ADVERTISEMENT

60 ಲಕ್ಷ ನಕಲಿ ಪಡಿತರ ಚೀಟಿ ಪತ್ತೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 18:20 IST
Last Updated 23 ಫೆಬ್ರುವರಿ 2011, 18:20 IST

ಬೆಂಗಳೂರು: ರಾಜ್ಯದಲ್ಲಿ ಕುಟುಂಬಗಳಿಗಿಂತ ಪಡಿತರ ಚೀಟಿಗಳ ಸಂಖ್ಯೆ ಜಾಸ್ತಿ ಇದ್ದು, ಇದರ ದುರುಪಯೋಗ ಆಗುತ್ತಿದೆ. ನಕಲಿ ಪಡಿತರ ಚೀಟಿಗಳನ್ನು ಪತ್ತೆಹಚ್ಚುವ ದೃಷ್ಟಿಯಿಂದ ವಿದ್ಯುತ್ ಮೀಟರ್ ಸಂಖ್ಯೆಯನ್ನು ಅಡುಗೆ ಅನಿಲ ಸಂಪರ್ಕಕ್ಕೆ ಹೊಂದಾಣಿಕೆ ಮಾಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿ ಬಿ.ಎ.ಹರೀಶ್‌ಗೌಡ ಸ್ಪಷ್ಟ    ಪಡಿಸಿದರು.

‘ಒಂದು ಕುಟುಂಬಕ್ಕೆ ಒಂದೇ ಅಡುಗೆ ಅನಿಲ ಸಂಪರ್ಕ ಹೊಂದಿರುವವರು ಆತಂಕಪಡುವ ಅಗತ್ಯವಿಲ್ಲ. ಅವರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ, ಒಂದೇ ಕುಟುಂಬದವರು 4-5 ಪಡಿತರ ಚೀಟಿ, ಅಡುಗೆ ಅನಿಲ ಸಂಪರ್ಕಗಳನ್ನು ಪಡೆದಿದ್ದಾರೆ. ಅಂತಹವರನ್ನು ಗುರುತಿಸಿ ನಕಲಿ ಸಂಪರ್ಕಗಳನ್ನು ರದ್ದುಪಡಿಸುವುದು ಇಲಾಖೆಯ ಉದ್ದೇಶವಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯದಲ್ಲಿ ಒಟ್ಟು 1.20 ಕೋಟಿ ಕುಟುಂಬಗಳಿದ್ದು, 1.60 ಕೋಟಿ ಪಡಿತರ ಚೀಟಿಗಳು ಚಾಲ್ತಿಯಲ್ಲಿವೆ. ಇನ್ನೂ ಸುಮಾರು 20 ಲಕ್ಷ ಕುಟುಂಬಗಳಿಗೆ ಪಡಿತರ ಚೀಟಿ ಸಿಕ್ಕಿಲ್ಲ. ಇದನ್ನು ಗಮನಿಸಿದರೆ ಸುಮಾರು 60 ಲಕ್ಷ ನಕಲಿ ಪಡಿತರ ಚೀಟಿಗಳು ಇರುವುದು ಗೊತ್ತಾಗುತ್ತದೆ. ಇದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಷ್ಟವಾಗುತ್ತಿದೆ ಎಂಬುದಾಗಿ ಹೇಳಿದರು.

2006ರ ಮಾರ್ಚ್‌ನಲ್ಲಿ ಪಡಿತರ ಚೀಟಿ ವಿತರಿಸುವ ಜವಾಬ್ದಾರಿಯನ್ನು ಕೊಮ್ಯಾಟ್ ಸಂಸ್ಥೆಗೆ ವಹಿಸಿದಾಗ, 1.10 ಕೋಟಿ ಪಡಿತರ ಚೀಟಿಗಳು, 1.10 ಕೋಟಿ ಕುಟುಂಬಗಳು ಇದ್ದವು. ಈಗ 1.20 ಕುಟುಂಬಗಳಿದ್ದರೆ, ಕಾರ್ಡ್‌ಗಳ ಸಂಖ್ಯೆ 1.60 ಕೋಟಿಗೆ ಏರಿದೆ. ಅನರ್ಹ ಪಡಿತರ ಚೀಟಿಗಳ ಸಂಖ್ಯೆ ಮೀತಿ ಮೀರಿದೆ. ಇದಕ್ಕೆ ಕಡಿವಾಣ ಹಾಕದೆ ವಿಧಿ ಇಲ್ಲ ಎಂದರು.

