ADVERTISEMENT

KSRTC: ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ₹50 ಲಕ್ಷ ಪ್ರೀಮಿಯಂ ರಹಿತ ಅಪಘಾತ ವಿಮೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 11:36 IST
Last Updated 19 ಅಕ್ಟೋಬರ್ 2022, 11:36 IST
ಎಂ.ಚಂದ್ರಪ್ಪ ಅವರ ಸಮ್ಮುಖದಲ್ಲಿ ಎಸ್‌ಬಿಐ ಉಪ ಪ್ರಧಾನ ವ್ಯವಸ್ಥಾಪಕ ಪಂಕಜ್ ತಪ್ಲಿಯಾಲ್ ಮತ್ತು ವಿ.ಅನ್ಬುಕುಮಾರ್ ಒಪ್ಪಂದ ಪತ್ರಗಳನ್ನು ಹಸ್ತಾಂತರ ಮಾಡಿಕೊಂಡರು. ಕೆಎಸ್‌ಆರ್‌ಟಿಸಿ ನಿರ್ದೇಶಕ (ಸಿಬ್ಬಂದಿ ಮತ್ತು ಜಾಗೃತ) ವೈ. ನವೀನ್ ಭಟ್ ಇದ್ದರು
ಎಂ.ಚಂದ್ರಪ್ಪ ಅವರ ಸಮ್ಮುಖದಲ್ಲಿ ಎಸ್‌ಬಿಐ ಉಪ ಪ್ರಧಾನ ವ್ಯವಸ್ಥಾಪಕ ಪಂಕಜ್ ತಪ್ಲಿಯಾಲ್ ಮತ್ತು ವಿ.ಅನ್ಬುಕುಮಾರ್ ಒಪ್ಪಂದ ಪತ್ರಗಳನ್ನು ಹಸ್ತಾಂತರ ಮಾಡಿಕೊಂಡರು. ಕೆಎಸ್‌ಆರ್‌ಟಿಸಿ ನಿರ್ದೇಶಕ (ಸಿಬ್ಬಂದಿ ಮತ್ತು ಜಾಗೃತ) ವೈ. ನವೀನ್ ಭಟ್ ಇದ್ದರು   

ಬೆಂಗಳೂರು: ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ₹50 ಲಕ್ಷದ ತನಕ ಅಪಘಾತ ವಿಮಾ ಸೌಲಭ್ಯ ದೊರಕಿಸುವ ಯೋಜನೆಯನ್ನು ನಿಗಮ ಜಾರಿಗೆ ತಂದಿದೆ.

ಈ ಸಂಬಂಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಜತೆ ಒಡಂಬಡಿಕೆಯನ್ನು ಕೆಎಸ್‌ಆರ್‌ಟಿಸಿ ಬುಧವಾರ ಮಾಡಿಕೊಂಡಿದೆ. ನಿಗಮದ ಅಧ್ಯಕ್ಷ ಚಂದ್ರಪ್ಪ ಸಮ್ಮುಖದಲ್ಲಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಮತ್ತು ಎಸ್‌ಬಿಐ ಉಪ ಪ್ರಧಾನ ವ್ಯವಸ್ಥಾಪಕ ಪಂಕಜ್ ತಪ್ಲಿಯಾಲ್ ಒಪ್ಪಂದಕ್ಕೆ ಸಹಿ ಹಾಕಿದರು.

ಅಪಘಾತದಲ್ಲಿ ಸಿಬ್ಬಂದಿ ಮೃತಪಟ್ಟರೆ ಅವಲಂಬಿತರಿಗೆ ಈವರೆಗೆ ಪರಿಹಾರ ಸಿಗುತ್ತಿರಲಿಲ್ಲ. ಹೊಸ ಯೋಜನೆಯಿಂದ ಎಸ್‌ಬಿಐ ಬ್ಯಾಂಕ್‌ನಲ್ಲಿ ವೇತನ ಖಾತೆ ಹೊಂದಿರುವ ನೌಕರರಿಗೆ ‘ಪ್ರೀಮಿಯಂ ರಹಿತ’ ವೈಯಕ್ತಿಕ ಅಪಘಾತ ವಿಮೆ ಲಭ್ಯವಾಗಲಿದೆ. ನಿಗಮದ ಶೇ55ಕ್ಕೂ ಹೆಚ್ಚು ಸಿಬ್ಬಂದಿ ಎಸ್‌ಬಿಐನಲ್ಲಿ ವೇತನ ಖಾತೆ ಹೊಂದಿದ್ದಾರೆ ಎಂದು ನಿಗಮ ತಿಳಿಸಿದೆ.

