ADVERTISEMENT

ಪ್ರವಾಹ ಭೀತಿ: 8 ಕುಟುಂಬಗಳ ಸ್ಥಳಾಂತರ

ಬೆಳಗಾವಿ ಜಿಲ್ಲೆಯಲ್ಲಿ 14 ಸೇತುವೆಗಳು ಮುಳುಗಡೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 12:14 IST
Last Updated 1 ಆಗಸ್ಟ್ 2019, 12:14 IST
ಚಿಕ್ಕೋಡಿ ತಾಲ್ಲೂಕಿನ‌ ಯಕ್ಸಂಬಾ ಮತ್ತು ಮಹಾರಾಷ್ಟ್ರದ ದಾನವಾಡ ಗ್ರಾಮಗಳ ಮಧ್ಯೆ ದೂಧ್‌ಗಂಗಾ ನದಿಗೆ ನಿರ್ಮಿಸಿರುವ ಸೇತುವೆ ಜಲಾವೃತಗೊಂಡಿದ್ದು, ಜನರು ಸಂಚರಿಸದಂತೆ ತಡೆಯಲು ಸಿಬ್ಬಂದಿ ನಿಯೋಜಿಸಲಾಗಿದೆ
ಚಿಕ್ಕೋಡಿ ತಾಲ್ಲೂಕಿನ‌ ಯಕ್ಸಂಬಾ ಮತ್ತು ಮಹಾರಾಷ್ಟ್ರದ ದಾನವಾಡ ಗ್ರಾಮಗಳ ಮಧ್ಯೆ ದೂಧ್‌ಗಂಗಾ ನದಿಗೆ ನಿರ್ಮಿಸಿರುವ ಸೇತುವೆ ಜಲಾವೃತಗೊಂಡಿದ್ದು, ಜನರು ಸಂಚರಿಸದಂತೆ ತಡೆಯಲು ಸಿಬ್ಬಂದಿ ನಿಯೋಜಿಸಲಾಗಿದೆ   

ಬೆಳಗಾವಿ: ಬೆಳಗಾವಿ ಹಾಗೂ ಖಾನಾಪುರ ತಾಲ್ಲೂಕಿನಲ್ಲಿ ಗುರುವಾರವೂ ಮಳೆ ಮುಂದುವರಿದಿದ್ದು, ಬಿಟ್ಟೂ ಬಿಟ್ಟು ಜೋರಾಗಿ ಸುರಿಯಿತು.

ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ಹಾಗೂ ಉಪನದಿಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಒಟ್ಟು 14 ಸೇತುವೆಗಳು ಮುಳುಗಡೆಯಾಗಿವೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1.60 ಲಕ್ಷ ಕ್ಯುಸೆಕ್‌ ಹಾಗೂ ದೂಧ್‌ಗಂಗಾ ನದಿಯಿಂದ 29ಸಾವಿರ ಕ್ಯುಸೆಕ್‌ ಸೇರಿದಂತೆ 1.90 ಲಕ್ಷ ಕ್ಯುಸೆಕ್‌ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳಿ ಬಳಿ ಕೃಷ್ಣಾ ನದಿಗೆ ಸೇರುತ್ತಿದೆ. ಬುಧವಾರಕ್ಕೆ ಹೋಲಿಸಿದರೆ 15ಸಾವಿರ ಕ್ಯುಸೆಕ್‌ಗೂ ಹೆಚ್ಚಿನ ನೀರು ನದಿಗೆ ಬರುತ್ತಿದೆ. ಇದರಿಂದಾಗಿ, ಕಲ್ಲೋಳ ಗ್ರಾಮದ ನದಿ ತೀರದ ತೋಟದಲ್ಲಿದ್ದ 8 ಕುಟುಂಬಗಳನ್ನು ಗ್ರಾಮದಲ್ಲಿರುವ ಅವರವರ ಮನೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಿಸಲಾಗಿದೆ. ಕಲ್ಲೋಳ ಸೇತುವೆ ಬಳಿ ಸಿಬ್ಬಂದಿ ನಿಯೋಜಿಸಲಾಗಿದೆ.

ADVERTISEMENT

ಚಿಕ್ಕೋಡಿ ತಾಲ್ಲೂಕಿನಲ್ಲಿ ವೇದಗಂಗಾ ಮತ್ತು ದೂಧ್‌ಗಂಗಾ ನದಿಗೆ ಕಟ್ಟಿರುವ ಸದಲಗಾ–ಬೋರಗಾಂವ ಮತ್ತು ದೂಧ್‌ಗಂಗಾ ನದಿಗೆ ನಿರ್ಮಿಸಿರುವ ಯಕ್ಸಂಬಾ–ದಾನವಾಡ ಸೇತುವೆಗಳು ಮುಳುಗಡೆಯಾಗಿವೆ. ಉಳಿದ 6 ಸೇತುವೆಗಳು ನಾಲ್ಕು ದಿನಗಳಿಂದಲೂ ಮುಳುಗಡೆ ಸ್ಥಿತಿಯಲ್ಲಿಯೇ ಇವೆ. ರಾಯಬಾಗ ತಾಲ್ಲೂಕಿನ ಕುಡಚಿ ಬಳಿ ಸೇತುವೆಯಲ್ಲಿ ನೀರಿನ ಪ್ರಮಾಣ ಇಳಿದಿಲ್ಲ. ಅಥಣಿ ತಾಲ್ಲೂಕಿನ ನದಿಇಂಗಳಗಾಂವ–ತೀರ್ಥ, ಸಪ್ತಸಾಗರ–ಬನದವಸತಿ, ಕೊಕಟನೂರ–ಶಿರಹಟ್ಟಿ ಹಾಗೂ ಜುಂಜರವಾಡ–ತುಬಚಿ ಸೇತುವೆಗಳು ಮುಳುಗಿವೆ. ಇವುಗಳಿಗೆ ಪರ್ಯಾಯ ರಸ್ತೆಗಳಿರುವುದರಿಂದ ಸಂಪರ್ಕ ಕಡಿತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.