ADVERTISEMENT

ಲಘು ಲಾಠಿ ಪ್ರಹಾರ; ನಿಷೇಧಾಜ್ಞೆ ಜಾರಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 19:30 IST
Last Updated 9 ಫೆಬ್ರುವರಿ 2018, 19:30 IST

ಸಖರಾಯಪಟ್ಟಣ (ಕಡೂರು): ತಾಲ್ಲೂಕಿನ ಅಯ್ಯನಕೆರೆಯಿಂದ ಬ್ರಹ್ಮಸಮುದ್ರ ಕೆರೆಗೆ ನೀರು ಹರಿಸುವ ವಿಚಾರದಲ್ಲಿ ಶುಕ್ರವಾರ ಎರಡು ಗುಂಪುಗಳ ನಡುವೆ ಗಲಾಟೆ, ಕಲ್ಲುತೂರಾಟ ನಡೆಯಿತು. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.

ಬ್ರಹ್ಮಸಮುದ್ರ ಕೆರೆಗೆ ನೀರು ಹರಿಸಬೇಕು ಎಂದು ಬಿಸಲೇಹಳ್ಳಿ, ಬಾಣೂರು, ಚಿಕ್ಕಬಾಣೂರು, ಪಿಳ್ಳೇನಹಳ್ಳಿ ಗ್ರಾಮಸ್ಥರು ಶುಕ್ರವಾರ ಸಖರಾಯಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದರು. ಬ್ರಹ್ಮಸಮುದ್ರ ಕೆರೆಗೆ ನೀರು ಹರಿಸಬಾರದು ಎಂದು ಸಖರಾಯಪಟ್ಟಣ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು.

ಸ್ಥಳಕ್ಕೆ ಬಂದ ತರೀಕೆರೆ ಉಪವಿಭಾಗಾಧಿಕಾರಿ ಬಿ.ಬಿ.ಸರೋಜಾ, ತಹಶೀಲ್ದಾರ್ ಎಂ.ಭಾಗ್ಯ, ಪೊಲೀಸ್‌ ಇನ್‌ಸ್ಪೆಕ್ಟರ್‌ ಕೆ.ಸತ್ಯನಾರಾಯಣ ಅವರು ಪ್ರತಿಭಟನಾನಿರತ ಮುಖಂಡರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಸಂಧಾನ ಸಭೆ ನಡೆಸಿದರು. ಸಭೆಯಲ್ಲಿ ಎರಡು ಬಣದವರ ನಡುವೆ ಒಮ್ಮತ ವ್ಯಕ್ತವಾಗಲಿಲ್ಲ.

ADVERTISEMENT

ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ಸರೋಜಾ, ಫೆ.10ರಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಮುಖಂಡರೊಂದಿಗೆ ಮತ್ತೊಂದು ಸಭೆ ನಡೆಸಿ, ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು ಎಂದರು.

ಸಭೆಯಿಂದ ಹೊರಬಂದ ಎರಡೂ ಕಡೆಯ ಮುಖಂಡರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಜಮಾಯಿಸಿ, ಪರಸ್ಪರ ಮಾತಿನ ಚಕಮಕಿ ನಡೆಸಿದರು. ಅದು ಘರ್ಷಣೆಗೆ ತಿರುಗಿತು. ಉದ್ರಿಕ್ತರು ಪರಸ್ಪರ ಕಲ್ಲು ತೂರಾಟ ನಡೆಸಿದರು. ಕೆಲವರು ದೊಣ್ಣೆಗಳನ್ನು ಹಿಡಿದು ಹೊಡೆದಾಟಕ್ಕೆ ಮುಂದಾದರು. ಉಭಯ ಗುಂಪುಗಳ ನಡುವೆ ಜಗಳ ತಾರಕಕ್ಕೇರಿತು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ಮಾಡಿದರು. ಎರಡೂ ಗುಂಪುಗಳವರು ಚೆಲ್ಲಾಪಿಲ್ಲಿಯಾಗಿ ಓಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.