ADVERTISEMENT

ಯತ್ನಾಳ ಹೇಳಿಕೆ ಕುರಿತು ಎಸಿಬಿ ತನಿಖೆಯಾಗಲಿ: ಡಿ.ಕೆ. ಶಿವಕುಮಾರ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಮೇ 2022, 8:09 IST
Last Updated 6 ಮೇ 2022, 8:09 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬೆಂಗಳೂರು: 2,500 ಕೋಟಿ ನೀಡಿದರೆ ತಮ್ಮನ್ನು ಮುಖ್ಯಮಂತ್ರಿ ಮಾಡುವುದಾಗಿ ಬಿಜೆಪಿ ವರಿಷ್ಠರು ಹೇಳುತ್ತಿದ್ದಾರೆ ಎಂದು ಆ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಡಿರುವ ಆರೋಪದ ಕುರಿತು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ಯತ್ನಾಳ ಸಾಮಾನ್ಯ ವ್ಯ್ಕಕ್ತಿಯಲ್ಲ. ಬಿಜೆಪಿಯ ದೊಡ್ಡ ನಾಯಕ. ಸಂಸದ, ಶಾಸಕನಾಗಿ, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದವರು. ಅವರ ಮಾತನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಮುಖ್ಯಮಂತ್ರಿ ಹುದ್ದೆ ನೀಡಲು 2,500 ಕೋಟಿಗೆ ಬೇಡಿಕೆ ಇಟ್ಟಿರುವುದು ಗಂಭೀರ ವಿಚಾರ. ಈ ಬಗ್ಗೆ ತಕ್ಷಣ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಈ ಸರ್ಕಾರದಲ್ಲಿ ಮುಖ್ಯಮಂತ್ರಿ, ಮಂತ್ರಿ, ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌, ಎಸಿಪಿ, ಡಿವೈಎಸ್‌ಪಿ, ಎಸ್‌ಪಿ, ತಹಶೀಲ್ದಾರ್‌, ಶಿಕ್ಷಕರು ಎಲ್ಲ ಹುದ್ದೆಗಳಿಗೂ ದರ ನಿಗದಿ ಮಾಡಿದ್ದಾರೆ. ಮಂತ್ರಿ ಮಾಡಬೇಕಾದರೆ 100 ಕೋಟಿ ಕೊಡಬೇಕಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉತ್ತರ ನೀಡಲಿ ಎಂದು ಆಗ್ರಹಿಸಿದರು.

ADVERTISEMENT

ನ್ಯಾಯ ಒದಗಿಸಿ: ಕೋವಿಡ್‌ನಿಂದ ರಾಜ್ಯದಲ್ಲಿ 4.5 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ನಾನು, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಹಲವರು ಹೇಳಿದ್ದೆವು. ಆದರೆ, ಸರ್ಕಾರ ಅದನ್ನು ಒಪ್ಪಿಕೊಂಡಿರಲಿಲ್ಲ. ರಾಜ್ಯದ ಆರೋಗ್ಯ ಸಚಿವರು ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿದ್ದರು. ದೇಶದಲ್ಲಿ ಕೋವಿಡ್‌ನಿಂದ 47 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಈಗ ವರದಿ ನೀಡಿದೆ. ಇನ್ನಾದರೂ ಸರ್ಕಾರ ಸತ್ಯ ಒಪ್ಪಿಕೊಳ್ಳಲಿ ಎಂದು ಶಿವಕುಮಾರ್‌ ಹೇಳಿದರು.

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ಘೋಷಿಸಿದ್ದ ಪರಿಹಾರವನ್ನು ಈವರೆಗೂ ವಿತರಿಸಿಲ್ಲ. ಈಗ ಮುಖ್ಯಮಂತ್ರಿಯವರು ಪುನಃ ಸಭೆ ನಡೆಸಿ, ಕೋವಿಡ್‌ನಿಂದ ಮೃತಪಟ್ಟ ಎಲ್ಲರ ಕುಟುಂಬಗಳಿಗೂ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.