ADVERTISEMENT

ಮಳೆಗೆ ಕೊಡಗಿನಲ್ಲಿ ₹700 ಕೋಟಿ ನಷ್ಟ

ಮಡಿಕೇರಿಯಲ್ಲಿ ಜಿಲ್ಲಾಡಳಿತದಿಂದ 73ನೇ ಸ್ವಾತಂತ್ರ್ಯ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 12:04 IST
Last Updated 15 ಆಗಸ್ಟ್ 2019, 12:04 IST
ಮಡಿಕೇರಿಯ ಹಳೇ ಕೋಟೆ ಆವರಣದಲ್ಲಿ ಗುರುವಾರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌
ಮಡಿಕೇರಿಯ ಹಳೇ ಕೋಟೆ ಆವರಣದಲ್ಲಿ ಗುರುವಾರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌   

ಮಡಿಕೇರಿ: ಮಳೆ, ಮಂಜು ಮುಸುಕಿದ ವಾತಾವರಣದ ನಡುವೆ ಜಿಲ್ಲಾಡಳಿತದಿಂದ 73ನೇ ಸ್ವಾತಂತ್ರ್ಯ ದಿನಾಚರಣೆ ನಗರದ ಕೋಟೆ ಆವರಣದಲ್ಲಿ ಗುರುವಾರ ನಡೆಯಿತು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ‘ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದ ತುಂಬಾ ಸಂಕಷ್ಟಕ್ಕೆ ಒಳಗಾಗುವಂತಾಯಿತು. ಅತಿವೃಷ್ಟಿಯಿಂದ 8 ಜೀವಹಾನಿ, ಜಾನುವಾರು ಹಾನಿ ಹಾಗೂ ಮನೆಗಳನ್ನು ಕಳೆದುಕೊಂಡು ನಾಗರಿಕರು ನಿರಾಶ್ರಿತರಾಗಿದ್ದಾರೆ’ ಎಂದು ನೋವು ವ್ಯಕ್ತಪಡಿಸಿದರು.

‘ಜಿಲ್ಲಾಡಳಿತ ಹಾಗೂ ಸರ್ಕಾರ ನಿರಾಶ್ರಿತರ ಬದುಕನ್ನು ಪುನರ್ ಸ್ಥಾಪಿಸುವ ಕಾರ್ಯವನ್ನು ಮಾಡಲಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ರಕ್ಷಣಾ ಪಡೆ, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಸಾರ್ವಜನಿಕರು, ಪೊಲೀಸ್ ಇಲಾಖೆ, ಗೃಹರಕ್ಷಕ ದಳ... ಹೀಗೆ ಹಲವರು ಶ್ರಮಿಸಿ ವಿಪತ್ತನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ವಿಪತ್ತು ಎದುರಿಸಲು ಸಂಕಲ್ಪ ಮಾಡೋಣ. ನಿರಾಶ್ರಿತರ ಬದುಕನ್ನು ಪುನರ್ ನಿರ್ಮಿಸಲು ಎಲ್ಲರೂ ಕೈಜೋಡಸಬೇಕು’ ಎಂದು ಮನವಿ ಮಾಡಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾಧಿಕಾರಿ, ‘ಮಹಾಮಳೆಗೆ ಸುಮಾರು ₹700 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಹಲವು ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡು 4 ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ನಿರಾಶ್ರಿತರಾದವರಿಗೆ ಪ್ರಥಮ ಆದ್ಯತೆಯಲ್ಲಿ ಪುನರ್ವಸತಿ ಕಲ್ಪಿಸಬೇಕಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ. ತೋರ ಗ್ರಾಮದಲ್ಲಿ ಎನ್‌ಡಿಆರ್‌ಎಫ್ ತಂಡದಿಂದ ಕಾರ್ಯಾಚರಣೆ ಮುಂದುವರೆದಿದೆ’ ಎಂದು ತಿಳಿಸಿದರು.

ADVERTISEMENT

ಸ್ವಾತಂತ್ರ್ಯ ದಿನಾಚರಣೆ ಸಂದೇಶ: ‘ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರ ಆದರ್ಶಗಳನ್ನು ಗೌರವಿಸಿ ಸಾಮರಸ್ಯದಿಂದ ಬಾಳ್ವೆ ನಡೆಸುವ ಜವಾಬ್ದಾರಿ ನಮ್ಮದು. ಇದೇ ಸಂದರ್ಭದಲ್ಲಿ ನಮ್ಮ ದೇಶದ ಏಕತೆ, ಸಮಗ್ರತೆ, ಶಾಂತಿ– ಸಂಸ್ಕೃತಿಗಳ ರಕ್ಷಣೆಗೆ ಕೈಜೋಡಿಸುವುದಾಗಿ ಪಣತೊಡೋಣ. ಸ್ವಾತಂತ್ರ್ಯ ಹೋರಾಟದ ಶತಮಾನದ ಇತಿಹಾಸ ಇಂದಿನ ಅಭಿವೃದ್ಧಿಗೆ ಮುನ್ನೋಟವಾಗಲಿ’ ಎಂದು ಅನೀಸ್‌ ಕಣ್ಮಣಿ ಜಾಯ್‌ ಆಶಿಸಿದರು.

ಸ್ವಾತಂತ್ರ್ಯ ಚಳವಳಿಯಲ್ಲಿ ಶ್ರಮಿಸಿದ ಕೊಡಗಿನ ಗುಡ್ಡೆಮನೆ ಅಪ್ಪಯ್ಯಗೌಡ, ಪಂದ್ಯಂಡ ಬೆಳ್ಯಪ್ಪ, ಸಿ.ಎಂ.ಪೂಣಚ್ಚ, ಕೊಡಂದೇರ ಪೂವಯ್ಯ, ಕೋಂದಂಡ ಅಪ್ಪಯ್ಯ, ಸಿ.ಎಂ.ವೆಂಕಪ್ಪಯ್ಯ, ಗುಂಡುಗುಟ್ಟಿ ಮಂಜುನಾಥಯ್ಯ, ಎಂ.ಎಂ.ಸಿದ್ದಿಕ್, ಎಚ್.ಆರ್. ಕೃಷ್ಣಯ್ಯ, ಕೊಳ್ಳಿಮಾಡ ಕರುಂಬಯ್ಯ, ಮಂಡೇಪಂಡ ಕಾರ್ಯಪ್ಪ, ಮುಕ್ಕಾಟಿರ ಭೋಜಪ್ಪ, ಮಲ್ಲಂಗಡ ಚಂಗಪ್ಪ, ಮಾರಯ್ಯ ಮೊದಲಾದ ಮಹಾ ನಾಯಕರನ್ನು ನೆನಪು ಮಾಡಿಕೊಳ್ಳಬೇಕು. ಭಾರತ ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಅವರು ಕೊಡಗಿಗೆ ಭೇಟಿ ನೀಡಿದ್ದರು ಎಂದು ನೆನಪಿಸಿದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರು ಭಾರತೀಯ ಸೇನಾ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ರತ್ನಗಳು. ಕೊಡಗು ಸಹ ಭಾರತದ ಸ್ವಾತಂತ್ರ್ಯ ಚಳವಳಿಯ ಒಂದು ಭಾಗವಾಗಿ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.

ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪೆನ್ನೇಕರ್, ಜಿ.ಪಂ ಸಿಇಒ ಕೆ.ಲಕ್ಷ್ಮಿಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.