ADVERTISEMENT

ಈ ವೈಯಕ್ತಿಕ ವಿಮಾ ಯೋಜನೆ ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟರೆ ಅವರ ಅವಲಂಬಿತರಿಗೆ ₹50 ಲಕ್ಷ ಪರಿಹಾರ ದೊರೆಯಲಿದೆ. ಶಾಶ್ವತ ಅಂಗವಿಕಲರಾದರೆ ₹20 ಲಕ್ಷ ಹಾಗೂ ಭಾಗಶಃ ಅಂಗವಿಕಲರಾದರೆ ₹10 ಲಕ್ಷ ವಿಮಾ ಪರಿಹಾರ ದೊರೆಯಲಿದೆ. ಕರ್ತವ್ಯದಲ್ಲಿ ಇಲ್ಲದ ಅವಧಿಯಲ್ಲಿ ಅಪಘಾತ ಸಂಭವಿಸಿದರೂ ಪಾಲಿಸಿದಾರರಿಗೆ ವಿಮಾ ಸೌಲಭ್ಯ ಲಭ್ಯವಾಗಲಿದೆ.

ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಗೆ ಗರಿಷ್ಠ ₹10 ಲಕ್ಷ, ಔಷಧಗಳ ಆಮದಿಗೆ ಗರಿಷ್ಠ ₹5 ಲಕ್ಷ, ಕೋಮಾದಲ್ಲಿ ಮೃತಪಟ್ಟರೆ ಹೆಚ್ಚುವರಿ ₹2 ಲಕ್ಷ(₹50 ಲಕ್ಷ ಮತ್ತು ₹2 ಲಕ್ಷ), ವಿಮಾನ ಆಂಬುಲೆನ್ಸ್‌ ಸೇವೆಗೆ ₹10 ಲಕ್ಷ ಪರಿಹಾರ ದೊರಕಲಿದೆ. ಸಿಬ್ಬಂದಿ ಅಪಘಾತದಲ್ಲಿ ಮೃತಪಟ್ಟರೆ ಅವರ ಮಕ್ಕಳ ಪದವಿ ಶಿಕ್ಷಣಕ್ಕೆ ಗರಿಷ್ಠ ₹5 ಲಕ್ಷ ಹಾಗೂ ಹೆಣ್ಣುಮಗಳ ವಿವಾಹಕ್ಕೆ ಗರಿಷ್ಠ ₹5 ಲಕ್ಷದ ತನಕ ಆರ್ಥಿಕ ಸಹಾಯವನ್ನೂ ಈ ವಿಮೆ ಒಳಗೊಂಡಿದೆ ಎಂದು ನಿಗಮ ವಿವರಿಸಿದೆ.

‘ನಿಗಮದ ಸಿಬ್ಬಂದಿ ಮತ್ತು ಅವರ ಕುಟುಂಬದ ಹಿತದೃಷ್ಟಿಯಿಂದ ಈ ವಿಮಾ ಯೋಜನೆ ಜಾರಿಗೊಳಿಸಲಾಗಿದೆ. ಸಾರಿಗೆ ನಿಗಮಗಳಲ್ಲೇ ಅತ್ಯಧಿಕ ಮೊತ್ತದ ಅಪಘಾತ ವಿಮಾ ಯೋಜನೆ ಇದಾಗಿದೆ. ಕರ್ತವ್ಯದಲ್ಲಿ ಇಲ್ಲದ ಸಂದರ್ಭದಲ್ಲಿ ಅಪಘಾತ ಸಂಭವಿಸಿದರೂ ವಿಮೆ ಲಭ್ಯವಾಗುವುದು ಈ ಯೋಜನೆಯ ಮತ್ತೊಂದು ವಿಶೇಷ’ ಎಂದು ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.