ADVERTISEMENT

ರೈತರ ಮನೆ, ಆಸ್ತಿ ಜಪ್ತಿ ನಿಷೇಧಕ್ಕೆ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 18:54 IST
Last Updated 24 ಸೆಪ್ಟೆಂಬರ್ 2022, 18:54 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಸಿರಿಗೆರೆ (ಚಿತ್ರದುರ್ಗ): ‘ರೈತ ವಿರೋಧಿ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಸಾಲ ತೀರಿಸಲು ಅವಕಾಶ ನೀಡ ಲಾಗುವುದು. ಸಾಲ ವಸೂಲಿಗೆ ರೈತರ ಮನೆ, ಆಸ್ತಿ ಜಪ್ತಿ ಮಾಡುವುದನ್ನು ಸಂ ಪೂರ್ಣವಾಗಿ ನಿಷೇಧಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದರು.

ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆಯ ತರಳಬಾಳು ಮಠದಲ್ಲಿ ಶನಿವಾರ ನಡೆದ ಲಿಂಗೈಕ್ಯ ಶಿವಕುಮಾರ ಶಿವಾ ಚಾರ್ಯ ಸ್ವಾಮೀಜಿ ಅವರ 30ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಅತಿವೃಷ್ಟಿಯಿಂದ ಬೆಳೆನಷ್ಟವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಹಣಕಾಸು ಸಂಸ್ಥೆ, ಬ್ಯಾಂಕುಗಳು ಸಾಲ ವಸೂಲಿಗೆ ಮುಂದಾಗಿರುವುದು ಗಮನಕ್ಕೆ ಬಂದಿದೆ. ರೈತರ ಆಸ್ತಿ ಜಪ್ತಿಗೆ ನೋಟಿಸ್ ನೀಡುವ ಕಾರ್ಯಕ್ಕೆ ಅಂತ್ಯ ಹಾಡಲಾಗುವುದು’ ಎಂದರು.

ADVERTISEMENT

‘ರೈತರು ನೆಮ್ಮದಿಯಿಂದ ಇದ್ದಾಗ ಮಾತ್ರ ಸಮಾಜ ಸುಸ್ಥಿತಿಯಲ್ಲಿರಲು ಸಾಧ್ಯ. ಆಸ್ತಿ ಜಪ್ತಿ ಆಗುತ್ತದೆ ಎಂಬ ಆತಂಕ ಇನ್ನು ಮುಂದೆ ರೈತರನ್ನು ಕಾಡುವುದಿಲ್ಲ. ಸರ್ಕಾರ ರೈತಪರ
ವಾಗಿದ್ದು, ಎದೆಗುಂದುವ ಅಗತ್ಯವಿಲ್ಲ’ ಎಂದು ಶಾಸಕ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾ ಪಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್‌.ಆರ್‌.ಬಸವರಾಜಪ್ಪ, ‘ರೈತರಿಗೆ ಸರ್ಕಾರ ನೀಡುವ ಸಹಾಯಧನವನ್ನು ಬ್ಯಾಂಕ್‌ ಗಳು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿವೆ. ಫೈನಾನ್ಸ್‌ಗಳು ದುಬಾರಿ ಬಡ್ಡಿ ವಸೂಲಿ ಮಾಡುತ್ತಿವೆ. ಹಣಕಾಸು ಸಂಸ್ಥೆಗಳು ಸಾಲ ವಸೂಲಿಗೆ ಕಿರುಕುಳ ನೀಡುತ್ತಿವೆ. ಸರ್ಕಾರ ಈ ಕಿರುಕುಳವನ್ನು ತಪ್ಪಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.