ADVERTISEMENT

ಲೋಕಾಯುಕ್ತ ಪೊಲೀಸರ ಶೋಧ: ಮಧ್ಯವರ್ತಿಗಳ ಬಳಿ ₹ 9.72 ಲಕ್ಷ ನಗದು ಪತ್ತೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 19:30 IST
Last Updated 4 ನವೆಂಬರ್ 2022, 19:30 IST
ಲೋಕಾಯುಕ್ತ
ಲೋಕಾಯುಕ್ತ    

ಬೆಂಗಳೂರು: ಲೋಕಾಯುಕ್ತ ಪೊಲೀಸರು ಗುರುವಾರ ದಾಳಿಮಾಡಿದ್ದ 21 ಉಪ ನೋಂದಣಿ ಕಚೇರಿಗಳ ಪೈಕಿ 14 ಉಪ ನೋಂದಣಿ ಕಚೇರಿಗಳ ಒಳಗಿದ್ದ ಮಧ್ಯವರ್ತಿಗಳ ಬಳಿ ಒಟ್ಟು ₹ 9.72 ಲಕ್ಷ ಅಕ್ರಮ ನಗದು ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು ನಗರ ವ್ಯಾಪ್ತಿಯ 14, ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಐದು ಮತ್ತು ರಾಮನಗರ ಜಿಲ್ಲೆಯ ರಾಮನಗರ ಹಾಗೂ ಕನಕಪುರ ಉಪ ನೋಂದಣಿ ಕಚೇರಿಗಳ ಮೇಲೆ ಗುರುವಾರ ದಾಳಿಮಾಡಿದ್ದ ಲೋಕಾಯುಕ್ತ ಪೊಲೀಸರು, ತಡರಾತ್ರಿವರೆಗೂ ಶೋಧ ನಡೆಸಿದ್ದರು.

ವರ್ತೂರು ಉಪ ನೋಂದಣಿ ಕಚೇರಿಯಲ್ಲಿ ₹ 3.17 ಲಕ್ಷ, ಬನಶಂಕರಿ ಕಚೇರಿಯಲ್ಲಿ ₹ 1.18 ಲಕ್ಷ, ಹೊಸಕೋಟೆ ಕಚೇರಿಯಲ್ಲಿ ₹ 1.04 ಲಕ್ಷ, ಆನೇಕಲ್ ಕಚೇರಿಯಲ್ಲಿ ₹ 95,630, ಬೇಗೂರು ಕಚೇರಿಯಲ್ಲಿ ₹ 93,406, ಕೆಂಗೇರಿಯಲ್ಲಿ ₹ 42,000 ನಗದು ಮಧ್ಯವರ್ತಿಗಳ ಬಳಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಬಿ.ಎಸ್‌. ಪಾಟೀಲ ತಿಳಿಸಿದ್ದಾರೆ.

ADVERTISEMENT

ಬೊಮ್ಮನಹಳ್ಳಿ, ಬಸವನಗುಡಿ, ಕಾಚರಕನಹಳ್ಳಿ, ಬಾಣಸವಾಡಿ, ದೊಮ್ಮಲೂರು, ದೇವನಹಳ್ಳಿ, ದೊಡ್ಡಬಳ್ಳಾಪುರ, ಜಿಗಣಿ ಮತ್ತು ಕನಕಪುರ ಉಪ ನೋಂದಣಿ ಕಚೇರಿಗಳಲ್ಲೂ ಮಧ್ಯವರ್ತಿಗಳು ಪತ್ತೆಯಾಗಿದ್ದಾರೆ. ಅವರ ಬಳಿ ಅಲ್ಪ ಪ್ರಮಾಣದ ನಗದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

‘ಈ ಎಲ್ಲ ಕಚೇರಿಗಳಲ್ಲೂ ಅಧಿಕಾರಿಗಳು ಮತ್ತು ಸಿಬ್ಬಂದಿಯ ಹಾಜರಾತಿ ಕಡತ, ನೋಂದಣಿಯಾಗಿರುವ ದಾಖಲೆಗಳು, ನೋಂದಣಿಗೆ ಬಾಕಿ ಇದ್ದ ದಾಖಲೆಗಳು, ವಿತರಣೆಯಾದ ದಾಖಲೆಗಳ ವಿವರ, ಚಲನ್‌ಗಳು, ನಗದು ಘೋಷಣಾ ರಿಜಿಸ್ಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮಧ್ಯವರ್ತಿಗಳನ್ನು ಮತ್ತಷ್ಟು ವಿಚಾರಣೆ ನಡೆಸಿದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.