ADVERTISEMENT

ಏರೋ ಇಂಡಿಯಾ 2019: ವೈಮಾನಿಕ ಕಸರತ್ತಿಗೆ ಸಜ್ಜಾಗುತ್ತಿದೆ ಯಲಹಂಕ

ಡ್ರೋನ್‌ ಸ್ಪರ್ಧೆ, ಮಹಿಳಾ ದಿನಾಚರಣೆ ಈ ಬಾರಿಯ ವಿಶೇಷ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 1:33 IST
Last Updated 31 ಜನವರಿ 2019, 1:33 IST
‘ಏರೋ ಇಂಡಿಯಾ–2019’ ವೈಮಾನಿಕ ಪ್ರದರ್ಶನಕ್ಕೆ ಯಲಹಂಕ ವಾಯುನೆಲೆಯಲ್ಲಿ ಭರದ ಸಿದ್ಧತೆ ನಡೆದಿದೆಪ್ರಜಾವಾಣಿ ಚಿತ್ರ
‘ಏರೋ ಇಂಡಿಯಾ–2019’ ವೈಮಾನಿಕ ಪ್ರದರ್ಶನಕ್ಕೆ ಯಲಹಂಕ ವಾಯುನೆಲೆಯಲ್ಲಿ ಭರದ ಸಿದ್ಧತೆ ನಡೆದಿದೆಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಏರೋ ಇಂಡಿಯಾ 2019’ ವೈಮಾನಿಕ ಪ್ರದರ್ಶನಕ್ಕೆ ಯಲಹಂಕ ವಾಯುನೆಲೆ ಸಜ್ಜಾಗುತ್ತಿದೆ.ಇದೇ ಫೆ.20ರಿಂದ 24ರವರೆಗೆ ನಡೆಯಲಿರುವ ಲೋಹದ ಹಕ್ಕಿಗಳ ಉತ್ಸವಕ್ಕೆ ದೇಶ ವಿದೇಶಗಳ ಯುದ್ಧವಿಮಾನಗಳು, ನಾಗರಿಕ ವಿಮಾನಗಳನ್ನು ಬರಮಾಡಿಕೊಳ್ಳಲು ಭರದ ಸಿದ್ಧತೆ ಸಾಗಿದೆ.

ಏರೋ ಇಂಡಿಯಾದ 12ನೇ ಆವೃತ್ತಿಗೆ ನಡೆದಿರುವ ಪೂರ್ವಸಿದ್ಧತೆ ಕುರಿತು ವಾಯುನೆಲೆಯ ಕಮಾಂಡಿಂಗ್‌ ಅಧಿಕಾರಿ (ಎಒಸಿ) ರಾವುರಿ ಶೀತಲ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಯುದ್ಧ ವಿಮಾನಗಳ ಹಾಗೂ ನಾಗರಿಕ ವಿಮಾನಗಳ ಪ್ರದರ್ಶನ, ಹಾರಾಟದ ಜೊತೆಗೆ, ಡ್ರೋನ್ ಒಲಿಂಪಿಕ್‌ ಸ್ಪರ್ಧೆ, ಮಹಿಳಾ ದಿನಾಚರಣೆ ಆಯೋಜಿಸಿರುವುದು ಈ ಬಾರಿಯ ವಿಶೇಷ’ ಎಂದರು.

ADVERTISEMENT

‘ಇದುವರೆಗೆ ವಿಮಾನ ಹಾರಾಟಕ್ಕೆ 31 ಕಂಪನಿಗಳು ಹಾಗೂ ಪ್ರದರ್ಶನಕ್ಕೆ 22 ಕಂಪನಿಗಳು ಹೆಸರು ನೋಂದಾಯಿಸಿವೆ. ಇನ್ನಷ್ಟು ವಿದೇಶಿ ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದೆ. ರಫೇಲ್ ಕಂಪನಿಯ ಎರಡು ಯುದ್ಧವಿಮಾನಗಳೂ ಕಸರತ್ತು ಪ್ರದರ್ಶಿಸಲಿದ್ದು, ಒಂದು ವಿಮಾನ ಪ್ರದರ್ಶನದಲ್ಲಿ ಭಾಗವಹಿಸಲಿದೆ. ಏರೊಬ್ಯಾಟಿಕ್‌ ತಂಡಗಳ ಪ್ರದರ್ಶನ ಈ ಬಾರಿಯೂ ಇದೆ. ಎರಡು ವಿದೇಶಿ ತಂಡಗಳೂ ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.

