ADVERTISEMENT

9 ಬಾರಿ ಒಡೆದ ಕಾಲುವೆಗೆ ವಿಸ್ತರಣೆ ಭಾಗ್ಯ!

​ಪ್ರಜಾವಾಣಿ ವಾರ್ತೆ
Published 15 ಜನವರಿ 2011, 6:10 IST
Last Updated 15 ಜನವರಿ 2011, 6:10 IST

ನಾರಾಯಣಪುರ (ಯಾದಗಿರಿ ಜಿಲ್ಲೆ):  ತುಂಡುಗುತ್ತಿಗೆಯ ಕರ್ಮಕಾಂಡದಿಂದ ರಾಜ್ಯಾದ್ಯಂತ ಸುದ್ದಿಯಾಗಿದ್ದ ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ)ಗೆ ಈಗ ವಿಸ್ತರಣೆ ಭಾಗ್ಯ ಲಭಿಸಿದೆ. ಹಲವು ದಶಕಗಳ ಕನಸು ನನಸಾಗುವ ಹಂತಕ್ಕೆ ಬಂದಿದ್ದು, 5,460 ಕೋಟಿ ರೂಪಾಯಿಯ ಬೃಹತ್ ಯೋಜನೆ ರಾಯಚೂರು ಜಿಲ್ಲೆಯ ರೈತರಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಎನ್‌ಆರ್‌ಬಿಸಿ ಮುಖ್ಯಕಾಲುವೆಯನ್ನು  95ರಿಂದ 157 ಕಿಲೋಮೀಟರ್‌ವರೆಗೆ ವಿಸ್ತರಿಸುವುದರಿಂದ, ರಾಯಚೂರು ತಾಲ್ಲೂಕಿನ 2.25 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿಯಾಗಲಿದೆ. ಇದರಿಂದ ಇಡೀ ಜಿಲ್ಲೆಯ ಆರ್ಥಿಕ ಚಿತ್ರಣವೇ ಬದಲಾಗುತ್ತದೆ ಎಂದು ರೈತರು ಕನಸು ಕಾಣುತ್ತಿದ್ದಾರೆ. ನಿರೀಕ್ಷೆಯ ಬೆಟ್ಟದ ಜತೆಜತೆಗೆ ಆತಂಕದ ಕಾರ್ಮೋಡವೂ ಕವಿದಿದೆ. ಮುಖ್ಯ ಕಾಲುವೆಯ ಗುಣಮಟ್ಟವೇ ಇದಕ್ಕೆ ಮೂಲಕಾರಣ. ನಿರ್ಮಾಣವಾಗಿ ಹತ್ತು ವರ್ಷದೊಳಗೆ ಮುಖ್ಯಕಾಲುವೆ ಒಂಬತ್ತು ಬಾರಿ ಒಡೆದಿದೆ. 22 ಬಾರಿ ಶಾಖಾ ನಾಲೆಗಳು ಕೊಚ್ಚಿಹೋಗಿವೆ. ವಿತರಣಾ ನಾಲೆ, ಉಪ ವಿತರಣಾ ನಾಲೆ, ಸೀಳುಗಾಲುವೆ ಹಾಗೂ ಹೊಲಗಾಲುವೆಗಳನ್ನು ಹುಡುಕಬೇಕಾದ ಸ್ಥಿತಿ ಇದೆ. ನಿರ್ವಹಣೆಯಂತೂ ಶೂನ್ಯ.

ಕಾಲುವೆಯುದ್ದಕ್ಕೂ ಲೈನಿಂಗ್ ಕುಸಿದಿದೆ. ಎನ್‌ಆರ್‌ಬಿಸಿ ನಿರ್ವಹಣೆಗೆ ವಾರ್ಷಿಕ ನಾಲ್ಕು ಕೋಟಿ ರೂಪಾಯಿ ಮಾತ್ರ ಸಿಗುತ್ತಿದ್ದು, ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಇದು ಯೋಜನೆಯ ಸದ್ಯದ ಸ್ಥಿತಿ. ಒಟ್ಟು 95 ಕಿ.ಮೀ. ಉದ್ದದ ಬಲದಂಡೆ ಕಾಲುವೆ ಯೋಜನೆಯಡಿ 18 ವಿತರಣಾ ಶಾಖೆಗಳ ಮೂಲಕ ಲಿಂಗಸಗೂರು ಮತ್ತು ದೇವದುರ್ಗ ತಾಲ್ಲೂಕಿನ 2.10 ಲಕ್ಷ ಎಕರೆಗೆ ನೀರಾವರಿಯಾಗುತ್ತಿದೆ. ಬಲದಂಡೆ ಯೋಜನೆಗೆ ಇದುವರೆಗೆ 1,003.01 ಕೋಟಿ ವೆಚ್ಚವಾಗಿದ್ದು, ವಾರ್ಷಿಕ 22.4 ಟಿಎಂಸಿ ಅಡಿ ನೀರನ್ನು ಈ ಯೋಜನೆಗೆ ಮೀಸಲಿಟ್ಟಿದೆ.

“ಕಾಲುವೆಯ ಕೊನೆಯ ಭಾಗದ ರೈತರಿಗೂ ನೀರು ಸಿಗಬೇಕಾದರೆ ಮುಖ್ಯ ಕಾಲುವೆಯಲ್ಲಿ 3,500 ಕ್ಯೂಸೆಕ್ ನೀರು ಹರಿಯಬೇಕು. ಆದರೆ ಇದುವರೆಗೂ 1,200 ಕ್ಯೂಸೆಕ್‌ಗಿಂತ ಹೆಚ್ಚು ನೀರು ಹರಿದಿಲ್ಲ. ಇಷ್ಟು ನೀರು ಹರಿಸಿದಾಗಲೇ ಒಂಬತ್ತು ಬಾರಿ ಒಡೆದಿರುವ ಕಾಲುವೆ 3500 ಕ್ಯೂಸೆಕ್ ನೀರು ತಡೆದುಕೊಳ್ಳುತ್ತದೆಯೇ” ಎಂಬ ಪ್ರಶ್ನೆಯನ್ನು ರೈತ ಮುಖಂಡ ವೈ.ರಾಮಣ್ಣ ಮುಂದಿಡುತ್ತಾರೆ.

