ADVERTISEMENT

8ಜನರ ಸಜೀವ ದಹನ

ಉಪ್ಪಿನಂಗಡಿ ಪೆರ್ನೆಯಲ್ಲಿ ಭೀಕರ ಅಪಘಾತ: ಗ್ಯಾಸ್ ಟ್ಯಾಂಕರ್ ಭಸ್ಮ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 20:09 IST
Last Updated 9 ಏಪ್ರಿಲ್ 2013, 20:09 IST
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮಂಗಳವಾರ ಸಂಭವಿಸಿದ ಅಪಘಾತ ಸ್ಥಳದಲ್ಲಿ  ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ	 - ಚಿತ್ರ: ದಯಾ ಕುಕ್ಕಾ
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮಂಗಳವಾರ ಸಂಭವಿಸಿದ ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ - ಚಿತ್ರ: ದಯಾ ಕುಕ್ಕಾ   

ಉಪ್ಪಿನಂಗಡಿ (ದಕ್ಷಿಣ ಕನ್ನಡ): ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಪೆರ್ನೆ ಎಂಬಲ್ಲಿ ಬುಲೆಟ್ ಟ್ಯಾಂಕರ್ ಮಗುಚಿ, ಗ್ಯಾಸ್ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡು ಸಂಭವಿಸಿದ ಭೀಕರ ಅವಘಡದಲ್ಲಿ ಚಾಲಕ ಮತ್ತು ರಸ್ತೆ ಬದಿಯ ಮನೆಗಳಲ್ಲಿ ಇದ್ದವರೂ ಸೇರಿ ಒಟ್ಟು ಎಂಟು ಮಂದಿ ಸಜೀವ ದಹನವಾಗಿದ್ದಾರೆ. ಆರು ಮಂದಿಯ ಸ್ಥಿತಿ ಗಂಭೀರವಾಗಿದೆ.

ಟ್ಯಾಂಕರ್‌ನಿಂದ ಹರಡಿದ ಬೆಂಕಿಯ ಕೆನ್ನಾಲಿಗೆಗೆ ಪರಿಸರದ ಆರು ಮನೆಗಳು, ಎರಡು ಅಂಗಡಿ, ಗ್ಯಾರೇಜ್, ಒಂದು ಟೆಂಪೊ, ಆಮ್ನಿ, ಎರಡು ದ್ವಿಚಕ್ರ ವಾಹನಗಳು ಸುಟ್ಟು ಹೋಗಿವೆ.

ಟ್ಯಾಂಕರ್ ಉರುಳಿ ಬಿದ್ದ ಕಾರಣ ಗ್ಯಾಸ್ ಸೋರತೊಡಗಿತು.  ಹೆದ್ದಾರಿ ಬದಿಯ ಆರು ಮನೆಯೊಳಗೆ ಗ್ಯಾಸ್ ಆವರಿಸಿ ಕ್ಷಣಾರ್ಧದಲ್ಲಿ ಮನೆಗಳು ಹೊತ್ತಿ ಉರಿಯತೊಡಗಿದವು. ಮನೆಯೊಳಗಿದ್ದ ಇಬ್ಬರು ಮಕ್ಕಳ ಸಹಿತ 5 ಮಂದಿ ಸಜೀವ ದಹನಗೊಂಡಿದ್ದಾರೆ.

ಟ್ಯಾಂಕರ್ ಚಾಲಕ ತಮಿಳುನಾಡು ಮೂಲದ ಚೆಲುವರಸನ್ (35), ಆಮ್ನಿ ಚಾಲಕ ವಸಂತ (40) ರಸ್ತೆ ಪಕ್ಕದ ಮನೆಯೊಳಗೆ ಇದ್ದ ನಾರಾಯಣ ನಾಯ್ಕ ಎಂಬವರ ಪತ್ನಿ ವನಿತಾ (38), ಅವರ ಪುತ್ರ ಚಿತ್ರೇಶ್ (5), ಶಂಕರ ರೈ ಎಂಬವರ ಪತ್ನಿ ಶೋಭಾ ರೈ (40), ಟೈಲರ್ ಗುರುವಪ್ಪ (30), ಸೀತಾರಾಮ ಎಂಬವರ ಪುತ್ರ ಸುನಿಲ್ (6), ಮಹಮ್ಮದ್ ಎಂಬವರ ಪತ್ನಿ ಖತೀಜಮ್ಮ (38) ಮೃತಪಟ್ಟವರು.

ಸುಂದರ ರೈ ಪತ್ನಿ ಇಂದಿರಾ, ಅಣ್ಣು ನಾಯ್ಕ ಎಂಬವರ ಪುತ್ರಿ, ಅಂಗನವಾಡಿ ಕಾರ್ಯಕರ್ತೆ ವಿಮಲಾ, ಅಬೂಬಕ್ಕರ್ ಅವರ ಪತ್ನಿ ಸಫಿಯಾ, ತಾಯಿ ಹಾಜಮ್ಮ, ಅವರು ಸುಟ್ಟ ಗಾಯಗಳಿಂದ ಮಂಗಳೂರಿನ ಎ.ಜೆ. ಮತ್ತು ಫಾದರ್ ಮುಲ್ಲರ್ಸ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಗಾಯಾಳುಗಳ ಸಂಖ್ಯೆ ಇನ್ನೂ ಅಧಿಕ ಇದೆ ಎಂದು ಹೇಳಲಾಗಿದ್ದು, ಸ್ಪಷ್ಟ ಮಾಹಿತಿ ಸಂಜೆಯವರೆಗೂ ಲಭ್ಯವಾಗಿಲ್ಲ.

