ADVERTISEMENT

ಆರಾಧ್ಯ ದೈವನಿಗಾಗಿ ವರ್ಷಗಟ್ಟಲೆ ಕಾಲ್ನಡಿಗೆ!

ರಾತ್ರಿಯ ನಿದ್ರೆಗೂ ಹಲಗೆಯೇ ಹಾಸಿಗೆ l ಬೊಗಸೆಯಲ್ಲಿ ಊಟ l ಪಿಂಚಿ ಕಮಂಡಲವಷ್ಟೇ ಆಸ್ತಿ

ಪ್ರವೀಣ ಕುಲಕರ್ಣಿ
Published 18 ಫೆಬ್ರುವರಿ 2018, 19:30 IST
Last Updated 18 ಫೆಬ್ರುವರಿ 2018, 19:30 IST
ಆರಾಧ್ಯ ದೈವನಿಗಾಗಿ ವರ್ಷಗಟ್ಟಲೆ ಕಾಲ್ನಡಿಗೆ!
ಆರಾಧ್ಯ ದೈವನಿಗಾಗಿ ವರ್ಷಗಟ್ಟಲೆ ಕಾಲ್ನಡಿಗೆ!   

ತ್ಯಾಗಿನಗರ (ಶ್ರವಣಬೆಳಗೊಳ): ‘ಪ್ರಥಮ ಮೋಕ್ಷಗಾಮಿ’ ಎನಿಸಿದ ಬಾಹುಬಲಿಯ ಮೇಲೆ ದಿಗಂಬರ ಮುನಿಗಳಿಗೆ ಎಷ್ಟೊಂದು ಪ್ರೀತಿಯೆಂದರೆ ಮಸ್ತಕಾಭಿಷೇಕದ ಸುವರ್ಣ ಕ್ಷಣ ಕಣ್ತುಂಬಿಕೊಳ್ಳಲು ಸಾವಿರಾರು ಕಿ.ಮೀ. ದೂರದಿಂದ ಕಾಲ್ನಡಿಗೆಯಲ್ಲೇ ಬಂದಿದ್ದಾರೆ.

ಆಚಾರ್ಯರಾದ ವರ್ಧಮಾನ ಸಾಗರ, ಪುಷ್ಪದಂತ ಸಾಗರ, ವಿಶುದ್ಧ ಸಾಗರ ಅವರಂತಹ ನೂರಾರು ಮುನಿಗಳು ರಾಜಸ್ಥಾನ, ಗುಜರಾತ್‌, ಮಧ್ಯಪ್ರದೇಶ, ಜಾರ್ಖಂಡ್‌ ಮತ್ತಿತರ ಭಾಗಗಳಿಂದ ವರ್ಷದಷ್ಟು ಹಿಂದಿನಿಂದಲೇ ಪರಿಕ್ರಮಣ ನಡೆಸುತ್ತಾ ಮಸ್ತಕಾಭಿಷೇಕದ ವೇಳೆಗೆ ಮಹಾ ವಿರಾಗಿಯ ಬೀಡನ್ನು ತಲುಪಿದ್ದಾರೆ.

ಒಂದೆಡೆ ನಿಲ್ಲದೆ, ದೇಶದ ಮೂಲೆ–ಮೂಲೆಗೆ ಕಾಲು ನಡಿಗೆಯಲ್ಲೇ ಸಂಚರಿಸುವ ಮುನಿಗಳೆಲ್ಲ ಸಕಾಲದಲ್ಲಿ ಶ್ರವಣಬೆಳಗೊಳ ತಲುಪುವ ಸಲುವಾಗಿ ಅವರಿಗೆ ಎರಡು ವರ್ಷಗಳಷ್ಟು ಮುಂಚಿತವಾಗಿಯೇ ಆಮಂತ್ರಣ ಹೋಗಿತ್ತು.

ADVERTISEMENT

ದೇಶದ ನಾನಾ ಭಾಗಗಳಿಂದ ಹೀಗೆ ಕಾಲ್ನಡಿಗೆಯಲ್ಲಿ ಬಂದು ವಿಂಧ್ಯಗಿರಿಯ ತಪ್ಪಲಲ್ಲಿ ಸಂಗಮಗೊಂಡ ಈ ಸಂತರಿಗೆ ‘ತ್ಯಾಗಿನಗರ’ದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ನಲ್ಲಿಯ ನೀರನ್ನು ಮುನಿಗಳು ಬಳಸುವುದಿಲ್ಲ. ಹೀಗಾಗಿ ಬಾವಿಯ ಸೌಲಭ್ಯವಿರುವ ಜಾಗದಲ್ಲೇ ಈ ನಗರವನ್ನು ನಿರ್ಮಿಸಲಾಗಿದೆ.