ಫಲಾನುಭವಿಗಳಿಂದ ಪ್ರಮಾಣ ಪತ್ರ ಪಡೆದು ಪಡಿತರ ಚೀಟಿ ನೀಡಿ ಎಂದು ಸರ್ಕಾರವೇ 2008ರಲ್ಲಿ ಹೇಳಿತ್ತು ಎಂದು ಕೊಮ್ಯಾಟ್ ಸಂಸ್ಥೆ ಹೇಳುತ್ತಿರುವುದು ಸತ್ಯಕ್ಕೆ ದೂರವಾದುದು. ಈ ರೀತಿಯ ಯಾವುದೇ ಆದೇಶವನ್ನು ಹೊರಡಿಸಿಲ್ಲ.

ಪ್ರಮಾಣ ಪತ್ರ ಪಡೆದ ನಂತರ ಅದನ್ನು ಹೆಬ್ಬೆಟ್ಟಿನ ಗುರುತಿನೊಂದಿಗೆ ಹೋಲಿಕೆ ಮಾಡಿ ಪಡಿತರ ಚೀಟಿ ನೀಡಬೇಕಿತ್ತು. ಆದರೆ ಆ ರೀತಿ ಮಾಡಿಲ್ಲ. ಅವ್ಯವಸ್ಥೆಗೆ ಇದೇ ಕಾರಣ ಎಂದರು.

195 ದಿವಸಗಳಲ್ಲಿ ಕಾರ್ಡ್ ವಿತರಿಸಲು ಕೊಮ್ಯಾಟ್ ಸಂಸ್ಥೆಗೆ 60 ಕೋಟಿ ರೂಪಾಯಿಯ ಟೆಂಡರ್ ನೀಡಲಾಗಿತ್ತು. 54 ಕೋಟಿ ರೂಪಾಯಿ ಹಣ ಸಹ ಪಾವತಿಯಾಗಿದೆ. ಆದರೆ ಪಡಿತರ ಚೀಟಿ ವಿತರಣೆಯ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ. ಅರ್ಹರಿಗೆ ಪಡಿತರ ಚೀಟಿ ಸಿಗಬೇಕು ಎಂಬುದು ಸರ್ಕಾರದ ಆಶಯ.

ಆದ್ದರಿಂದ ಗ್ರಾಹಕರಿಂದ ವಿದ್ಯುತ್ ಮೀಟರ್ ಸಂಖ್ಯೆ, ಅಡುಗೆ ಅನಿಲ ಸಂಪರ್ಕ ಸಂಖ್ಯೆಯನ್ನು ಪಡೆದು ಹೊಂದಾಣಿಕೆ ಮಾಡಲಾಗುವುದು. ಪಡಿತರ ಚೀಟಿ ಸಲ್ಲಿಸುವುದು ಕಡ್ಡಾಯವಲ್ಲ. ಇದ್ದವರು ಜೆರಾಕ್ಸ್ ಪ್ರತಿ ನೀಡಬೇಕು. ಇಲ್ಲದೆ ಇದ್ದವರು ವಿದ್ಯುತ್ ಮೀಟರ್‌ನ ಬಿಲ್‌ನೊಂದಿಗೆ ಅಡುಗೆ ಅನಿಲ ಸಂಪರ್ಕ ಸಂಖ್ಯೆ ನೀಡಿದರೆ ಸಾಕು ಎಂದುಅವರು ಹೇಳಿದರು.

ಮಾಹಿತಿ ಸಲ್ಲಿಸದೆ ಇರುವವರ ಪಟ್ಟಿಯನ್ನು ಇಲಾಖೆಯ ವೆಬ್‌ಸೈಟ್ ಮತ್ತು ಗ್ಯಾಸ್ ವಿತರಕರ ಅಂಗಡಿಗಳ ಮುಂದೆ ಪ್ರಕಟಿಸಲಾಗುತ್ತದೆ. ಅವಿಭಕ್ತ ಕುಟುಂಬಗಳಿಗೆ ಹೊಸ ನಿಯಮ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಅನರ್ಹ ಪಡಿತರ ಚೀಟಿ, ಅಕ್ರಮ ಅನಿಲ ಸಂಪರ್ಕಕ್ಕೆ ಕಡಿವಾಣ ಹಾಕುವುದು ಸರ್ಕಾರದ ಉದ್ದೇಶಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT