ADVERTISEMENT

ಆದಾಯ ಮೀರಿ ಆಸ್ತಿ ಆರೋಪ: ನಾಲ್ವರು ಅಧಿಕಾರಿಗಳ ಮನೆ ಶೋಧ

ಸಿಟಿಒ ಹೆಚ್ಚುವರಿ ಆಯುಕ್ತ‌ ಸತೀಶ್‌ ಮನೆ ಮೇಲೆಯೂ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 20:55 IST
Last Updated 10 ಜೂನ್ 2020, 20:55 IST

ಬೆಂಗಳೂರು: ಅಕ್ರಮ ಆಸ್ತಿ ಹೊಂದಿದ ಆರೋಪದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಎಲ್‌. ಸತೀಶ್‌ ಕುಮಾರ್‌ ಸೇರಿದಂತೆ ನಾಲ್ವರು ಅಧಿಕಾರಿಗಳ ಮನೆ ಮತ್ತು ಕಚೇರಿಗಳೂ ಸೇರಿದಂತೆ 14 ಸ್ಥಳಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಬುಧವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಶ್ರೀನಿವಾಸ‍ಪುರ ವಲಯದ ವಲಯ ಅರಣ್ಯಾಧಿಕಾರಿ ಎನ್‌.ರಾಮಕೃಷ್ಣ, ರಾಯಚೂರು ಜಿಲ್ಲಾಧಿಕಾರಿ ಕಚೇರಿ ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಎಂಜಿನಿಯರ್‌ ಗೋಪಶೆಟ್ಟಿ ಮಲ್ಲಿಕಾರ್ಜನ ಮತ್ತು ಕೃಷ್ಣಾಭಾಗ್ಯ ಜಲ ನಿಗಮದ ಸಹಾಯಕ ಎಂಜಿನಿಯರ್‌ ರಾಘಪ್ಪ ಲಾಲಪ್ಪ ಲಮಾಣಿ ಅವರ ಮನೆ ಮತ್ತು ಕಚೇರಿಗಳಲ್ಲೂ ಶೋಧ ನಡೆಯಿತು.

ಸತೀಶ್‌ ಕುಮಾರ್‌ ಅವರ ಡಾಲರ್ಸ್‌ ಕಾಲೊನಿ ಬಾಡಿಗೆ ಮನೆ, ಗಾಂಧಿನಗರ ತೆರಿಗೆ ಭವನದಲ್ಲಿರುವ ಕಚೇರಿ ಹಾಗೂ ಮೈಸೂರಿನ ತೊಣಚಿಕೊಪ್ಪಲ್‌ ಬಡಾವಣೆಯಲ್ಲಿರುವ ಅವರ ಸ್ವಂತ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದರು.

ADVERTISEMENT

ವಾಣಿಜ್ಯ ಇಲಾಖೆ, ಮೈಸೂರು ಜಂಟಿ ಆಯುಕ್ತರಾಗಿ ಕೆಲಸ ಮಾಡುತ್ತಿದ್ದ ಇವರು 2019ರ ಸೆಪ್ಟೆಂಬರ್‌ನಲ್ಲಿ ಬಡ್ತಿ ಹೊಂದಿ ಬೆಂಗಳೂರಿಗೆ ಬಂದಿದ್ದರು ಎಂದು ಮೂಲಗಳು ತಿಳಿಸಿವೆ.

ರಾಮಕೃಷ್ಣ ಅವರ ಬಂಗಾರಪೇಟೆಯ ವಿಜಯನಗರದ ಮನೆ, ಕೋಲಾರ ಜಿಲ್ಲೆ ಮಿಟ್ಟಗಳ್ಳಿ ಗ್ರಾಮದ ಮನೆ, ಬೆಂಗಳೂರಿನ ವಾಸದ ಮನೆ ಹಾಗೂ ಕಸ್ತೂರಿ ನಗರದ ಸ್ನೇಹಿತರ ಮನೆಗಳನ್ನು ಎಸಿಬಿ ಅಧಿಕಾರಿಗಳು ಜಾಲಾಡಿದರು.

ಗೋಪಶೆಟ್ಟಿ ಮಲ್ಲಿಕಾರ್ಜುನ ಅವರಿಗೆ ಸೇರಿದ ರಾಯಚೂರಿನ ಮಂತ್ರಾಲಯ ರಸ್ತೆ ಮನೆ, ಲಿಂಗಸಗೂರು ರಸ್ತೆಯಲ್ಲಿ ಪತ್ನಿ ಹೆಸರಿನಲ್ಲಿರುವ ಪೆಟ್ರೋಲ್‌ ಬಂಕ್‌, ರಾಯಚೂರು– ಲಿಂಗಸಗೂರು ಹೆದ್ದಾರಿಯಲ್ಲಿರುವ ನಾಗಭೂಷಣ್‌ ಟ್ರ್ಯಾಕ್ಟರ್‌ ಷೋರೂಂ, ಕಾರ್ಯಪಾಲಕ ಎಂಜಿನಿಯರ್‌ ಕಚೇರಿಗಳಲ್ಲೂ ಶೋಧ ನಡೆಸಲಾಗಿದೆ.

ರಾಘಪ್ಪನವರ ವಿದ್ಯಾಗಿರಿ 8ನೇ ಕ್ರಾಸ್‌ನಲ್ಲಿರುವ ವಾಸದ ಮನೆ, ಸಹೋದರನ ಶಿರಗುಪ್ಪಿ ಎಲ್‌.ಟಿ. ಗ್ರಾಮದ ಮನೆ ಹಾಗೂ ಇವರು ಕೆಲಸ ಮಾಡುತ್ತಿರುವ ಕೃಷ್ಣಾಭಾಗ್ಯ ಜಲ ನಿಗಮ ಎಫ್‌ಆರ್‌ಎಲ್‌ ಸರ್ವೆ ವಿಭಾಗ ನಂ 2 ಬೀಳಗಿ ಕ್ಯಾಂಪ್‌ ಆಲಮಟ್ಟಿಯ ಕಚೇರಿಯಲ್ಲಿ ಅಧಿಕಾರಿಗಳು ತಪಾಸಣೆ ಕೈಗೊಂಡರು.

ಈ ಅಧಿಕಾರಿಗಳು ಆದಾಯ ಮೀರಿ ಆಸ್ತಿ ಸಂಪಾದಿಸಿದ್ದಾರೆ ಎಂದು ಬಂದಿರುವ ದೂರುಗಳನ್ನು ಆಧರಿಸಿ ದಾಳಿ ನಡೆಸಲಾಗಿದೆ. ಎಸಿಬಿ ಅಧಿಕಾರಿಗಳ ದೊಡ್ಡ ಪಡೆಯೇ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.