ADVERTISEMENT

ಕಣ್ಣೀರು ಹಾಕಿದ ಶಾಸಕ ಸಾ.ರಾ.ಮಹೇಶ್

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2018, 19:56 IST
Last Updated 4 ಫೆಬ್ರುವರಿ 2018, 19:56 IST

ಕೆ.ಆರ್.ನಗರ (ಮೈಸೂರು ಜಿಲ್ಲೆ): ‘ನನ್ನ ಹೆಸರು ಕೆಡಿಸಲು ಮಗನ ಹೆಸರು ಮಾಧ್ಯಮದಲ್ಲಿ ಬರುವಂತೆ ಮಾಡಿದರು. ಅವನು ಇಲ್ಲಿ ಬೇಡ ಎಂದು ಓದಲು ವಿದೇಶಕ್ಕೆ ಕಳುಹಿಸುವಂತಾಯಿತು. ಮನೆಯಿಂದ ಹೊರಡುವಾಗ ಅವನೊಂದಿಗೆ ಇರಲಿಕ್ಕೆ ಸಾಧ್ಯವಾಗಲಿಲ್ಲ. ಇಂತಹ ರಾಜಕಾರಣ ಬೇಕಾಗಿಲ್ಲ’ ಎಂದು ಶಾಸಕ ಸಾ.ರಾ.ಮಹೇಶ್ ಭಾವುಕರಾಗಿ ಕಣ್ಣೀರು ಹಾಕಿ ಭಾಷಣ ಅರ್ಧಕ್ಕೆ ನಿಲ್ಲಿಸಿದ ಘಟನೆ ಶನಿವಾರ ನಡೆಯಿತು.

ಇಲ್ಲಿನ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ಶನಿವಾರ ನಡೆದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘದ
ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

‘ಎಚ್.ಡಿ.ದೇವೇಗೌಡ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ಯಾವುದೇ ಅನುದಾನ ಪಡೆದಿಲ್ಲ. ₹ 1.50 ಕೋಟಿ ವೈಯಕ್ತಿಕ ಹಣ ನೀಡಿದ ತಪ್ಪಿಗೆ ನನ್ನನ್ನೂ ಹೈಕೋರ್ಟಿಗೆ ಎಳೆಯಲಾಗಿದೆ. ಸಂಘದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದೇನೆ’ ಎಂದರು.

ADVERTISEMENT

‘ಜೆಡಿಎಸ್ ಪಕ್ಷದಲ್ಲಿದ್ದ ಕೆಲವರು ಜಿಲ್ಲಾ ಪಂಚಾಯಿತಿ ಟಿಕೆಟ್ ಪಡೆದರು. ಗೆಲ್ಲಲು ಹಣವೂ ಪಡೆದರು. ವರ್ಗಾವಣೆಯಲ್ಲಿ ಹಣವೂ ಮಾಡಿಕೊಂಡರು. ನಂತರ ಸಾ.ರಾ. ಸಾಮ್ರಾಜ್ಯ ಸರ್ವನಾಶ ಮಾಡುತ್ತೇನೆ ಎಂದು ಹೇಳಿಕೆ ಕೊಟ್ಟರು. ಇವರಿಗೆ ಮತ್ತೆ ಕರೆದು ಟಿಕೆಟ್ ನೀಡಬೇಕಾಗಿತ್ತಾ’ ಎಂದು ಕಾಂಗ್ರೆಸ್ ಮುಖಂಡ ಎಂ.ಟಿ. ಕುಮಾರ್, ಬಿಜೆಪಿ ಮುಖಂಡ ಹೊಸಹಳ್ಳಿ ವೆಂಕಟೇಶ್ ಹೆಸರು ಪ್ರಸ್ತಾಪಿಸದೇ ಪ್ರಶ್ನಿಸಿದರು.

‘ಕೆಲ ಶಿಕ್ಷಕರು ಅಲ್ಲೆಲ್ಲೋ ನಿಂತುಕೊಂಡು ನನ್ನ ಬಗ್ಗೆ ಚರ್ಚಿಸುತ್ತಾರೆ. ಯಾರಿಗಾದರೂ ತೊಂದರೆ ಕೊಟ್ಟಿದ್ದೇನೆಯೇ ಅಥವಾ ಬೇರೆಯವರಂತೆ ಜಾತಿ ರಾಜಕಾರಣ ಮಾಡುತ್ತಿದ್ದೇನೆಯೇ. ಜಾತ್ಯತೀತವಾಗಿ ಕೆಲಸ ಮಾಡುತ್ತಿದ್ದೇನೆ. ನೀವು ಖುಷಿ ಪಡಬೇಕು. ನನಗೆ ಯಾವ
ಜಾತಿಯೂ ಗೊತ್ತಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.