ADVERTISEMENT

87 ಚುನಾವಣಾಧಿಕಾರಿಗಳೇ ಫೇಲ್!

ಪ್ರವೀಣ ಕುಮಾರ್ ಪಿ.ವಿ.
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST
87 ಚುನಾವಣಾಧಿಕಾರಿಗಳೇ ಫೇಲ್!
87 ಚುನಾವಣಾಧಿಕಾರಿಗಳೇ ಫೇಲ್!   

ಬೆಂಗಳೂರು: ಮತದಾನ, ಮತ ಎಣಿಕೆ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಹುದ್ದೆಗಳಿಗೆ ನಿಯೋಜಿಸಿರುವ ಅಧಿಕಾರಿಗಳ ಪೈಕಿ ಅನೇಕರು ಚುನಾವಣಾ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ. ಅಚ್ಚರಿ ಎಂದರೆ, ಅನುತ್ತೀರ್ಣಗೊಂಡವರಲ್ಲಿ ಕೆಎಎಸ್‌ ಶ್ರೇಣಿಯ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸುವ ಮುನ್ನ ಚುನಾವಣಾ ಆಯೋಗವು ಅವರಿಗೆ ವಿಶೇಷ ತರಬೇತಿ ನೀಡಿ, ಬಳಿಕ ಪರೀಕ್ಷೆ ನಡೆಸುತ್ತದೆ. ಚುನಾವಣಾಧಿಕಾರಿಗಳಾಗಿ ನೇಮಕಗೊಂಡಿರುವ 224 ಅಧಿಕಾರಿಗಳ ಪೈಕಿ 87 ಮಂದಿ ಅನುತ್ತೀರ್ಣರಾಗಿದ್ದರು. ಸಹಾಯಕ ಚುನಾವಣಾಧಿಕಾರಿಗಳಾಗಿ ನಿಯೋಜನೆಗೊಂಡಿರುವ 300 ಅಧಿಕಾರಿಗಳ ಪೈಕಿ 223 ಮಂದಿ ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿಲ್ಲ.

ಉಪವಿಭಾಗಾಧಿಕಾರಿ, ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ, ಮುಖ್ಯಯೋಜನಾಧಿಕಾರಿ, ವಿವಿಧ ಇಲಾಖೆಗಳ ಉಪನಿರ್ದೇಶಕರು, ಜಂಟಿ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ, ಪಾಲಿಕೆ ಆಯುಕ್ತರು, ಪರಿಸರ ಅಧಿಕಾರಿಗಳು, ವಿಶೇಷ ಭೂಸ್ವಾಧೀನಾಧಿಕಾರಿಗಳನ್ನು ಈ ಬಾರಿ ಚುನಾವಣಾಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.

ADVERTISEMENT

ತಹಶೀಲ್ದಾರ್‌ಗಳು, ವಿಶೇಷ ತಹಶೀಲ್ದಾರ್‌ಗಳು, ಸಹಾಯಕ ಕಂದಾಯ ಅಧಿಕಾರಿಗಳು, ಕಾರ್ಯಕ್ರಮ ಅಧಿಕಾರಿ, ಪಾಲಿಕೆಗಳ ಕೌನ್ಸಿಲ್‌ ಕಾರ್ಯದರ್ಶಿಗಳು, ಸಹಾಯಕ ನಿರ್ದೇಶಕರು, ಜಂಟಿ ನಿರ್ದೇಶಕರು, ಸಹಾಯಕ ಕಾರ್ಮಿಕ ಆಯುಕ್ತ ದರ್ಜೆಯ ಅಧಿಕಾರಿಗಳಿಗೆ ಈ ಬಾರಿ ಸಹಾಯಕ ಚುನಾವಣಾಧಿಕಾರಿ ಜವಾಬ್ದಾರಿ ವಹಿಸಲಾಗಿದೆ.

‘ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವ ಎಲ್ಲ ಅಧಿಕಾರಿಗಳಿಗೆ ಕಡ್ಡಾಯವಾಗಿ ತರಬೇತಿ ನೀಡುತ್ತೇವೆ. ನಂತರ ನಡೆಸುವ ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾಗಬೇಕು. ಪಾಸಾಗದ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಈ ಬಾರಿ ವಿಡಿಯೊ ಕಾನ್ಫರೆನ್ಸ್‌ಗಳ ಮೂಲಕವೂ ತರಬೇತಿ ನೀಡುತ್ತಿದ್ದೇವೆ. ಅವರಿಗೆ ಮತ್ತೆ ಪರೀಕ್ಷೆ ನಡೆಸಲಾಗುತ್ತದೆ’ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಉಜ್ವಲ್‌ ಕುಮಾರ್‌ ಘೋಷ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಗೆ ವಿಶೇಷ ಅಧಿಕಾರವಿದೆ. ಸಂದಿಗ್ಧ ಪರಿಸ್ಥಿತಿಗಳಲ್ಲಿ ಅವರು ಸೂಕ್ಷ್ಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಹುದ್ದೆಗೆ ನಿಯೋಜಿಸಿರುವ ಅಧಿಕಾರಿಗಳೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲವೆಂದಾದರೆ ಅವರಿಂದ ಸಮರ್ಪಕ ಕಾರ್ಯನಿರ್ವಹಣೆಯನ್ನು ನಿರೀಕ್ಷಿಸುವುದಾದರೂ ಹೇಗೆ’ ಎಂದು ‍ಪ್ರಶ್ನಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ.

ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿ ಯಾವುದೇ ಸಂದೇಹವಿದ್ದರೆ, ಹಿರಿಯ ಅಧಿಕಾರಿಗಳು ಬಗೆಹರಿಸುತ್ತಾರೆ. ಹಾಗಾಗಿ ಇದರಿಂದ ಚುನಾವಣಾ ಪ್ರಕ್ರಿಯೆಗೆ ಯಾವುದೇ ಅಡ್ಡಿ ಉಂಟಾಗದು ಎಂದು ಉಜ್ವಲ್‌ ಕುಮಾರ್‌ ಸಮರ್ಥಿಸಿಕೊಂಡರು.

*ಕೆಲವರು ಅನುತ್ತೀರ್ಣರಾಗಿದ್ದು ನಿಜ. ಫೇಲಾದವರಿಗೆ ಪುನಶ್ಚೇತನಾ ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ಸಜ್ಜುಗೊಳಿಸುತ್ತೇವೆ

–ಉಜ್ವಲ್‌ ಕುಮಾರ್‌ ಘೋಷ್, ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ

***

ಚುನಾವಣೆಗೆ ಮುನ್ನ ಅಧಿಕಾರಿಗಳಿಗೆ ತರಬೇತಿ

ತರಬೇತಿ ಬಳಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ

ಅನುತ್ತೀರ್ಣರಾದವರಿಗೆ ಮರುಪರೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.