ADVERTISEMENT

ವೀರಶೈವರಿಂದ ಪುರಾಣ, ಲಿಂಗಾಯತರಿಂದ ದಾಖಲೆ

ಸರ್ಕಾರದ ಸಮಿತಿ ಮುಂದೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST

ಬೆಂಗಳೂರು: ವೀರಶೈವ– ಲಿಂಗಾಯತ ಸ್ವತಂತ್ರ ಧರ್ಮ ಪ್ರತಿಪಾದನೆಗೆ ಸಂಬಂಧಿಸಿದಂತೆ ವೀರಶೈವರು ಪುರಾಣಗಳನ್ನು ಉಲ್ಲೇಖಿಸಿದರೆ, ಲಿಂಗಾಯತರು ದಾಖಲೆಗಳನ್ನು ಸಲ್ಲಿಸಿದ್ದಾರೆ.

ವೀರಶೈವ– ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಪರಾಮರ್ಶೆಗೆ ರಾಜ್ಯ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಸಭೆ ಅಹವಾಲುಗಳ ವಿಚಾರಣೆಯನ್ನು ಶನಿವಾರ ಮುಕ್ತಾಯಗೊಳಿಸಿತು.

ಲಿಂಗಾಯತ ಬಣದ ತಜ್ಞರು ಮತ್ತು ಮುಖಂಡರು ಶನಿವಾರ ತಮ್ಮ ಅಭಿಪ್ರಾಯ ಮಂಡಿಸಿದರು. ವಿಶೇಷವಾಗಿ ಮಾತೆ ಮಹಾದೇವಿ ಮತ್ತು ಗದುಗಿನ ತೋಂಟದಾರ್ಯ ಮಠದ ಪ್ರತಿನಿಧಿಗಳು ದಾಖಲೆಗಳನ್ನು ಸಲ್ಲಿಸಿದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಶುಕ್ರವಾರ (ಫೆ.2) ವೀರಶೈವರು ಶಿವಪುರಾಣದಂತಹ ಪುರಾಣಗಳನ್ನು ಉಲ್ಲೇಖಿಸಿ ವಾದ ಮಂಡಿಸಿದ್ದರೆ, ಲಿಂಗಾಯತ ಬಣದ ಪ್ರತಿನಿಧಿಗಳು ಐತಿಹಾಸಿಕ ದಾಖಲೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಮಿತಿಯ ಮುಂದಿಟ್ಟರು. 12 ನೇ ಮತ್ತು 18 ನೇ ಶತಮಾನದಿಂದ ಈಚೆಗಿನ ಮಹತ್ವದ ದಾಖಲೆಗಳನ್ನು ಸಮಿತಿಗೆ ನೀಡಿದರು. ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕರಲ್ಲ ಎಂದು ವೀರಶೈವರು ಪ್ರತಿಪಾದಿಸಿದರೆ,  ಬಸವಣ್ಣ ಲಿಂಗಾಯತ ಧರ್ಮ ಸಂಸ್ಥಾಪಕ ಎಂದು ಲಿಂಗಾಯತರು ವಾದ ಮಂಡಿಸಿದರು.

ಶನಿವಾರ ಒಟ್ಟು 13 ಮಂದಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದರು. ನಿವೃತ್ತ ಐಎಎಸ್ ಅಧಿಕಾರಿ ಎಸ್‌.ಎಂ.ಜಾಮದಾರ್‌ ಸುದೀರ್ಘವಾಗಿ ವಾದ ಮಂಡಿಸಿದರು. ವಚನಗಳು, ಮಠ ಸಂಸ್ಕೃತಿ, ನ್ಯಾಯಾಲಯದ ತೀರ್ಪುಗಳು, ಗೆಜೆಟ್‌ ಪ್ರತಿಗಳು, ಡಾ.ಎಂ.ಎಂ. ಕಲ್ಬುರ್ಗಿ ನಡೆಸಿರುವ ಸಂಶೋಧನೆಗಳ ಬಗ್ಗೆ ಬೆಳಕು ಚೆಲ್ಲಿದರು.

‘ಅಹವಾಲುಗಳ ವಿಚಾರಣೆ ಮುಗಿದಿರುವುದರಿಂದ ಸೋಮವಾರದ (ಫೆ.5) ಬಳಿಕ ಎಲ್ಲ ದಾಖಲೆಗಳ ಪರಿಶೀಲನೆ ಮತ್ತು ವಿಶ್ಲೇಷಣೆ ಕಾರ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.