ADVERTISEMENT

ಬಜೆಟ್‌ ಮೇಲೆ ವಿಶ್ವಾಸ ಇಲ್ಲ: ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 19:30 IST
Last Updated 20 ಫೆಬ್ರುವರಿ 2018, 19:30 IST

ಬೆಂಗಳೂರು: ‘ಸರ್ಕಾರದ ಆಡಳಿತ ಮತ್ತು ಬಜೆಟ್ ಮೇಲೆ ರೈತರಿಗೆ, ಜನರಿಗೆ ವಿಶ್ವಾಸ ಇಲ್ಲ. ತೊಗರಿ ಖರೀದಿ ನಿಲ್ಲಿಸಿದ್ದೀರಿ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಬಜೆಟ್‌ ಮೇಲೆ ವಿಧಾನಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಕಲಬುರ್ಗಿಯಲ್ಲಿ ರೈತರೊಬ್ಬರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದೂ ಹೇಳಿದರು. ಮಧ್ಯಪ್ರವೇಶಿಸಿದ ಸಚಿವ ಟಿ.ಬಿ. ಜಯಚಂದ್ರ, ‘ರಾಜ್ಯದಲ್ಲಿ 40 ಲಕ್ಷ ಕ್ವಿಂಟಲ್‍ನಷ್ಟು ತೊಗರಿ ಇಳುವರಿ ಬಂದಿದೆ. 3.16 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ 26 ಲಕ್ಷ ಕ್ವಿಂಟಲ್ ತೊಗರಿ ಖರೀದಿಗಷ್ಟೆ ಅವಕಾಶ ನೀಡಿದೆ. ಖರೀದಿ ಮಿತಿ ಹೆಚ್ಚಿಸಲು ಮನವಿ ಮಾಡಲಾಗಿದೆ’ ಎಂದರು.

‘ಕೇಂದ್ರ ಅನುಮತಿ ಕೊಟ್ಟಿಲ್ಲ ಎಂಬ ಕಾರಣ ನೀಡಿ ಕೈಚೆಲ್ಲಿ ಕುಳಿತರೆ, ರೈತರು ಸಾಯಬೇಕೆ? ರಾಜ್ಯ ಸರ್ಕಾರದ ಜವಾಬ್ದಾರಿ ಏನೂ ಇಲ್ಲವೇ?’ ಎಂದು ಶೆಟ್ಟರ್‌ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಭ್ರಷ್ಟಾಚಾರದಲ್ಲಿ ನೀವು ನಂಬರ್‌ 1’ ಎಂದು ಶೆಟ್ಟರ್‌ ದೂರಿದಾಗ, ‘ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವರ ಬಗ್ಗೆಯೂ ಮಾತನಾಡಿ’ ಎಂದು ಜಯಚಂದ್ರ ವ್ಯಂಗ್ಯವಾಡಿದರು.

‘ಜೈಲಿಗೆ ಹೋದವರನ್ನು ಅಪ್ಪಿಕೊಂಡು, ಪಕ್ಕದಲ್ಲೇ ಕೂರಿಸಿಕೊಳ್ಳುತ್ತಿದ್ದೀರಿಲ್ಲಾ (ಆನಂದ್ ಸಿಂಗ್)? ನಿಮಗೇನಿದೆ ನೈತಿಕತೆ? ಎಂದು ಶೆಟ್ಟರ್‌ ಕೇಳಿದರು.

‘ಲೋಕಾಯುಕ್ತ ಮುಚ್ಚದೇ ಇದ್ದಿದ್ದರೆ ನಿಮ್ಮಲ್ಲೂ ಹಲವರು ಜೈಲಿಗೆ ಹೋಗುತ್ತಿದ್ದಿರಿ. ಅದಕ್ಕಾಗಿಯೇ ಅದನ್ನು ಮುಚ್ಚಿದಿರಿ’ ಎಂದು ಬಿಜೆಪಿಯ ನಾರಾಯಣಸ್ವಾಮಿ ಕಾಲೆಳೆದರು.

‘ಮುಖ್ಯಮಂತ್ರಿ ವಿರುದ್ಧ ಎಸಿಬಿಯಲ್ಲಿ 40 ಕೇಸ್‍ಗಳಿವೆ. ಯಾವುದರಲ್ಲೂ ವಿಚಾರಣೆ ನಡೆಯುತ್ತಿಲ್ಲ. ಇಂಥದ್ದರಲ್ಲೆಲ್ಲಾ ಪಿಎಚ್‍.ಡಿ ಮಾಡಿದವರು ಯಾರಾದರೂ ಇದ್ದರೆ ಅದು ಮುಖ್ಯಮಂತ್ರಿ’ ಎಂದು ಬಿಜೆಪಿಯ ಆರ್‌. ಅಶೋಕ ಕೆಣಕಿದರು.

‘ನೀವು ಲೋಕಪಾಲ್ ಏನು ಮಾಡಿದ್ದೀರಿ?’ ಎಂದು ಜಯಚಂದ್ರ ಕೇಳಿದಾಗ, ‘ಲೋಕಪಾಲ್ ಬಗ್ಗೆ ಸಂಸತ್‍ನಲ್ಲಿ ಮಾತನಾಡಲು ನಿಮ್ಮ ಸಂಸದರಿಗೆ ಹೇಳಿ. ಅವರು ಯಾರೂ ಅಲ್ಲಿ ಮಾತನಾಡುವುದಿಲ್ಲ. ಎಲ್ಲ ನಿದ್ದೆ ಹೊಡೆಯುತ್ತಿದ್ದಾರೆ’ ಎಂದು ಅಶೋಕ ತಿರುಗೇಟು ನೀಡಿದರು.

‘ರೈತರೇ ಸಾಲ ಕಟ್ಟಬೇಡಿ’

‘ನೀರವ್‌ ಮೋದಿ, ವಿಜಯ ಮಲ್ಯ ಸೇರಿದಂತೆ ಕೆಲವು ಉದ್ಯಮಿಗಳಿಂದ ₹ 1 ಲಕ್ಷ ಕೋಟಿಯಷ್ಟು ವಂಚನೆ ಆಗಿದೆ. ಅದು ವಸೂಲಿ ಆಗುವವರೆಗೆ ಸಾಲ ಕಟ್ಟುವುದಿಲ್ಲ ಎಂದು ರೈತರು ನಿರ್ಣಯ ತೆಗೆದುಕೊಳ್ಳಬೇಕು’ ಎಂದು ಕಾಂಗ್ರೆಸ್‌ನ ಕೆ.ಎನ್‌. ರಾಜಣ್ಣ ಒತ್ತಾಯಿಸಿದರು.

‘ವಿಜಯ್‌ ಮಲ್ಯ ₹ 9000 ಕೋಟಿ, ಕೊಠಾರಿ ₹ 800 ಕೋಟಿ ವಂಚಿಸಿದ್ದಾರೆ. ಅವರ ಸಾಲ ವಸೂಲಿಗೆ ಕ್ರಮ ಕೈಗೊಳ್ಳದ ವಿನಾ ನಾವ್ಯಾರೂ ಸಾಲ ಕಟ್ಟುವುದಿಲ್ಲ ಎಂದು ಶಪಥ ಮಾಡುವಂತೆ ರೈತ ಸಮಯದಾಯಕ್ಕೆ ಈ ವೇದಿಕೆ (ವಿಧಾನಸಭೆ) ಮೂಲಕ ಕರೆ ಕೊಡುತ್ತಿದ್ದೇನೆ’ ಎಂದೂ ರಾಜಣ್ಣ ಹೇಳಿದರು.

ಶೆಟ್ಟರ್‌ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.