ಎಚ್‌ಪಿಸಿಎಲ್ ಕಂಪೆನಿಯ ಟ್ಯಾಂಕರ್ ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದಾಗ, ಬುಲೆಟ್ ಟ್ಯಾಂಕರ್ ಮಗುಚಿ ಬಿದ್ದ ತಕ್ಷಣ ಗಾಳಿಯಲ್ಲಿ ಅನಿಲ ಪಸರಿಸಿ ಮನೆಯೊಳಗಿನ ಬೆಂಕಿಯ ಕಿಡಿಯಿಂದಲೇ ಆರು ಮನೆಗಳನ್ನು ಆವರಿಸಿಕೊಂಡಿತು.

ರಸ್ತೆ ಬದಿಯಲ್ಲಿದ್ದ ಸುಂದರ ರೈ, ಶಂಕರ, ಅಬ್ಬಾಸ್, ಉಮ್ಮರ್, ಉಮರಬ್ಬ, ಮಹಮ್ಮದ್ ಎಂಬವರ ಮನೆ, ಅಬ್ದುಲ್ಲ ಮತ್ತು ಇಸ್ಮಾಯಿಲ್ ಎಂಬವರ ಅಂಗಡಿ, ಸುಂದರ ಎಂಬವರ ಗ್ಯಾರೇಜ್ ಸುಟ್ಟು ಕರಕಲಾಗಿದೆ. ಅಂಗಡಿಗೆ ಬೇಕರಿ ಸಾಮಗ್ರಿ ತಂದಿದ್ದ ಟೆಂಪೊ ಮತ್ತು ಆಮ್ನಿ ಕಾರು ಕೆಲವೇ ಕ್ಷಣಗಳಲ್ಲಿ ಹೊತ್ತಿಕೊಂಡು ಉರಿಯಿತು. ರಸ್ತೆಯ ಇನ್ನೊಂದು ಬದಿಯಲ್ಲಿದ್ದ ಅಡಿಕೆ ತೋಟದೊಳಗೆ ಬೆಂಕಿ ಆವರಿಸಿಕೊಂಡು ಸುಮಾರು ನಾಲ್ಕು ಎಕರೆ ಅಡಿಕೆ ತೋಟವೂ ಬೆಂಕಿಯಲ್ಲಿ ಹಾನಿಗೆ ಒಳಗಾಗಿದೆ.

ಕ್ಷಿಪ್ರ ಕಾರ್ಯಾಚರಣೆ: ಘಟನೆಯ ಸುದ್ದಿ ಹರಡುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯ 10 ಕಡೆಗಳಿಂದ 108 ಆರೋಗ್ಯ ಕವಚ ವಾಹನಗಳು ಏಕಕಾಲದಲ್ಲಿ ಧಾವಿಸಿ ಸ್ಥಳೀಯ ಯುವಕರ ಸಹಕಾರದೊಂದಿಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದವು. ಆರು ಅಗ್ನಿಶಾಮಕ ದಳದ ವಾಹನಗಳೂ ಕಾರ್ಯಾಚರಣೆ ನಡೆಸಿ  ಹೆಚ್ಚಿನ ದುರಂತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿವೆ.

8 ಗಂಟೆ ಹೆದ್ದಾರಿ ಬಂದ್: ಬೆಳಿಗ್ಗೆ 10 ಗಂಟೆ 5 ನಿಮಿಷಕ್ಕೆ ಅಪಘಾತ ಸಂಭವಿಸಿದೆ. ಬೆಂಕಿ ಉರಿಯತೊಡಗುತ್ತಿದ್ದಂತೆ ಸ್ಥಳೀಯ ಯುವಕರು ಜಾಗೃತರಾಗಿ ಪೊಲೀಸ್ ಮತ್ತು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರಲ್ಲದೇ, ಹೆಚ್ಚಿನ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದರು. ಪೊಲೀಸರು ಧಾವಿಸಿ ಮಾಣಿ ಮತ್ತು ಉಪ್ಪಿನಂಗಡಿ ಮಧ್ಯೆ ಸಂಜೆ 6 ಗಂಟೆಯವರೆಗೆ ವಾಹನಗಳ ಸಂಚಾರ ನಿರ್ಬಂಧಿಸಿದರು. ಹೊತ್ತಿ ಉರಿಯುತ್ತಿದ್ದ ಟ್ಯಾಂಕರ್ ಮತ್ತು ಮನೆಗಳಲ್ಲಿ ಆವರಿಸಿದ್ದ ಬೆಂಕಿ ಶಮನಗೊಳಿಸಿದ ಸುಮಾರು 8 ತಾಸಿನ ಬಳಿಕ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು.

ಪುತ್ತೂರು ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಸ್ಥಳದಲ್ಲಿದ್ದು ಪರಿಹಾರ ಕಾರ್ಯಾಚರಣೆಗೆ ಬೆಂಬಲ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT