ADVERTISEMENT

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಕ್ರಮ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 19:30 IST
Last Updated 8 ಫೆಬ್ರುವರಿ 2018, 19:30 IST

ಬೆಂಗಳೂರು: ಚಿಕ್ಕಮಗಳೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಕುರಿತು 2017-18ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದ್ದು, ಸರ್ಕಾರಿ ಜಮೀನು ಕೂಡಾ ಗುರುತಿಸಲಾಗಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.

ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಸಿ.ಟಿ. ರವಿ, ‘2013 ಮಾರ್ಚ್‌ 12ರಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ, 2014ರಲ್ಲಿ ಜಾಗ ಗುರುತಿಸಿದ್ದರೂ ಚಿಕ್ಕಮಗಳೂರಿನಲ್ಲಿ ಇನ್ನೂ ವೈದ್ಯಕೀಯ ಕಾಲೇಜು ಸ್ಥಾಪಿಸದೆ ತಾರತಮ್ಯ ಮಾಡಲಾಗುತ್ತಿದೆ’ ಎಂದು ದೂರಿದರು.

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಪರವಾಗಿ ಉತ್ತರಿಸಿದ ಖಾದರ್‌, ‘ಅನುದಾನ ಲಭ್ಯತೆಗೆ ಅನುಗುಣವಾಗಿ ಕಾಲೇಜು ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಭಾರತೀಯ ವೈದ್ಯಕೀಯ ಪರಿಷತ್‌ (ಎಂಸಿಐ) ಮಾನದಂಡಗಳ ಅನುಸಾರ ಕಟ್ಟಡ ಹಾಗೂ ಮೂಲಸೌಲಭ್ಯಗಳನ್ನು ಒದಗಿಸಿ ಅನುಮತಿ ಪತ್ರ ಪಡೆಯಲು ಎಂಸಿಐಗೆ ಅರ್ಜಿ ಸಲ್ಲಿಸಲಾಗುವುದು ಎಂದು ಸಚಿವರು ವಿವರಿಸಿದರು.

ADVERTISEMENT

‘ಚಿಕ್ಕಮಗಳೂರು ಮತ್ತು ತುಮಕೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಪ್ರಸ್ತಾವ ನನೆಗುದಿಯಲ್ಲಿದೆ’ ಎಂದು ಗಮನ ಸೆಳೆದ ಕಾಂಗ್ರೆಸ್ಸಿನ ಕೆ.ಎನ್‌. ರಾಜಣ್ಣ,‌ ಸದನದಲ್ಲಿ ಹೆಚ್ಚಿನ ಚರ್ಚೆಗೆ ಕಾಲಾವಕಾಶ ನೀಡುವಂತೆ ಆಗ್ರಹಿಸಿದರು. ಸಭಾಧ್ಯಕ್ಷ ಪೀಠದಲ್ಲಿದ್ದ ಎನ್‌.ಎಚ್. ಶಿವಶಂಕರ ರೆಡ್ಡಿ ಸಮಯಾವಕಾಶ ನೀಡಿ ಚರ್ಚೆಗೆ ಕೊನೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.