ADVERTISEMENT

ಭದ್ರಾವತಿಯಲ್ಲಿರುವ ವಿಐಎಸ್‌ಎಲ್‌ ಉಳಿಸಿಕೊಳ್ಳಲು ಕ್ರಮ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 2:12 IST
Last Updated 18 ಫೆಬ್ರುವರಿ 2023, 2:12 IST
   

ಬೆಂಗಳೂರು: ‘ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಮುಚ್ಚಲು ಅವಕಾಶ ನೀಡುವುದಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಶೂನ್ಯವೇಳೆಯಲ್ಲಿ ಕಾಂಗ್ರೆಸ್‌ನ ಬಿ.ಕೆ.ಸಂಗಮೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ವಿಐಎಸ್‌ಎಲ್‌ ರಾಜ್ಯದ ಪ್ರತಿಷ್ಠಿತ ಮತ್ತು ದಕ್ಷಿಣ ಭಾರತದ ಮೊದಲ ಉಕ್ಕು ಕಾರ್ಖಾನೆ. ಇದನ್ನು ಉಳಿಸಿಕೊಳ್ಳಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

‘ಭಾರತೀಯ ಉಕ್ಕು ಪ್ರಾಧಿಕಾರ ತಮ್ಮಿಂದ ಇದನ್ನು ನಡೆಸಲು ಸಾಧ್ಯವಿಲ್ಲ ಎಂದು ಬಹಳ ಹಿಂದೆಯೇ ಹೇಳಿ ಬಿಟ್ಟಿದೆ. ಖಾಸಗಿಯವರು ತೆಗೆದುಕೊಳ್ಳಲು ಮುಂದೆ ಬಂದರೆ ಅವಕಾಶ ನೀಡುತ್ತೇವೆ. ಕೆಲವು ಉದ್ಯಮಿಗಳ ಜತೆ ಚರ್ಚಿಸಿದ್ದೇವೆ. ಕೆಲವರು ಪರಿಶೀಲಿಸುವುದಾಗಿ ಹೇಳಿದ್ದಾರೆ. ಇದು ಒಮ್ಮೆ ಆರಂಭವಾದರೆ ರಾಜ್ಯ ಮತ್ತು ಕೇಂದ್ರಕ್ಕೆ ತೆರಿಗೆ ಬರುತ್ತದೆ. ನೌಕರರ ಕೆಲಸವೂ ಉಳಿಯುತ್ತದೆ’ ಎಂದರು.

ADVERTISEMENT

ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ, ಈ ಕಾರ್ಖಾನೆಗೆ ಸುದೀರ್ಘ ಇತಿಹಾಸವಿದೆ. ಇದನ್ನು ಉಳಿಸಿಕೊಳ್ಳಬೇಕು. ಇದನ್ನು ಲಾಭದಾಯಕವಾಗಿ ನಡೆಸಲು ಸಾಧ್ಯವಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡೋಣ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.