ADVERTISEMENT

ಕರಾಳ ಶನಿವಾರ: ರಾಜ್ಯದ ವಿವಿಧೆಡೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 8 ಸಾವು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2018, 7:19 IST
Last Updated 8 ಸೆಪ್ಟೆಂಬರ್ 2018, 7:19 IST
   

ಬೆಂಗಳೂರು: ರಾಜ್ಯದ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಎಂಟು ಜನರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ.

ಬಾಗಲಕೋಟೆಯಲ್ಲಿ ಮೂವರು, ದಾವಣಗೆರೆಯಲ್ಲಿ ನಾಲ್ವರು ಹಾಗೂ ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್‌ ಅಪಘಾತಕ್ಕೆ ಬಲಿಯಾಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ದಾವಣಗೆರೆ ವರದಿ: ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ADVERTISEMENT

ಬೆಂಗಳೂರಿನಿಂದ ಹುಬ್ಬಳಿ ಕಡೆಗೆ ತೆರಳುತ್ತಿದ್ದ ಕಾರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಎದುರಿಗೆ ಬರುತ್ತಿದ್ದ ಲಾರಿಗೆ ಅಪ್ಪಳಿಸಿದೆ. ಘಟನೆಯಲ್ಲಿ
ವಿನಯ್ (27), ಅಜಯ್(35,)' ವಿನಯ್ (30) ಹಾಗೂ ಸಿದ್ದಪ್ಪ‌(28) ಮೃತಪಟ್ಟಿದ್ದಾರೆ.

ಗಿರೀಶ್ (23) ಹಾಗೂ ಕಿರಣ್ (35) ಗಂಭಿರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಡಿಟಿಡಿಸಿ ಕೋರಿಯರ್ ಸಿಬ್ಬಂದಿ ಎಂದು ತಿಳಿದು ಬಂದಿದ್ದು, ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರವಾಸಕ್ಕೆಂದು ತೆರಳುವಾಗ ಅಪಘಾತ ಸಂಭವಿಸಿದೆ.

ಬಾಗಲಕೋಟೆ ವರದಿ:ಜಿಲ್ಲೆಯ ಮುಧೋಳ ನಗರದಲ್ಲಿ ನಡೆದಟ್ರಕ್, ಒಮಿನಿ ವ್ಯಾನ್‌ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿಮೂವರು ಸಾವನ್ನಪ್ಪಿದ್ದಾರೆ.

ವಿಜಯಪುರ-ಬೆಳಗಾವಿ ರಾಜ್ಯ ಹೆದ್ದಾರಿಯ ಕೆ.ಆರ್.ಲಕ್ಕಂ ಶಾಲೆಯ ಬಳಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮದವರು. ಖಾಸಿಂಸಾಬ್ ಮುಜಾವರ(42), ಅಫ್ರಿನಾ ಖಾಸಿಂ ಸಾಬ್ ಮುಜಾವರ (35), ಶಬಾನಾ ನೂರ್ ಅಹಮದ್(38) ಮೃತರು. ಇವರುದುಡಿಯಲು ಗೋವಾಕ್ಕೆ ಹೋಗಿದ್ದರು ಮರಳಿ ಊರಿಗೆ ಬರುವಾಗ ಈ ಘಟನೆ ನಡೆದಿದೆ.

ಹುಬ್ಬಳ್ಳಿ ವರದಿ: ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಪೊಲೀಸ್ ಕಾನ್ ಸ್ಟೆಬಲ್ ಮೃತಪಟ್ಟ ಘಟನೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಬಳಿ ಶನಿವಾರ ಬೆಳಿಗ್ಗೆ ನಡೆದಿದೆ.

ಕಮರಿಪೇಟೆ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜ್ ಕುಸುಗಲ್ ಅವರು ಬೆಳಿಗ್ಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.