ADVERTISEMENT

ನವೋದ್ಯಮಗಳಿಗೆ ಮಸೂದೆಯ ಬಲ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 20:54 IST
Last Updated 18 ಮಾರ್ಚ್ 2020, 20:54 IST
   

ಬೆಂಗಳೂರು: ರಾಜ್ಯದಲ್ಲಿ ಆವಿಷ್ಕಾರ ಚಟುವಟಿಕೆಗಳಿಗೆ ಇನ್ನಷ್ಟು ಉತ್ತೇಜನ ನೀಡಲು ಕರ್ನಾಟಕ ನಾವಿನ್ಯತಾ ಪ್ರಾಧಿಕಾರ ಮಸೂದೆಯನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಯಿತು.

ಬಳಿಕ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ‘ರಾಜ್ಯದಲ್ಲಿ 9 ಸಾವಿರ ನವೋದ್ಯಮಗಳು ಇವೆ. ಉತ್ತೇಜನ ನೀಡುವ ಮೂಲಕ ಇವುಗಳ ಸಂಖ್ಯೆಯನ್ನು 20 ಸಾವಿರಕ್ಕೆ ಏರಿಸುವುದು ರಾಜ್ಯ ಸರ್ಕಾರದ ಗುರಿ. ಹೊಸ ಮಸೂದೆಯ ಮೂಲಕ ಹೊಸ ಆವಿಷ್ಕಾರಗಳಿಗೆ ತಾತ್ಕಾಲಿಕ ವಿನಾಯಿತಿ ನೀಡಲಾಗುತ್ತದೆ’ ಎಂದರು.

‘ಹೊಸ ಆವಿಷ್ಕಾರ ನಡೆಸುವವರು ‘ನಿಯಂತ್ರಣ ತಾಂತ್ರಿಕ ವೇದಿಕೆ‘ಯ (ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್‌) ಮುಂದೆ ಪ್ರಸ್ತಾವ ಮಂಡಿಸಬಹುದು. ನವೋದ್ಯಮಗಳ ಆವಿಷ್ಕಾರಗಳಿಗೆ ಕಾನೂನಾತ್ಮಕವಾಗಿ ಯಾವುದೇ ಅಡ್ಡಿ ಎದುರಾಗದಂತೆ ಖಾತರಿ ಒದಗಿಸುವ ಸಲುವಾಗಿ ಅವುಗಳಿಗೆ 2 ವರ್ಷಗಳ ವಿನಾಯಿತಿ ನೀಡಲಾಗುವುದು. ಯಾವುದೇ ನಿರ್ದಿಷ್ಟ ವಲಯದ ಆವಿಷ್ಕಾರಕ್ಕೆ ಸೀಮಿತವಲ್ಲ. ಎಲ್ಲ ವಲಯಗಳಿಗೂ ಅನ್ವಯವಾಗಲಿದೆ’ ಎಂದರು.

ADVERTISEMENT

‘ನವೋದ್ಯಮಗಳು ಹೊಸ ಆಲೋಚನೆಗಳನ್ನು ಆಧರಿಸಿದ ಸೇವೆ ಹಾಗೂ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತವೆ. ಅಂತಹವುಗಳು ಈಗಿರುವ ಕಾನೂನಿನ ವ್ಯಾಖ್ಯೆಗೆ ನಿಲುಕುವುದಿಲ್ಲ. ಹಾಗಾಗಿ, ಅಂತಹ ಉತ್ಪನ್ನ ಅಥವಾ ಸೇವೆಗಳಿಗೆ ತೊಡಕಾಗಬಾರದು ಎಂಬ ಕಾರಣಕ್ಕೆ ಸೀಮಿತ ಅವಧಿ, ನಿರ್ದಿಷ್ಟ ಪ್ರದೇಶಕ್ಕೆ ಅನ್ವಯವಾಗುವಂತೆ ಅಲ್ಪಕಾಲಿಕ ವಿನಾಯಿತಿ ನೀಡಲಾಗುತ್ತದೆ’ ಎಂದು ಅವರು ಹೇಳಿದರು.

‘ನಗರದಲ್ಲಿ ಓಲಾ ಹಾಗೂ ಉಬರ್‌ ಸಂಸ್ಥೆಗಳು ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಆರಂಭಿಸಿದಾಗ ಕಾನೂನು ತೊಡಕು ಉಂಟಾಗಿತ್ತು. ಇಂತಹ ಪರಿಸ್ಥಿತಿ ಮರುಕಳಿಸುವುದನ್ನು ಈ ಮಸೂದೆ ತಪ್ಪಿಸಲಿದೆ’ ಎಂದರು.

ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್‌, ‘ನಿಮ್ಮ ಆಲೋಚನೆ ಚೆನ್ನಾಗಿದೆ. ಈ ಬಗ್ಗೆ ನಮಗೆ ಅರ್ಥವಾಗುವಂತೆ ಇನ್ನಷ್ಟು ವಿವರಣೆ ನೀಡಿ’ ಎಂದು ಕೋರಿದರು.

‘ಯಡಿಯೂರಪ್ಪ ಅವರು 2008ರಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಿದರು. ಉದ್ಯಮಿಯೊಬ್ಬರು ಕೈಗಾರಿಕೆ ಸ್ಥಾಪಿಸುವ ಸಂಬಂಧ ಒಪ್ಪಂದ ಮಾಡಿಕೊಂಡರು. ಕೋಲಾರದಲ್ಲಿ ಕೈಗಾರಿಕೆ ಸ್ಥಾಪಿಸಲು ಮುಂದಾದರು. ಅನುಮತಿಗಾಗಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದರು. ಇಲಾಖಾ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಧಿಕಾರಿಗಳು ನಿರಾಕರಿಸಿದರು. ಬಳಿಕ ಗ್ರಾಮ ಪಂಚಾಯಿತಿ ಅನುಮತಿ ನೀಡಿದೆ. ಬಳಿಕ ಉದ್ಯಮಿಗೆ ನಗರಾಭಿವೃದ್ಧಿ ಇಲಾಖೆ ನೋಟಿಸ್‌ ನೀಡಿತು. ಕೈಗಾರಿಕೆ ಸ್ಥಾಪಿಸಲು ಸಾಧ್ಯವೇ ಆಗಲಿಲ್ಲ. ಅವರು ಸತ್ತು ಹೋದರು. ನಮ್ಮ ಕೆಲವು ಅಧಿಕಾರಿಗಳಿಗೆ ಕನಿಷ್ಠ 10 ಜನರಿಗೆ ತೊಂದರೆ ಕೊಡದಿದ್ದರೆ ತಿಂದ ಅನ್ನ ಕರಗುವುದಿಲ್ಲ. ಈ ರೀತಿ ಆಗದಂತೆ ಎಚ್ಚರ ವಹಿಸಿ’ ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ‘ಡ್ರೋಣ್‌, ಚಾಲಕರಹಿತ ಕಾರಿನಂತಹ ಹೊಸ ಆಲೋಚನೆಗಳನ್ನು ಇಲಾಖೆಗಳ ಮುಂದಿಟ್ಟರೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಇಂತಹ ಆಲೋಚನೆಗಳನ್ನು ಹೊಂದಿರುವವರಿಗೆ ಈ ಮಸೂದೆ ಬಲ ನೀಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.