ADVERTISEMENT

ವಿಧಾನಮಂಡಲ ಅಧಿವೇಶನ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2018, 19:30 IST
Last Updated 4 ಫೆಬ್ರುವರಿ 2018, 19:30 IST
ವಿಧಾನಮಂಡಲ ಅಧಿವೇಶನ ಇಂದಿನಿಂದ
ವಿಧಾನಮಂಡಲ ಅಧಿವೇಶನ ಇಂದಿನಿಂದ   

ಬೆಂಗಳೂರು: ರಾಜ್ಯ ವಿಧಾನಮಂಡಲದ ಅಧಿವೇಶನ ಸೋಮವಾರದಿಂದ (ಫೆ. 5) ಆರಂಭವಾಗಲಿದ್ದು, ಇದೇ 9ರವರೆಗೆ ನಡೆಯಲಿದೆ.

ಬೆಳಿಗ್ಗೆ 11 ಗಂಟೆಗೆ ರಾಜ್ಯಪಾಲ ವಜೂಭಾಯಿ ವಾಲಾ ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಸದನವನ್ನು ಮಂಗಳವಾರಕ್ಕೆ ಮುಂದೂಡಲಾಗುತ್ತದೆ. ಭಾಷಣದ ಮೇಲಿನ ಚರ್ಚೆಯ ಬಳಿಕ ಕೊನೆಯ ದಿನ ಸರ್ಕಾರ ಉತ್ತರ ನೀಡಲಿದೆ.

ರಾಜ್ಯ ವಿಧಾನಸಭೆಗೆ ಇನ್ನು ಮೂರು ತಿಂಗಳಲ್ಲಿ ಚುನಾವಣೆ ಬರಲಿರುವುದರಿಂದ ರಾಜ್ಯಪಾಲರ ಭಾಷಣದ ಮೇಲೆ ನಡೆಯುವ ಚರ್ಚೆ ಕಾವೇರುವ ಸಾಧ್ಯತೆ ಇದೆ. ಆಡಳಿತ ಕಾಂಗ್ರೆಸ್‌ ಪಕ್ಷದ ಸಾಧನೆಗಳು ಮತ್ತು ಯೋಜನೆಗಳಿಗೆ ಕನ್ನಡಿ ಹಿಡಿಯಲಿರುವ ಭಾಷಣಕ್ಕೆ  ಆಕ್ಷೇಪಗಳ ಮೂಲಕ ವಿರೋಧ ಪಕ್ಷ ವಾಗ್ದಾಳಿ ನಡೆಸುವುದು ಖಚಿತ.

ADVERTISEMENT

ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರ ತರಾತುರಿಯಲ್ಲಿ ಮಸೂದೆಗಳನ್ನು ಮಂಡಿಸಿ ಅನುಮೋದನೆಗೆ ಮುಂದಾದರೆ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಈಗಾಗಲೇ ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದ್ದಾರೆ.

‘ಮಸೂದೆಗಳನ್ನು ಮೊದಲೇ ಮಂಡಿಸಿ, ಚರ್ಚೆಗೆ ಸಾಕಷ್ಟು ಕಾಲಾವಕಾಶ ನೀಡಬೇಕು. ಈ ವಿಷಯವನ್ನು ಸದನದ ಕಾರ್ಯ‌ಕಲಾಪಗಳ ಸಲಹಾ ಸಮಿತಿ ಸಭೆಯ ಗಮನಕ್ಕೂ ತರುತ್ತೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯಪಾಲರು ಮರು ಪರಿಶೀಲಿಸುವಂತೆ ಸೂಚಿಸಿ ಹಿಂದಿರುಗಿಸಿರುವ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ಮಸೂದೆ, ರಾಜ್ಯ ಸಿವಿಲ್ ಸೇವೆಗಳ (ಕೃಷಿ ಇಲಾಖೆ ಮತ್ತು ಸಿಬ್ಬಂದಿ) ವರ್ಗಾವಣೆ ಮಸೂದೆ ಅಂಗೀಕಾರಕ್ಕೆ ಬಾಕಿ ಇದೆ.

ಅಧಿವೇಶನದಲ್ಲಿ ಶಾಸಕರ ಪಾಲ್ಗೊಳ್ಳುವಿಕೆ ತೃಪ್ತಿಕರವಾಗಿಲ್ಲ. ಆದರೆ, ರಾಜ್ಯಪಾಲರ ಭಾಷಣ ಮತ್ತು ಬಜೆಟ್‍ನಲ್ಲಿ ನೀಡಿದ ಭರವಸೆಗಳನ್ನು ಸರ್ಕಾರ ಈಡೇರಿಸಿರುವ ತೃಪ್ತಿ ಇದೆ ಎಂದು ಕೋಳಿವಾಡ ಪ್ರತಿಕ್ರಿಯಿಸಿದ್ದಾರೆ.

ಬಜೆಟ್ ಮಂಡನೆ: ಇದೇ 16ರಂದು ಮಧ್ಯಾಹ್ನ 12.30ಕ್ಕೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. 28ರವರೆಗೆ ಬಜೆಟ್ ಮೇಲಿನ ಚರ್ಚೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.