ಮುನಿಗಳ ದಿನಚರಿ ನೋಡಲು ‘ತ್ಯಾಗಿನಗರ’ಕ್ಕೆ ಭೇಟಿಯಿತ್ತಾಗ ಕಂಡ ನೋಟಗಳು ಕೌತುಕ ಮೂಡಿಸುತ್ತಿದ್ದವು. ಇಲ್ಲಿನ ಕುಟೀರಗಳನ್ನು ಕಾರ್ಡ್‌ ಬೋರ್ಡ್‌ ಹಲಗೆಗಳಿಂದ ನಿರ್ಮಿಸಲಾಗಿದೆ. ಅದೇ ಹಲಗೆಯಿಂದ ತಯಾರಿಸಿದ ಮಣೆಗಳನ್ನು ಬಿಟ್ಟರೆ ಈ ಕುಟೀರಗಳಲ್ಲಿ ಬೇರೆ ಯಾವುದೇ ಸಲಕರಣೆಗಳು ಇಲ್ಲ. ರಾತ್ರಿ ನಿದ್ರೆಗೂ ಈ ಹಲಗೆಯೇ ಹಾಸಿಗೆ. ಅನಾರೋಗ್ಯದಿಂದ ಬಳಲುವವರು ಮಾತ್ರ ಚಳಿಯಲ್ಲಿ ಹೊದಿಯಲು ಚಾಪೆ ಬಳಸುತ್ತಾರೆ.

ನವಿಲುಗರಿಗಳಿಂದ ಸಿದ್ಧಪಡಿಸಿದ ಪಿಂಚಿ, ಕಮಂಡಲ ಮತ್ತು ಸ್ವಾಧ್ಯಾಯಕ್ಕಾಗಿ ಇಟ್ಟುಕೊಂಡ ಕೆಲವು ಶಾಸ್ತ್ರಗ್ರಂಥಗಳು– ಇಷ್ಟೇ ಈ ಕುಟೀರಗಳಲ್ಲಿ ಬಿಡಾರ ಹೂಡಿರುವ ಪ್ರತಿಯೊಬ್ಬ ಮುನಿಯ ಆಸ್ತಿ. ನಸುಕಿನ ಮೂರು ಗಂಟೆಗಾಗಲೇ ತ್ಯಾಗಿನಗರಕ್ಕೆ ಬೆಳಗು ಆಗಿಬಿಡುತ್ತದೆ. ರಾತ್ರಿ ಮನದಲ್ಲಿ ಏನಾದರೂ ಆಲೋಚನೆಗಳು ಮೂಡಿದ್ದರೆ ಇಲ್ಲವೆ ಕನಸು ಕಂಡಿದ್ದರೆ ಅದರ ದೋಷ ಪರಿಹಾರ್ಥವಾಗಿ ನಸುಕಿನಲ್ಲಿ ಮೊದಲ ಪರಿಕ್ರಮಣ. ಅದಾದ ಬಳಿಕ ಧ್ಯಾನ. ಅದರ ಬೆನ್ನಿಗೆ ತೀರ್ಥಂಕರರ ಸ್ತುತಿ. ಒಂದಿಷ್ಟು ಸಮಯ ಸ್ವಾಧ್ಯಾಯಕ್ಕೆ ಮೀಸಲು.  ಬೆಳಗಿನ ಒಂಬತ್ತರ ಸುಮಾರಿಗೆ ಶುದ್ಧಿಕ್ರಿಯೆ ಪೂರೈಸಿ, ನಿಂತುಕೊಂಡೇ ಬೊಗಸೆಯಲ್ಲಿ ಆಹಾರ ಸ್ವೀಕರಿಸುವುದು ಕ್ರಮ. ನೀರು ಕುಡಿದು ಆಹಾರ ಚರ್ಯ ಪೂರೈಸಿದ ಬಳಿಕ ಮರುದಿನ ಬೆಳಗಿನವರೆಗೆ ಮತ್ತೆ ಏನನ್ನೂ ಅವರು ಸ್ವೀಕರಿಸುವುದಿಲ್ಲ. ಊಟದ ನಂತರ ತುಸು ಸಮಯ ಪರಿಕ್ರಮಣ ನಡೆಸಿ ಬಂದು, ಶ್ರಾವಕರಿಗೆ ಪ್ರವಚನ ನೀಡುವುದು ರೂಢಿ. ಹೀಗಾಗಿ ಬೆಳಿಗ್ಗೆ 10ರ ಬಳಿಕ ಕುಟೀರಗಳೆಲ್ಲ ಶ್ರಾವಕರಿಂದ ಗಿಜಿಗುಡುತ್ತವೆ. ದಿನದ ಮೂರನೇ ಪರಿಕ್ರಮಣವನ್ನು ಸಂಜೆ ಪೂರೈಸಿ, ಸ್ವಾಧ್ಯಾಯ ನಡೆಸಿ, ವಿಶ್ರಾಂತಿಗೆ ಜಾರುವುದು ಇವರ ದಿನಚರಿ.

‘ಅಹಿಂಸಾ, ಸತ್ಯ, ಅಚೌರ್ಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ – ಮುನಿಗಳ ಪಂಚ ಮಹಾವ್ರತಗಳು’ ಎಂದು ಹೇಳಿದರು ಮಾತಿಗೆ ಸಿಕ್ಕ ಚಂದ್ರಪ್ರಭ ಸಾಗರರು. ಭೇಟಿಗೆ ಬರುತ್ತಿದ್ದ ಭಕ್ತರ ಕುಶಲೋಪರಿ ವಿಚಾರಿಸುತ್ತಲೇ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು.

