ADVERTISEMENT

ಸಹಕಾರಿ ಸಂಘಗಳ ಎ.ಆರ್‌ ಮನೆ ಮೇಲೆ ಎಸಿಬಿ ದಾಳಿ

ಆದಾಯ ಮೀರಿ ಆಸ್ತಿ ಆರೋಪ: ನಾಲ್ವರು ಅಧಿಕಾರಿಗಳ ಬಳಿ ಅಕ್ರಮ ಹಣ, ಆಸ್ತಿ ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 19:04 IST
Last Updated 19 ಮಾರ್ಚ್ 2019, 19:04 IST

ಬೆಂಗಳೂರು: ಆದಾಯ ಮೀರಿ ಆಸ್ತಿ ಹೊಂದಿರುವ ಆರೋಪಕ್ಕೊಳಗಾಗಿರುವ ಸಹಕಾರ ಸಂಘಗಳ ಹೆಚ್ಚುವರಿ ನೋಂದಣಾಧಿಕಾರಿ (ಎ.ಆರ್.) ಬಿ.ಸಿ. ಸತೀಶ್‌ ಸೇರಿದಂತೆ ನಾಲ್ವರು ಅಧಿಕಾರಿಗಳ ಮನೆಗಳು ಹಾಗೂ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿ, ಭಾರಿ ಪ್ರಮಾಣದ ಅಕ್ರಮ ಆಸ್ತಿ‍ ಪತ್ತೆ ಹಚ್ಚಿದ್ದಾರೆ.

ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ವಿಜಯಪುರ ಉಪ ನಿರ್ದೇಶಕ ಶರದ್‌ ಗಂಗಪ್ಪ ಇಜೇರಿ, ಮುಂಡರಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ್‌ಗೌಡ ಕುದುರೆಮೋತಿ ಹಾಗೂ ಬಿಬಿಎಂಪಿ, ಜೆ.ಬಿ ನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಎಸ್‌.ಬಿ ಮಂಜುನಾಥ್ ಅವರಿಗೂ ಎಸಿಬಿ ದಾಳಿ ಬಿಸಿ ತಟ್ಟಿದೆ.

ನಗರದ ಬಸವೇಶ್ವರ ನಗರದಲ್ಲಿರುವ ಸತೀಶ್‌ ಮನೆ ಹಾಗೂ ಆರ್‌ಪಿಸಿ ಬಡಾವಣೆಯಲ್ಲಿರುವ ಸಂಬಂಧಿಕರ ಮನೆ, ಅಲಿ ಅಸ್ಗರ್‌
ರಸ್ತೆಯಲ್ಲಿರುವ ಕಚೇರಿ ಮೇಲೆ ದಾಳಿ ಆಗಿದೆ. ಸತೀಶ್‌ ಬಸವೇಶ್ವರನಗರದಲ್ಲಿ ಅದ್ದೂರಿ ಮನೆ ಹೊಂದಿದ್ದಾರೆ.

ADVERTISEMENT

ಇಜ್ರಿ ಅವರ ವಿಜಯಪುರ ಮನೆ ಮತ್ತು ಕಚೇರಿ, ಮುಂಡರಗಿಯಲ್ಲಿರುವ ಪ್ರಕಾಶ್‌ಗೌಡರ ಎರಡು ಮನೆ ಮತ್ತು ರೈತ ಸಂಪರ್ಕ ಕೇಂದ್ರ, ಮಂಜುನಾಥ್‌ ಅವರ ನಾಯಂಡಳ್ಳಿ ಮನೆ, ಜೆ.ಬಿ ನಗರದ ಕಚೇರಿ ಮತ್ತು ಚನ್ನರಾಯಪಟ್ಟಣದ ಸಂಬಂಧಿಕರ ಮನೆ ಮೇಲೆ ದಾಳಿ ನಡೆದಿವೆ.

ದಾಳಿ ವೇಳೆ ಭಾರಿ ಹಣ, ಆಭರಣ ಹಾಗೂ ಆಸ್ತಿಪಾಸ್ತಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ವಿವರಗಳನ್ನು ಬಿಡುಗಡೆ ಮಾಡಿಲ್ಲ.

ಸತೀಶ್‌ ಯಾರು?

ಸತೀಶ್‌ ಕಾಂಗ್ರೆಸ್‌ ಶಾಸಕ ರಮೇಶ್‌ ಜಾರಕಿಹೊಳಿಗೆ ಆಪ್ತರಾಗಿದ್ದು, ಅವರು ಸಚಿವರಾಗಿದ್ದಾಗ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.

ಬಸವೇಶ್ವರನಗರದಲ್ಲಿರುವ ಸತೀಶ್‌ ಮನೆ ಸುಮಾರು ₹ 3 ಕೋಟಿ ಆಗಬಹುದು. ಅಲ್ಲದೆ, ಅವರ ಬಳಿ ₹ 1.5 ಲಕ್ಷ ಹಣ ಸಿಕ್ಕಿದೆ ಎಂದು ಮೂಲಗಳು ಹೇಳಿವೆ. ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ಬುಧವಾರದ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ.

ಎಸಿಬಿ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದಾಗ ಸತೀಶ್‌ ಅವರ ಪತ್ನಿ ಗಳಗಳನೆ ಅತ್ತರು ಎನ್ನಲಾಗಿದೆ.

ರಾಜ್ಯದ ಮೈತ್ರಿ ಸರ್ಕಾರಕ್ಕೂ ಈ ದಾಳಿಗೂ ಸಂಬಂಧವಿಲ್ಲ. ಕೆಲ ತಿಂಗಳ ಹಿಂದೆ ಸಹಕಾರ ಸಂಘಗಳ ಮತ್ತೊಬ್ಬ ಹೆಚ್ಚುವರಿ ರಿಜಿಸ್ಟ್ರಾರ್‌ ಶ್ರೀಧರ್‌ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆದಿದ್ದಾಗಲೇ ಸತೀಶ್‌ ಮನೆ ಮೇಲೂ ದಾಳಿ ನಡೆಸುವ ಯೋಜನೆ ರೂಪಿಸಲಾಗಿತ್ತು ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಎಆರ್‌ಟಿಒ ಅಮಾನತು

ಬೆಂಗಳೂರಿನಲ್ಲಿ ನಡೆದ ಏರ್‌ ಷೋ ವೇಳೆ ಕಾರು ನಿಲುಗಡೆಯಲ್ಲಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಸುಟ್ಟುಹೋದ ಕಾರಿನ ತೆರಿಗೆ ಹಣ ಹಿಂತಿರುಗಿಸಲು ಅದರ ಮಾಲೀಕರಿಂದ ₹ 4 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದು ನ್ಯಾಯಾಂಗ ಬಂಧನದಲ್ಲಿರುವ ಉಡುಪಿ ಎಆರ್‌ಟಿಒ ಆರ್‌.ಎಂ. ವೆರ್ಣೇಕರ್‌ ಅವರನ್ನು ಮಂಗಳವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ರಾಜ್ಯ ಸಾರಿಗೆ ಹಾಗೂ ರಸ್ತೆ ಸುರಕ್ಷತೆ ಮತ್ತು ಶಿಸ್ತು ಪ್ರಾಧಿಕಾರದ ಆಯುಕ್ತರು ಅಮಾನತು ಆದೇಶ ಹೊರಡಿಸಿದ್ದಾರೆ. ವೆರ್ಣೇಕರ್‌ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿ ₹ 70 ಲಕ್ಷ ನಗದೂ ಸೇರಿ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆ ವಶಪಡಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.