ADVERTISEMENT

ಅಖಿಲ ಭಾರತೀಯ ಸಾಹಿತ್ಯ ಪರಿಷದ್: ಆದಿಕವಿ, ವಾಗ್ದೇವಿ ಪುರಸ್ಕಾರ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 19:49 IST
Last Updated 8 ನವೆಂಬರ್ 2019, 19:49 IST
ನಾರಾಯಣಾ ಚಾರ್ಯ
ನಾರಾಯಣಾ ಚಾರ್ಯ   

ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಘಟಕದ ವತಿಯಿಂದ ಹೊಸದಾಗಿ ಎರಡು ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದ್ದು, ‘ಆದಿಕವಿ’ ಪುರಸ್ಕಾರಕ್ಕೆ ಹಿರಿಯ ವಿದ್ವಾಂಸ ಡಾ. ಕೆ. ಎಸ್‌. ನಾರಾಯಣಾ ಚಾರ್ಯ ಮತ್ತು ‘ವಾಗ್ದೇವಿ’ ಪ್ರಶಸ್ತಿಗೆ ಯುವ ಬರಹಗಾರ ಡಾ. ರೋಹಿಣಾಕ್ಷ ಶಿರ್ಲಾಲು ಆಯ್ಕೆಯಾಗಿದ್ದಾರೆ.

‘ಪ್ರಶಸ್ತಿ ತಲಾ ₹ 1 ಲಕ್ಷ ನಗದು ಒಳಗೊಂಡಿದೆ. ಇದೇ 24ರಂದು ಬೆಳಿಗ್ಗೆ 10.30ಕ್ಕೆ ನಗರದ ಮಿಥಿಕ್‌ ಸೊಸೈಟಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಪರಿಷದ್‌ನ ಅಧ್ಯಕ್ಷ ಪ್ರೊ. ಪ್ರೇಮಶೇಖರ ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಭಾರತೀಯ ಭಾಷೆಗಳಲ್ಲಿಯ ಸಾಹಿತ್ಯ ಶ್ರೀಮಂತಿಕೆಯ ಪರಿಚಯ, ಪೋಷಣೆ ಮತ್ತುರಕ್ಷಣೆ ಮಾಡುವ ಕೆಲಸವನ್ನು ಪರಿಷದ್‌ 1966ರಿಂದ ಮಾಡುತ್ತ ಬಂದಿದೆ. ರಾಜ್ಯ ಘಟಕ 2015ರಲ್ಲಿ ಸ್ಥಾಪನೆಯಾಗಿದ್ದು, ಈಗಾಗಲೇ ಎರಡು ಸಮ್ಮೇಳನಗಳನ್ನು ನಡೆಸಲಾಗಿದೆ. ಜಗತ್ತಿಗೇ ಮೊದಲಿಗೆ ಬೃಹತ್‌ ಸಾಹಿತ್ಯ ಕೃತಿಗಳನ್ನು ನೀಡಿದ ಭಾರತದ ಆದಿಕವಿ ವಾಲ್ಮೀಕಿಯನ್ನು ಸ್ಮರಿಸಿ, ಅಂತಹ ಕೆಲಸ ಮುಂದುವರಿಸಿರುವ ಯೋಗ್ಯರಿಗೆ ಆದಿಕವಿ ಪ್ರಶಸ್ತಿ ನೀಡುವ ಗುರಿಯೊಂದಿಗೆ ಹೊಸ ಪುರಸ್ಕಾರ ಸ್ಥಾಪಿಸಲಾಗಿದೆ’ ಎಂದರು.

ADVERTISEMENT

ಆದಿಕವಿ ಪ್ರಶಸ್ತಿಯ ಪ್ರಾಯೋಜಕ ಹಾಗೂ ಉದ್ಯಮಿ ಎಸ್‌. ಜಯರಾಂ, ವಾಗ್ದೇವಿ ಪ್ರಶಸ್ತಿಯ ಪ್ರಾಯೋಜಕ ಹಾಗೂ ಇಸ್ರೊದ ನಿವೃತ್ತ ವಿಜ್ಞಾನಿ ಕೆ. ಹರೀಶ್‌,‍ಪರಿಷತ್‌ನ ಗೌರವ ಸಲಹೆಗಾರರಾದ ಡಾ. ಎಸ್‌. ಆರ್. ಲೀಲಾ, ಕಾರ್ಯದರ್ಶಿ ರಘುನಂದನ ಭಟ್‌ ಪೂರಕ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.