ತ್ಯಾಗಿಗಳ ದಿನಚರಿಯ ಕುರಿತು ಇನ್ನಷ್ಟು ಒಳನೋಟ ಬೀರಿದ ಮತ್ತೊಬ್ಬ ಮುನಿಯೆಂದರೆ ವೀರಸಾಗರರು. ‘ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ, ಧ್ಯಾನದಿಂದ ಸಿದ್ಧಿ –ಇಷ್ಟೇ ನೋಡಿ ನಮ್ಮ ಧ್ಯೇಯ’ ಎಂದು ಅವರು ಹೇಳಿದರು.

‘ಅಹಿಂಸೆಯ ಬೋಧನೆಗೆ ನಿಂತ ನಿಮ್ಮಿಂದಲೇ ಏಕೆ ದೇಹಕ್ಕೆ ಇಷ್ಟೊಂದು ಹಿಂಸೆ’ ಎಂಬ ನಮ್ಮ ಪ್ರಶ್ನೆ ನೇರವಾಗಿತ್ತು. ಅದಕ್ಕೆ ಒಂದಿನಿತೂ ಸಿಡಿಮಿಡಿಗೊಳ್ಳದ ಈ ಮುನಿ, ‘ಬೆರಣಿಯಲ್ಲಿ ಸಿಕ್ಕ ಕೂದಲು ತೆಗೆಯುವುದು ತುಸು ಕಷ್ಟ; ಬೆಣ್ಣೆಯಲ್ಲಿ ಸಿಕ್ಕ ಕೂದಲು ತೆಗೆಯುವುದು ಸಲೀಸು. ನಮ್ಮ ದೇಹವನ್ನು ಬೆರಣಿಯಿಂದ ಬೆಣ್ಣೆಗೆ ರೂಪಾಂತರಿಸುವ ಪ್ರಕ್ರಿಯೆ ಇದು. ಇದರಿಂದ ಆತ್ಮದ ಬಿಡುಗಡೆಯ ಹಾದಿ ಸಲೀಸಾಗುತ್ತದೆ’ ಎಂದು ಉತ್ತರಿಸಿದರು.

ಸಣ್ಣ ವಯಸ್ಸಿನ ಮುನಿಗಳೇ ದೊಡ್ಡ ಸಂಖ್ಯೆಯಲ್ಲಿರುವ ಕುರಿತು ಅವರನ್ನು ಕೇಳಿದಾಗ, ‘ಧರ್ಮದ ರಥವನ್ನು ಹೋರಿಗಳೇ ಎಳೆಯುತ್ತಿದ್ದ ಕನಸನ್ನು ಚಂದ್ರಗುಪ್ತ ಮೌರ್ಯರು ಬಹುಕಾಲದ ಹಿಂದೆಯೇ ಕಂಡಿದ್ದರು. ಅದರ ಅರ್ಥ ಧರ್ಮದ ಕಾರ್ಯಕ್ಕೆ ಯುವ ಸಮುದಾಯ ಕಟಿಬದ್ಧವಾಗಿ ನಿಲ್ಲಲಿದೆ ಎಂಬುದಾಗಿತ್ತು. ಅದೀಗ ನಿಜವಾಗುತ್ತಿದೆ’ ಎನ್ನುತ್ತಾ ಈಗಿನ ವಿದ್ಯಮಾನಕ್ಕೆ ಶತಮಾನಗಳ ಹಿಂದಿನ ಕನಸಿನ ಸೇತು ಕಟ್ಟಿದರು.

***

ಯಾವ ಮುನಿ, ಎಷ್ಟು ದೂರದಿಂದ ಬಂದರು?

ವರ್ಧಮಾನ ಸಾಗರರು 3,200 ಕಿ.ಮೀ.

ವಿಶುದ್ಧ ಸಾಗರರು 1,800 ಕಿ.ಮೀ

ಪುಷ್ಪದಂತ ಸಾಗರರು 1,600 ಕಿ.ಮೀ.

(ಸಾವಿರ ಕಿ.ಮೀ. ದೂರ ಕ್ರಮಿಸಿ ಬಂದ ಮುನಿಗಳು ನೂರಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ)

***

ಇದೊಂದು ಸೌಭಾಗ್ಯದ ಕ್ಷಣ. ಇಲ್ಲಿಗೆ ಬಂದಿರುವುದು ಜೀವನದಲ್ಲಿ ಏನನ್ನೋ ಸಾಧಿಸಿದಂತಹ ಹೆಮ್ಮೆ ಮೂಡಿಸಿದೆ
–ವೀರಸಾಗರ ಮಹಾರಾಜ್‌, ಮಸ್ತಕಾಭಿಷೇಕಕ್ಕೆ ಬಂದ ಮುನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.