ADVERTISEMENT

ಅಂಚೆ ಸಿಬ್ಬಂದಿ ಅಮಾನತಿಗೆ ಶಿಫಾರಸು

ಬಾರ್‌ ಮುಂದೆ ಆಧಾರ್‌ ಕಾರ್ಡ್‌ ಪತ್ತೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಜುಲೈ 2018, 16:28 IST
Last Updated 13 ಜುಲೈ 2018, 16:28 IST

ದಾವಣಗೆರೆ: ಇಲ್ಲಿನ ಭವಾನಿ ಬಾರ್‌ ಬಳಿ ನೂರಾರು ಆಧಾರ್‌ ಕಾರ್ಡ್‌ಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಚೆ ಸಿಬ್ಬಂದಿಯೊಬ್ಬರನ್ನು ಅಮಾನತು ಮಾಡುವಂತೆ ಅಧಿಕಾರಿಗಳು ಶುಕ್ರವಾರ ಶಿಫಾರಸು ಮಾಡಿದ್ದಾರೆ.

ಅಂಚೆ ಇಲಾಖೆಯ ಪ್ಯಾಕರ್‌ ಗೋವಿಂದ್‌ರಾಜ್‌ ಎಂಬುವವರು ತಪ್ಪೆಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಅವರನ್ನು ಅಮಾನತು ಮಾಡುವಂತೆ ತನಿಖಾಧಿಕಾರಿಗಳು ವರದಿ ನೀಡಿದ್ದಾರೆ. ಗೋವಿಂದರಾಜ್‌ ರಜೆಯ ಮೇಲೆ ತೆರಳಿದ್ದು, ಕೆಲಸಕ್ಕೆ ಹಾಜರಾದ ಕೂಡಲೇ ಅಮಾನತು ಆದೇಶ ಜಾರಿ ಮಾಡಲಾಗುವುದು ಎಂದು ಹೆಚ್ಚುವರಿ ಅಂಚೆ ಅಧೀಕ್ಷಕ ನವೀನ್‌ ಚಂದರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಬಾರ್‌ ಮುಂದೆ ಕುಡಿದು ಬಿದ್ದಿದ್ದ ವ್ಯಕ್ತಿಯ ಕೈಚೀಲದಲ್ಲಿ ನೂರಾರು ಆಧಾರ್‌ ಕಾರ್ಡ್‌ಗಳಿದ್ದವು. ಅದನ್ನು ಗಮನಿಸಿದ ದಾರಿಹೋಕರು ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅಲ್ಲದೇ ಆ ಆಧಾರ್‌ ಕಾರ್ಡ್‌ಗಳನ್ನು ವಾರಸುದಾರರಿಗೆ ತಲುಪಿಸುವ ಕೆಲಸ ಮಾಡಿದ್ದರು. ವಿಡಿಯೊ ಗಮನಿಸಿದ ಅಂಚೆ ಇಲಾಖೆ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.