ADVERTISEMENT

ಕರಾಳ ಶಿವರಾತ್ರಿ ಆಚರಣೆಗೆ ಉಪನ್ಯಾಸಕರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 19:30 IST
Last Updated 11 ಫೆಬ್ರುವರಿ 2018, 19:30 IST

ಬೆಂಗಳೂರು: ವೇತನ ಹೆಚ್ಚಳ ಬೇಡಿಕೆಗೆ ಆರನೇ ವೇತನ ಆಯೋಗ ಸ್ಪಂದಿಸದಿರುವುದನ್ನು ಪ್ರತಿಭಟಿಸಿ ಇದೇ 13 ರಂದು ‘ಕರಾಳ ಶಿವರಾತ್ರಿ’ ಆಚರಿಸಲು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ನಿರ್ಧರಿಸಿದ್ದಾರೆ.

ನಗರದಲ್ಲಿ ಭಾನುವಾರ ನಡೆದ ಎರಡೂ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದರು.

ನಗರದ ಮೌರ್ಯ ವೃತ್ತದ ಬಳಿಯ ಮಹತ್ಮಾ ಗಾಂಧಿ ಪ್ರತಿಮೆ ಎದುರು ಅಂದು ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು. ಇದೇ 27ರಂದು ಮತ್ತೊಮ್ಮೆ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ವಿವರಿಸಿದರು.

ADVERTISEMENT

‘ಈ ಹಿಂದೆ ಉಪನ್ಯಾಸಕರಿಗೆ ನೀಡುತ್ತಿದ್ದ ₹ 500 ಮತ್ತು ಪ್ರಾಂಶುಪಾಲರ ₹ 1,000 ಎಕ್ಸ್‌ಗ್ರೇಷಿಯಾವನ್ನು ಮೂಲ ವೇತನದಲ್ಲಿ ವಿಲೀನಗೊಳಿಸಿಲ್ಲ. ಪ್ರಾಂಶುಪಾಲರಿಗೆ ಪ್ರತ್ಯೇಕ ವೇತನ ಶ್ರೇಣಿಗೂ ಆಯೋಗ ಶಿಫಾರಸು ಮಾಡಿಲ್ಲ’ ಎಂದೂ ಅವರು ದೂರಿದರು.

‘ಉಪನ್ಯಾಸಕರ ಬೇಡಿಕೆ ಪರಿಗಣಿಸಿದ್ದರೆ ಮೂಲ ವೇತನ ₹ 52,650 ಆಗಬೇಕಿತ್ತು. ಆದರೀಗ ಮಾತ್ರ ₹ 43,100 ಆಗಿದೆ. ಹೀಗಾಗಿ ಆಯೋಗದ ಶಿಫಾರಸುಗಳನ್ನು ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘ ತಿರಸ್ಕರಿಸುತ್ತಿದೆ’ ಎಂದು ಅವರು ಹೇಳಿದರು.

ಈ ಹಿಂದೆ 18 ದಿನ ನಡೆದ ಹೋರಾಟ ಸಂದರ್ಭದಲ್ಲಿ, ‘ನಿಮ್ಮ ಬೇಡಿಕೆಗೆ ವೇತನ ಆಯೋಗದ ಶಿಫಾರಸಿನಲ್ಲಿ ನ್ಯಾಯ ಸಿಗಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಸರ್ಕಾರ ಮಾತು ತಪ್ಪಿದ್ದು, ಅನಿವಾರ್ಯವಾಗಿ ಪ್ರತಿಭಟನೆ ನಡೆಸುವ ತೀರ್ಮಾನಿಸಲಾಗಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಶ್ರೀಕಂಠೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.