ADVERTISEMENT

ರಾಜಕಾಲುವೆ ಒತ್ತುವರಿ ಹಿಂದೆ ಲಿಂಬಾವಳಿ: ಎಎಪಿ ಆರೋಪ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 16:56 IST
Last Updated 19 ನವೆಂಬರ್ 2021, 16:56 IST

ಬೆಂಗಳೂರು: ‘ಮಹದೇವಪುರ ಕ್ಷೇತ್ರದ ಜುನ್ನಸಂದ್ರ ಹಾಗೂ ಹಾಲನಾಯಕನಹಳ್ಳಿಯಲ್ಲಿ ಪ್ರಭಾವಿಗಳಿಂದ ರಾಜಕಾಲುವೆ ಒತ್ತುವರಿಯಾಗಿದ್ದು, ಇದಕ್ಕೆಶಾಸಕ ಅರವಿಂದ ಲಿಂಬಾವಳಿ ನಿರ್ಲಕ್ಷ್ಯವೇ ಕಾರಣ’ ಎಂದು ಮಹದೇವಪುರ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ (ಎಎಪಿ) ಅಧ್ಯಕ್ಷ ಅಶೋಕ್‌ ಮೃತ್ಯುಂಜಯ ಆರೋಪಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಜುನ್ನಸಂದ್ರದ ಗ್ರೀನ್ ವಿಲ್ಲೇ ಬಡಾವಣೆ ಕಡೆಗೆ ಹೋಗುವ 40 ಅಡಿ ರಸ್ತೆ ಈಗ ಕೊಳಚೆ ಕೊಳವಾಗಿ ಮಾರ್ಪಟ್ಟಿದೆ. ಕೊಳಚೆ ನೀರು ಹರಿಯುವ ರಾಜಕಾಲುವೆ ಮಾರ್ಗವನ್ನು ಬಿಲ್ಡರ್ ಅತಿಕ್ರಮಣ ಮಾಡಿಕೊಂಡಿದ್ದಾರೆ. ಹಾಗಾಗಿ, ನೀರು ಸರಾಗವಾಗಿ ಹರಿಯುತ್ತಿಲ್ಲ’ ಎಂದರು.

‘ಮಳೆಗಾಲದಲ್ಲಿ ಈ ಭಾಗದ ರಸ್ತೆಗಳಲ್ಲಿ ಕನಿಷ್ಠ ಎರಡು ಅಡಿಗಳವರೆಗೆ ನೀರು ನಿಂತು, ಇಲ್ಲಿನ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ. ನೀರು ನಿಂತ ಪರಿಣಾಮ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಇದಕ್ಕೆಲ್ಲ ಪಾಲಿಕೆ ಹಾಗೂ ಅರವಿಂದ ಲಿಂಬಾವಳಿಯವರ ನಿರ್ಲಕ್ಷ್ಯವೇ ಕಾರಣ’ ಎಂದು ದೂರಿದರು.

ADVERTISEMENT

‘ಈ ಸಮಸ್ಯೆಗೆ ಶಾಸಕರ ಕಚೇರಿಯಿಂದ ಯಾವುದೇ ಉತ್ತರ ಬರದ ಕಾರಣಎಎಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ಒಗ್ಗೂಡಿ ನ.21ರಂದು ಬೆಳಿಗ್ಗೆ 11.30ರಿಂದಜುನ್ನಸಂದ್ರ ಗ್ರೀನ್ ವಿಲ್ಲೇ ಬಡಾವಣೆಯಿಂದ ಪಾದಯಾತ್ರೆ ನಡೆಸಲಿದ್ದೇವೆ’ ಎಂದು ಹೇಳಿದರು.

ಹಾಲನಾಯಕನಹಳ್ಳಿ ಗ್ರಾಮಸ್ಥ ಅಂಬರೀಷ್ ರೆಡ್ಡಿ,‘ಒತ್ತುವರಿ ತೆರವು ಸಂಬಂಧ ಶಾಸಕ ಅರವಿಂದ ಲಿಂಬಾವಳಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ’ ಎಂದರು.

ಒತ್ತುವರಿದಾರರ ಪಟ್ಟಿ ಕೊಡಲಿ:

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅರವಿಂದ ಲಿಂಬಾವಳಿ, ‘ನಗರದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ರಸ್ತೆಗಳಲ್ಲಿ ನೀರು ನಿಂತಿರಬಹುದು. ಕ್ಷೇತ್ರದಲ್ಲಿ ಪ್ರವಾಹ ಪರಿಸ್ಥಿತಿ ಮೊದಲಿಗಿಂತ ಈಗ ನಿಯಂತ್ರಣಕ್ಕೆ ಬಂದಿದೆ. ಸುಖಾಸುಮ್ಮನೆ ಒತ್ತುವರಿ ಆರೋಪ ಮಾಡುವುದು ಸರಿಯಲ್ಲ. ಒಂದು ವೇಳೆ ಒತ್ತುವರಿಯಾಗಿದ್ದರೆ, ಅದರ ಪಟ್ಟಿಯನ್ನು ನನಗೆ ನೀಡಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.