ADVERTISEMENT

9ಕ್ಕೆ ಬಿಎಸ್‌ವೈ ಅಧಿಕೃತ ಸೇರ್ಪಡೆ: ಜೋಶಿ

ಬೆನ್ನಿಹಿನ್‌ ಕಾರ್ಯಕ್ರಮಕ್ಕೆ ಬಿಜೆಪಿ ವಿರೋಧ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 19:30 IST
Last Updated 4 ಜನವರಿ 2014, 19:30 IST

ಹುಬ್ಬಳ್ಳಿ: ಕೆಜೆಪಿ ಪಕ್ಷವನ್ನು ಬಿಜೆಪಿ ಯೊಂದಿಗೆ ವಿಲೀನಗೊಳಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ 9ರಂದು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಶನಿವಾರ ಇಲ್ಲಿ ತಿಳಿಸಿದರು.

ಈಗಾಗಲೇ ವಿಲೀನ ಪ್ರಕ್ರಿಯೆ ಮುಕ್ತಾಯವಾಗಿದೆ. ಜಗದೀಶ ಶೆಟ್ಟರ್ ಅವರೇ ಶಾಸಕಾಂಗ ಪಕ್ಷದ ನಾಯಕ ನಾಗಿ ಮುಂದುವರೆಯಲಿ ದ್ದಾರೆ. ಪಕ್ಷದಲ್ಲಿ ಯಡಿಯೂರಪ್ಪ ಅವರಿಗೆ ಸ್ಥಾನಮಾನ ನೀಡುವ ಕುರಿತು ಹೈಕಮಾಂಡ್‌ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು
‘ಕೆಜೆಪಿ ವಿಲೀನದಿಂದಾಗಿ ಬಿಜೆಪಿಗೆ ಅಧಿಕೃತ ವಿರೋಧ ಪಕ್ಷದ ಸ್ಥಾನ ದೊರೆತಿದೆ. ಆದರೆ ಇದು ಆಪರೇಷನ್ ಕಮಲ ಅಲ್ಲ ಬದಲಿಗೆ ಎರಡೂ ಪಕ್ಷಗಳ ನಡುವಿನ ಕೂಡಿಕೆ’ ಎಂದು ಜೋಶಿ ಬಣ್ಣಿಸಿದರು.

ಬೆನ್ನಿಹಿನ್ ಕಾರ್ಯಕ್ರಮಕ್ಕೆ ವಿರೋಧ: ಮೂಢನಂಬಿಕೆ ವಿರೋಧಿ ಕಾಯ್ದೆ ಜಾರಿಗೆ ತರಲು ಹೊರಟಿರುವ ಸರ್ಕಾರ ವಿವಾದಿತ ಕ್ರೈಸ್ತ ಧರ್ಮ ಬೋಧಕ ಬೆನ್ನಿಹಿನ್‌ ಅವರನ್ನು ಬೆಂಗಳೂರಿಗೆ ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿರುವುದು ನಾಚಿಕೆಗೇಡು ಎಂದು ಟೀಕಿಸಿದರು.

ಬೆನ್ನಿಹಿನ್ ಕಾರ್ಯಕ್ರಮದ ವಿರುದ್ಧ ಬುದ್ಧಿಜೀವಿಗಳೇಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಸರ್ಕಾರಕ್ಕೆ ಹಿಂದೂ ಸಮಾಜದ ಮೌಢ್ಯಗಳು ಮಾತ್ರ ಕಾಣುತ್ತವೆ. ಹಿಂದೂ ಸಮಾಜವನ್ನು ಟೀಕಿಸುವುದೇ ಪ್ರಗತಿಪರತೆ ಎಂದು ಭಾವಿಸಿದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆನ್ನಿಹಿನ್‌ ಕಾರ್ಯಕ್ರಮದ ಹಿಂದೆ ಮತಾಂತರದ ಹುನ್ನಾರವಿದೆ. ಈ ಕಾರ್ಯಕ್ರಮವನ್ನು ಬಿಜೆಪಿ ವಿರೋಧಿಸಲಿದೆ ಎಂದರು.

‘ಬಿಎಸ್‌ವೈ ಅವರದು ಶರಣಾಗತಿ’
ಬೀದರ್‌:
‘ಬಿ.ಎಸ್‌.ಯಡಿಯೂರಪ್ಪ ಅವರು ಬಿಜೆಪಿ ಜೊತೆಗೆ ಕೆಜೆಪಿ ವಿಲೀನ ಮಾಡಿದ್ದಾರೆ ಎಂಬುದಕ್ಕಿಂತಲೂ ಬಿಜೆಪಿಗೆ ಶರಣಾಗತಿ ಆಗಿ­ದ್ದಾರೆ ಎಂದು ಹೇಳುವುದೇ ಸರಿ’ ಎಂದು ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿ­ತಿಯ ಅಧ್ಯಕ್ಷ ವೈಜನಾಥ ಪಾಟೀಲ ಟೀಕಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರು–ಏಳು ತಿಂಗಳಿಂದ ಪ್ರಯತ್ನಿಸಿ, ಸ್ವತಃ ಆಸಕ್ತಿ ವಹಿಸಿ ಬಿಜೆಪಿಗೆ ಹೋಗುಐವ ಅಗತ್ಯ ಇರಲಿಲ್ಲ. ಇದು ಅವರಿಗೆ ಗೌರವದ ಪ್ರವೇಶ­ವಾಗಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಯಡಿಯೂರಪ್ಪ ಅವರ ಪಕ್ಷ ಸೇರ್ಪಡೆಯನ್ನು ವಿಳಂಬ ಮಾಡುವ ಮೂಲಕ ಬಿಜೆಪಿ ಮುಖಂಡರು ಅವರಿಗೆ ಅಪಮಾನ ಮಾಡಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT