ADVERTISEMENT

ರಾಜ್ಯ, ಹೊರ ರಾಜ್ಯ ವಿ.ವಿಗಳ ಹೆಸರಿನ 6,846 ನಕಲಿ ಅಂಕಪಟ್ಟಿ ಜಪ್ತಿ

ರಾಜ್ಯ, ಹೊರ ರಾಜ್ಯ ವಿ.ವಿಗಳ ಹೆಸರಿನಲ್ಲಿ ನಕಲಿ ಅಂಕ ಪಟ್ಟಿ ತಯಾರಿಸಿ ಮಾರಾಟ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 22:10 IST
Last Updated 27 ಜನವರಿ 2023, 22:10 IST
   

ಬೆಂಗಳೂರು: ನಕಲಿ ಅಂಕಪಟ್ಟಿ ತಯಾರಿಸಿ, ₹ 25 ಸಾವಿರದಿಂದ ₹ 30 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವ ಸಿಸಿಬಿ ಪೊಲೀಸರು 6,846 ನಕಲಿ ಅಂಕಪಟ್ಟಿ, 22 ಲ್ಯಾಪ್‌ಟಾಪ್‌–ಕಂಪ್ಯೂಟರ್‌ ಹಾಗೂ 13 ಮೊಬೈಲ್‌ ವಶ ಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ರಾಜಾಜಿನಗರದ ನ್ಯೂ ಕ್ವೆಸ್ಟ್‌ ಟೆಕ್ನಾಲಜಿ, ಜೆ.ಪಿ ನಗರದ ಸಿಸ್ಟಂ ಕ್ವೆಸ್ಟ್‌, ದಾಸರಹಳ್ಳಿಯ ವಿಶ್ವಜ್ಯೋತಿ ಕಾಲೇಜು, ವಿಜಯನಗರದ ಬೆನಕಾ ಕರಸ್ಪಾಂಡನ್ಸ್ ಕಾಲೇಜಿನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಈ ಅಕ್ರಮ ಪತ್ತೆಯಾಗಿದೆ.

‘ಶಿಕ್ಷಣದ ಬಗ್ಗೆ ಸಲಹೆ ನೀಡುವುದಾಗಿ ಹೇಳಿಕೊಂಡು ನಗರದಲ್ಲಿ ಈ ನಾಲ್ಕೂ ಸಂಸ್ಥೆಗಳು ತಲೆಯೆತ್ತಿದ್ದವು. ಕೆಲವು ವಿಶ್ವವಿದ್ಯಾಲದ ಸಿಬ್ಬಂದಿಯ ಜತೆಗೆ ಶಾಮೀಲಾಗಿಯೂ ಅಕ್ರಮ ನಡೆಸುತ್ತಿರುವುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ರಾಜ್ಯ ಹಾಗೂ ಹೊರ ರಾಜ್ಯಗಳ ಒಟ್ಟು 15 ವಿಶ್ವವಿದ್ಯಾಲಯದ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ನ್ಯೂ ಕ್ವೆಸ್ಟ್‌ ಟೆಕ್ನಾಲಜಿ ಹಾಗೂ ಸಿಸ್ಟಂ ಕ್ವೆಸ್ಟ್‌ ಸಂಸ್ಥೆಗೆ ಸೇರಿದ ವಿಕಾಸ್‌ ಭಗತ್‌ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ’ ಎಂದು ತಿಳಿಸಿವೆ.

‘ಅಧಿಕೃತ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದುಕೊಂಡಿರಲಿಲ್ಲ. ಉಳಿದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಯಾವ ವಿ.ವಿ ಹೆಸರಿನಲ್ಲಿ ಎಷ್ಟು?: ‘ಅಣ್ಣಾಮಲೈ ವಿ.ವಿ ಹೆಸರಿನಲ್ಲಿ 238, ಸಿಕ್ಕಿಂ ವಿ.ವಿಯ 5,497, ಗೀತಂ ವಿ.ವಿಯ 728, ಬಿಐಎಸ್‌ಸಿ ವಿ.ವಿಯ 6, ಜನಾರ್ದನ್‌ ರೈ ನಗರ್‌ ವಿ.ವಿ 2, ಐಬಿವಿಇ ವಿ.ವಿಯ 12, ಕುವೆಂಪು ವಿ.ವಿಯ 159, ಜೈಪುರದ ಜೈನ್‌ ವಿಹಾರ್‌ ವಿ.ವಿಯ 27, ರಾಜಸ್ಥಾನದ ಸಿಂಗಾನಿಯ ವಿಶ್ವವಿದ್ಯಾಲಯದ 152, ಅರುಣಾಚಲ ಪ್ರದೇಶದ ವೆಂಕಟೇಶ್ವರ ವಿ.ವಿಯ 4, ಮಂಗಳೂರು ವಿ.ವಿಯ 7, ಛತ್ತೀಸಗಡದ ಆರ್‌ಐಒಎಸ್ ವಿಶ್ವವಿದ್ಯಾಲಯದ 5, ಹುಬ್ಬಳ್ಳಿಯ ಬಿಎಸ್‌ಇಎಚ್‌ನ 1, ಬೆಂಗಳೂರು ವಿ.ವಿಯ 1, ಕೆಎಸ್‌ಎಸ್‌ಎಲ್‌ ವಿ.ವಿ ಹೆಸರಿನಲ್ಲಿ 7 ಸೇರಿ ಒಟ್ಟು 6,846 ನಕಲಿ ಅಂಕಪಟ್ಟಿ ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಹೇಳಿವೆ.

‘ಆರೋಪಿ ವಿಕಾಸ್‌ ರಾಜ್ಯದ ಬೇರೆ ವಿ.ವಿಗಳ ಜತೆಗೆ ನೋಂದಣಿ ಮಾಡಿಕೊಂಡಿರುವುದಾಗಿ ಸುಳ್ಳು ಹೇಳಿಕೊಂಡು ಅಂಕಪಟ್ಟಿ
ನೀಡುತ್ತಿದ್ದ. ವಿದ್ಯಾರ್ಥಿ ಗಳಿಗೆ ಯಾವುದೇ ಪರೀಕ್ಷೆ ಬರೆಸದೆ ಪದವಿ ಕೋರ್ಸ್‌ಗಳ ಪ್ರಮಾಣಪತ್ರ ಹಾಗೂ ಅಂಕಪಟ್ಟಿ ವಿತರಿಸುತ್ತಿದ್ದ. ಇದೇ ರೀತಿ ಅಕ್ರಮ ಎಸಗುತ್ತಿರುವ ಹಲವು ಸಂಸ್ಥೆಗಳು ನಗರದಲ್ಲಿರುವ ಮಾಹಿತಿಯಿದೆ. ಕಾರ್ಯಾಚರಣೆ ಮುಂದುವರಿಸಲಾಗುವುದು’ ಎಂದು ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.