಂದು ಮೌಖಿಕವಾಗಿ ತಿಳಿಸುವಂತಹ ಪ್ರಮೇಯ ಉದ್ಭವಿಸುವುದಿಲ್ಲ’ ಎಂದಿದ್ದಾರೆ.

ADVERTISEMENT

‘ರಾಜ್ಯದಲ್ಲಿ ವೀರಶೈವ–ಲಿಂಗಾಯತರು ಜನಸಂಖ್ಯೆ ಒಂದೂವರೆ ಕೋಟಿ ಇದ್ದು ಇಂತಹ ಒಂದು ಸಮಾಜವನ್ನು ವಿಭಾಗಿಸಲು ಹೊರಟಿರುವುದು ಸರ್ಕಾರಕ್ಕಾಗಲೀ ಸರ್ಕಾರ ರಚಿಸಿರುವ ಈ ಸಮಿತಿಗಾಗಲೀ ಘನತೆ ತರುವುದಿಲ್ಲ’ ಎಂದೂ ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಬಸವಣ್ಣ ಸ್ಥಾಪಕನಲ್ಲ: ಈ ಮಧ್ಯೆ, ಸಮಿತಿ ವಿಚಾರಣೆ ವೇಳೆ ಹಾಜರಿದ್ದ ವಿವಿಧ ವೀರಶೈವ ಬಣದ 11 ಮುಖಂಡರು, ‘ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕನಲ್ಲ’ ಎಂದು ಪ್ರತಿಪಾದಿಸಿದರು.

ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆಯವರೆಗೂ ನಡೆದ ಸಭೆಗೆ ತಜ್ಞರ ಸಮಿತಿ ಸದಸ್ಯರಾದ ಪುರಷೋತ್ತಮ ಬಿಳಿಮಲೆ, ಎಸ್‌.ಜಿ.ಸಿದ್ದರಾಮಯ್ಯ ಹಾಗೂ ರಾಮಕೃಷ್ಣ ಮರಾಠೆ ಗೈರು ಹಾಜರಾಗಿದ್ದರು.

ಶನಿವಾರ (ಫೆ.3) ಲಿಂಗಾಯತ ಬಣದವರು ತಮ್ಮ ವಾದ ಮಂಡಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.