ADVERTISEMENT

ಕ್ಯುಆರ್‌ ಕೋಡ್‌ನಲ್ಲಿ ಶಾಲಾ ಪಠ್ಯ: ನಿಲೇಕಣಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2018, 19:30 IST
Last Updated 4 ಫೆಬ್ರುವರಿ 2018, 19:30 IST
ಹುಬ್ಬಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಂದನ ನಿಲೇಕಣಿ ಮಾತನಾಡಿದರು. ಗುರುರಾಜ ದೇಶಪಾಂಡೆ, ರೋಹಿಣಿ ನಿಲೇಕಣಿ ಇದ್ದಾರೆ
ಹುಬ್ಬಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಂದನ ನಿಲೇಕಣಿ ಮಾತನಾಡಿದರು. ಗುರುರಾಜ ದೇಶಪಾಂಡೆ, ರೋಹಿಣಿ ನಿಲೇಕಣಿ ಇದ್ದಾರೆ   

ಹುಬ್ಬಳ್ಳಿ: ಮುಂಬರುವ ಶೈಕ್ಷಣಿಕ ವರ್ಷದಿಂದ ನಾಲ್ಕು ರಾಜ್ಯಗಳ ಸರ್ಕಾರಿ ಶಾಲಾ ಪಠ್ಯಪುಸ್ತಕಗಳು ಕ್ಯು.ಆರ್. ಕೋಡ್‌ (ಕ್ವಿಕ್‌ ರೆಸ್ಪಾನ್ಸ್‌ ಕೋಡ್‌) ಮಾದರಿಯಲ್ಲಿ ಇರಲಿವೆ. ಇದರಿಂದ ಡಿಜಿಟಲ್‌ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಸಿಕ್ಕಂತಾಗುತ್ತದೆ ಎಂದು ಇನ್ಫೊಸಿಸ್‌ ಕಾರ್ಯನಿರ್ವಾಹಕೇತರ ಮುಖ್ಯಸ್ಥ ನಂದನ್‌ ನಿಲೇಕಣಿ ಹೇಳಿದರು.

ದೇಶಪಾಂಡೆ ಫೌಂಡೇಷನ್‌ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ  ಪಠ್ಯಗಳು ಕ್ಯು.ಆರ್‌. ಕೋಡ್‌ ಮಾದರಿಯಲ್ಲಿ ಇರಲಿವೆ. ಸ್ಮಾರ್ಟ್‌ ಫೋನ್‌ಗಳ ಮೂಲಕ ಕೋಡ್‌ ಸ್ಕ್ಯಾನ್‌ ಮಾಡಿ ಪಠ್ಯ ನೋಡಬಹುದು’ ಎಂದರು.

‘ಶಿಕ್ಷಣ ಕ್ಷೇತ್ರದಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಿದೆ. ಕಪ್ಪುಹಲಗೆ ಮೇಲೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಈಗ ಡಿಜಿಟಲ್‌ ಶಿಕ್ಷಣದತ್ತ ಹೊರಳುತ್ತಿದ್ದಾರೆ. ಭಾರತದಾದ್ಯಂತ ಡಿಜಿಟಲ್‌ ಶಿಕ್ಷಣಕ್ಕೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸುವ ಅಗತ್ಯವಿದೆ’ ಎಂದು ನಿಲೇಕಣಿ ನುಡಿದರು.

ADVERTISEMENT

ಆರ್ಘ್ಯಂ ಸಂಸ್ಥಾಪಕಿ ಹಾಗೂ ನಂದನ್‌ ನಿಲೇಕಣಿ ಅವರ ಪತ್ನಿ ರೋಹಿಣಿ ಮಾತನಾಡಿ ‘ಕ್ಯು.ಆರ್‌. ಕೋಡ್‌ ಮೂಲಕ ಪಠ್ಯ ನೋಡಲು ಮಹಾರಾಷ್ಟ್ರದ ಬಹುತೇಕ ಸರ್ಕಾರಿ ಶಾಲೆಗಳ ಶಿಕ್ಷಕರು ತರಬೇತಿ ಪಡೆದಿದ್ದಾರೆ. ಇದರ ಬಗ್ಗೆ ವಿದ್ಯಾರ್ಥಿಗಳಿಗೂ ಮಾಹಿತಿ ನೀಡುತ್ತಿದ್ದಾರೆ. ಮುಂದೆ ಇನ್ನಷ್ಟು ರಾಜ್ಯಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ’ ಎಂದರು. ದೇಶಪಾಂಡೆ ಫೌಂಡೇಷನ್‌ ಮುಖ್ಯಸ್ಥ ಗುರುರಾಜ ದೇಶಪಾಂಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.