ADVERTISEMENT

ಮೋದಿ ಸ್ವಾಗತಿಸುವವರ ಪಟ್ಟಿಗೆ ಫೈಟರ್‌ ರವಿ ಹೆಸರು ಸೇರಿಸಿದ್ದು ತಪ್ಪು: ಶೋಭಾ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 23:20 IST
Last Updated 13 ಮಾರ್ಚ್ 2023, 23:20 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವವರ ಪಟ್ಟಿಯಲ್ಲಿ ಫೈಟರ್‌ ರವಿ ಹೆಸರು ಸೇರಿಸಿರುವುದು ತಪ್ಪು. ಈ ಲೋಪ ಹೇಗೆ ನಡೆದಿದೆ ಎನ್ನುವುದನ್ನು ಪರಿಶೀಲಿಸಲಾಗುವುದು’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

‘ಫೈಟರ್ ರವಿ ಯಾರು ಎನ್ನುವುದು ಪ್ರಧಾನಿ ಅವರಿಗೆ ಗೊತ್ತಿರಲಿಲ್ಲ. ಹೀಗಾಗಿ, ಈ ತಪ್ಪಿಗಾಗಿ ಪ್ರಧಾನಿ ಅವರು ಜವಾಬ್ದಾರರಲ್ಲ. ಫೈಟರ್‌ ರವಿ ಹೆಸರನ್ನು ಸ್ಥಳೀಯ ನಾಯಕರು ಸೇರಿಸಿರಬಹುದು’ ಎಂದು ಸೋಮವಾರ ಸುದ್ದಿಗಾರರಿಗೆ ಇಲ್ಲಿ ತಿಳಿಸಿದರು.

‘ಸ್ವಾಗತಿಸುವವರ ಪಟ್ಟಿಯನ್ನು ಸಿದ್ಧಪಡಿಸಿದ ಬಳಿಕ ಆಯಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಅನುಮೋದನೆ ನೀಡುವುದು ಸಾಮಾನ್ಯ ಪ್ರಕ್ರಿಯೆ. ಹೀಗಾಗಿ, ಭವಿಷ್ಯದಲ್ಲಿ ಇಂತಹ ತಪ್ಪುಗಳು ನಡೆಯದಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ADVERTISEMENT

‘ಕಾಂಗ್ರೆಸ್‌ ಪಕ್ಷದ ಮುಖಂಡರು ಈ ವಿಷಯದಲ್ಲಿ ಹುಳುಕು ಹುಡುಕುವುದು ಬೇಡ. ಹಲವಾರು ವರ್ಷಗಳಿಂದ ರಾಜಕೀಯದಲ್ಲಿ ರೌಡಿಗಳಿಗೆ ಆಶ್ರಯ ನೀಡಿರುವ ಪಕ್ಷದಿಂದ ಬಿಜೆಪಿ ಯಾವುದೇ ನೈತಿಕ ಪಾಠ ಕಲಿಯುವ ಅಗತ್ಯವಿಲ್ಲ. ಆ ಪಕ್ಷದ ಹಲವು‌ ಮುಖಂಡರು ರೌಡಿಶೀಟರ್‌ಗಳಾಗಿದ್ದರು. ಕೆಲವರು ರೌಡಿಶೀಟರ್‌ ಪಟ್ಟಿಯಿಂದ ಹೊರಗೆ ಉಳಿದಿರುವವರು ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಜತೆಗೆ, ಪಕ್ಷದ ನೇತೃತ್ವ ವಹಿಸಿರುವವರೇ ರೌಡಿಶೀಟರ್‌ ಆಗಿದ್ದರು’ ಎಂದು ಅವರು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.