ಮುಖ್ಯ ಕಾಲುವೆಯನ್ನು ಬಲಪಡಿಸುವ ಯಾವ ಯೋಜನೆಯೂ ಸದ್ಯಕ್ಕೆ ನಿಗಮದ ಮುಂದಿಲ್ಲ. “ಕಾಮಗಾರಿ ಗುಣಮಟ್ಟ ತೃಪ್ತಿಕರವಾಗಿದ್ದು, ಇಡೀ ಯೋಜನೆಗೆ ಅಗತ್ಯವಾದಷ್ಟು ನೀರು ಹರಿಸಲು ಯೋಗ್ಯ” ಎಂಬ ವಾದವನ್ನು ಕೃಷ್ಣಾ ಭಾಗ್ಯಜಲ ನಿಗಮದ ಅಧಿಕಾರಿಗಳು ಮುಂದಿಡುತ್ತಾರೆ. ಮುಖ್ಯ ಕಾಲುವೆಯುದ್ದಕ್ಕೂ ಲೈನಿಂಗ್ ಕಿತ್ತುಹೋಗಿರುವ ಬಗ್ಗೆ ಗಮನ ಸೆಳೆದಾಗ, ಲೈನಿಂಗ್ ಇಲ್ಲದೆಯೂ ನೀರು ಹರಿಸಿದರೂ ತೊಂದರೆ ಇಲ್ಲ ಎಂದು ಸಮುಜಾಯಿಷಿ ನೀಡುತ್ತಾರೆ.

ತುಂಡು ಗುತ್ತಿಗೆ ಆಧಾರದಲ್ಲಿ ನೂರಕ್ಕೂ ಹೆಚ್ಚು ಸ್ಥಳೀಯ ಗುತ್ತಿಗೆದಾರರು ಕಾಮಗಾರಿ ಪಡೆದು ಕೆಲಸ ನಿರ್ವಹಿಸಿದ್ದು, ಸಮನ್ವಯದ  ಕೊರತೆಯಿಂದ ನಾಲೆಯ ಅಲೈನ್‌ಮೆಂಟ್ ಅದ್ವಾನವಾಗಿರುವಂಥ ಹತ್ತಾರು ನಿದರ್ಶನಗಳು ಕಾಣಸಿಗುತ್ತವೆ. ಮುಖ್ಯ ಕಾಲುವೆಯಿಂದ ವಿತರಣಾ ಕಾಲುವೆಗಳಿಗೆ ನೀರು ಹರಿಯಬೇಕಾದರೆ ಮುಖ್ಯ ಕಾಲುವೆಯಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕಾಯಿತು. ಇಂದಿಗೂ ಪ್ರತಿ ಶಾಖಾ ಕಾಲುವೆ ಬಳಿ ತಡೆಗೋಡೆಗಳು ಕಾಣಸಿಗುತ್ತವೆ.

“ಕಳಪೆ ಕಾಮಗಾರಿ ವಿರುದ್ಧ ರೈತರು ಹೋರಾಟ ನಡೆಸಲು ಮುಂದಾದರೂ ಸ್ಥಳೀಯ ಗುತ್ತಿಗೆದಾರರು ಹಾಗೂ ಇವರ ಬೆಂಬಲಕ್ಕಿದ್ದ ರಾಜಕೀಯ ಮುಖಂಡರು ಹೋರಾಟವನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾದರು. ಇನ್ನು ಕೆಲವೆಡೆ ಹೋರಾಟಗಾರರೇ ಕಾಮಗಾರಿಯ ಗುತ್ತಿಗೆ ಪಡೆದದ್ದರಿಂದ ಹೋರಾಟ ಯಶಸ್ವಿಯಾಗಲಿಲ್ಲ. ಅದರ ದುಷ್ಪರಿಣಾಮವನ್ನು ಅಚ್ಚುಕಟ್ಟು ಪ್ರದೇಶದ ರೈತರು ಅನುಭವಿಸುವಂತಾಗಿದೆ” ಎಂದು ನಾರಾಯಣಪುರ ಬಲದಂಡೆ ಕಾಲುವೆ ಹೋರಾಟ ಸಮಿತಿಯ ಸಂಚಾಲಕರಾಗಿದ್ದ ಚಂದ್ರಶೇಖರ ಬಾಳೆ ಹೇಳುತ್ತಾರೆ.

“ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಯ ಮೊದಲ ಹಂತಕ್ಕೆ 1995ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಚಾಲನೆ ನೀಡಿದ್ದರು. ಹನ್ನೊಂದು ತಿಂಗಳ ದಾಖಲೆ ಅವಧಿಯಲ್ಲಿ 70 ಕಿಲೋಮೀಟರ್ ನಾಲೆ ನಿರ್ಮಾಣವಾಗಿತ್ತು. ರಾಜ್ಯ ಸರ್ಕಾರ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದರೆ ಮಾತ್ರ ಈ ಬಾರಿಯೂ ಇಂಥ ಪವಾಡ ಸಾಧ್ಯ” ಎನ್ನುವುದು ರೈತರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.