ಇಂದಿರಾ ಕ್ಯಾಂಟೀನ್‌: ‘ವಿಪತ್ತು ನಿರ್ವಹಣೆ, ಭದ್ರತೆ ಹಾಗೂ ಅಗ್ನಿಶಾಮಕ ವ್ಯವಸ್ಥೆಗಳನ್ನು ಇನ್ನಷ್ಟು ಸುಸಜ್ಜಿತಗೊಳಿಸಿದ್ದೇವೆ. ಹೆಚ್ಚುವರಿ ಆಹಾರ ಕೌಂಟರ್‌ಗಳನ್ನು ತೆರೆಯಲಾಗುತ್ತದೆ. ರಿಯಾಯಿತಿ ದರದಲ್ಲಿ ಆಹಾರ ಪೂರೈಸಲು ಇಂದಿರಾ ಕ್ಯಾಂಟೀನ್‌ ಸೌಕರ್ಯ ಒದಗಿಸಲಾಗುತ್ತಿದೆ. ಕಳೆದ ಬಾರಿ ಕೇವಲ 200 ಶೌಚಾಲಯಗಳಿದ್ದವು. ಈ ಬಾರಿ 1000 ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ವಾಹನ ನಿಲುಗಡೆ ತಾಣದಿಂದ ಪ್ರದರ್ಶನದ ಸ್ಥಳವು ಸುಮಾರು 1.2 ಕಿ.ಮೀ ದೂರದಲ್ಲಿದೆ. ವಾಹನ ನಿಲ್ಲಿಸುವವರು ಪ್ರದರ್ಶನ ಸ್ಥಳವನ್ನು ತಲುಪಲು 20 ಬಸ್‌ ಸೌಕರ್ಯ ಒದಗಿಸಲಾಗುತ್ತದೆ’ ಎಂದರು.

ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ವಿಮಾನ ನಿಲ್ದಾಣ ತಲುಪಲು ಹೆಣ್ಣೂರು ರಸ್ತೆ ಬಳಸುವಂತೆ ಅವರು ಸಲಹೆ ನೀಡಿದರು.

‘ಈ ಬಾರಿ ವೈಮಾನಿಕ ಪ್ರದರ್ಶನ ವೀಕ್ಷಣಾ ಪ್ರದೇಶಕ್ಕೆ (ಅಡ್ವ) ಯಲಹಂಕ ನ್ಯೂಟೌನ್‌ನಿಂದ ಪ್ರವೇಶ ಕಲ್ಪಿಸಲಿದ್ದೇವೆ. ಗೇಟ್‌ ಸಂಖ್ಯೆ 8, 9, 10 ಹಾಗೂ 11ರ ಮೂಲಕ ಅಡ್ವ ಪ್ರದೇಶವನ್ನು ತಲುಪಬಹುದು. ಇಲ್ಲಿ ಏಕಕಾಲದಲ್ಲಿ ಸುಮಾರು 1 ಲಕ್ಷ ಮಂದಿ ಸೇರುವಷ್ಟು ಸ್ಥಳಾವಕಾಶ ಇದೆ. ಪ್ರವಾಸಿಗರಿಗೆ ಈ ಬಾರಿ ಶೆಲ್ಟರ್‌ಗಳನ್ನು ನಿರ್ಮಿಸಲಾಗಿದೆ’ ಎಂದು ವಾಯುನೆಲೆಯ ವಿಂಗ್ ಕಮಾಂಡರ್‌ ಅಮಿತ್‌ ಕುಮಾರ್‌ ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಅವಕಾಶ: ವೈಮಾಂತರಿಕ್ಷ ಕ್ಷೇತ್ರದತ್ತ ವಿದ್ಯಾರ್ಥಿಗಳನ್ನು ಸೆಳೆಯುವ ಉದ್ದೇಶದಿಂದ ಈ ಬಾರಿ ಪ್ರದರ್ಶನ ವೀಕ್ಷಣೆಗೆ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಿದ್ದೇವೆ. ನಿತ್ಯ ಕನಿಷ್ಠ 10 ಸಾವಿರ ವಿದ್ಯಾರ್ಥಿಗಳು ಪ್ರದರ್ಶನ ವೀಕ್ಷಿಸಲಿದ್ದಾರೆ’ ಎಂದರು.

ಈ ಬಾರಿ ಗೇಟ್ ನಂ.1ರಲ್ಲಿ ಸಾರ್ವಜನಿಕರಿಗೆ ಪ್ರವೇಶಾವಕಾಶವಿಲ್ಲ. ಗೇಟ್‌ ನಂ.2ರಲ್ಲಿ ಗಣ್ಯರು ಮತ್ತು ಮಾಧ್ಯಮದವರ ಪ್ರವೇಶಕ್ಕೆ ಅವಕಾಶವಿದೆ. ಗೇಟ್‌ ನಂ.3 ಅನ್ನು ನಿರ್ಗಮನಕ್ಕೆ ಬಳಸಲಾಗುತ್ತದೆ. ಪ್ರದರ್ಶನ ಮಳಿಗೆಗಳಿಗೆ ಕೊನೆಯ ಎರಡು ದಿನ ಸಾರ್ವಜನಿಕರಿಗೂ ಪ್ರವೇಶಾವಕಾಶ ಇದೆ.

ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಾರೆಯೇ ಎಂಬ ಪ್ರಶ್ನೆಗೆ, ‘ಈ ಬಗ್ಗೆ ರಕ್ಷಣಾ ಇಲಾಖೆಯಿಂದ ಮಾಹಿತಿ ನೀಡಲಾಗುತ್ತದೆ’ ಎಂದು ರಾವುರಿ ತಿಳಿಸಿದರು.

ಮಹಿಳಾ ದಿನಾಚರಣೆಗೆ ಸುನಿತಾ ವಿಲಿಯಮ್ಸ್‌?

‘ವೈಮಾಂತರಿಕ್ಷ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಯನ್ನು ಗುರುತಿಸುವ ಸಲುವಾಗಿ ಈ ಬಾರಿ ಇದೇ 23ರಂದು ‘ಮಹಿಳಾ ದಿನ’ ಆಚರಿಸಲಾಗುತ್ತಿದ್ದು, ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಅವರು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ರಾವುರಿ ಶೀತಲ್‌ ತಿಳಿಸಿದರು.

‘ವೈಮಾಂತರಿಕ್ಷ ಕ್ಷೇತ್ರದ ಸಾಧಕಿಯರನ್ನು ಸನ್ಮಾನಿಸಲಾಗುತ್ತದೆ. ಸಾಧಕಿಯರು ಅನುಭವ ಹಂಚಿಕೊಳ್ಳಲಿದ್ದಾರೆ. ಅವರ ಜೊತೆ ಸಂವಾದಗಳನ್ನು ಏರ್ಪಡಿಸಲಾಗುತ್ತದೆ. ಮಹಿಳಾ ಸಿಬ್ಬಂದಿ ಮಾತ್ರ ಇರುವ ತಂಡಗಳು ವಿಮಾನ ಹಾರಾಟ ನಡೆಸಲಿವೆ’ ಎಂದರು.

ನವೋದ್ಯಮಗಳ ಮೇಳ

ನವೋದ್ಯಮಗಳ ಮೇಳ ಈ ಬಾರಿಯ ಇನ್ನೊಂದು ವಿಶೇಷ. ವೈಮಾಂತರಿಕ್ಷ ಕ್ಷೇತ್ರದ ನವೋದ್ಯಮಿಗಳಿಗೆ ಪ್ರೇರಣೆ ನೀಡುವ ಸಲುವಾಗಿ, ಇದೇ 21ರಂದು ದೇಸಿ ಹಾಗೂ ವಿದೇಶಿ ನವೋದ್ಯಮಿಗಳ ನಡುವೆ ಸಂವಾದಕ್ಕೆ ವೇದಿಕೆ ಕಲ್ಪಿಸಲಾಗಿದೆ.

ರಕ್ಷಣಾ ಇಲಾಖೆಗೆ ಸಂಬಂಧಿಸಿದ ನವೋದ್ಯಮಗಳ ಮುಂದಿರುವ ಸವಾಲುಗಳ ಕುರಿತೂ ಸಂವಾದ ನಡೆಯಲಿದೆ.

ಮೊದಲ ಬಾರಿ ಸ್ಯಾಟಲೈಟ್‌ ಫೋನ್‌ ಬಳಕೆ

ಏರೋ ಇಂಡಿಯಾದಲ್ಲಿ ವಿಪತ್ತು ನಿರ್ವಹಣೆಗೆ ಮೊದಲ ಬಾರಿ ಸ್ಯಾಟಲೈಟ್‌ ಫೋನ್‌ ಬಳಸಲಾಗುತ್ತಿದೆ. ಭಾರಿ ಜನಸಂದಣಿ ಇರುವಲ್ಲಿ ಸಾಮಾನ್ಯ ಮೊಬೈಲ್‌ಗಳ ಸಿಗ್ನಲ್‌ ಕಡಿತಗೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಸ್ಯಾಟಲೈಟ್‌ ಪೋನ್‌ಗಳನ್ನು ಬಳಸಿದರೆ ಈ ಸಮಸ್ಯೆ ಇರುವುದಿಲ್ಲ.

ಈ ಬಾರಿಯ ಲಾಂಛನಕ್ಕೆ ತೇಜಸ್ ಪ್ರೇರಣೆ

‘ಏರೋ ಇಂಡಿಯಾ 2019’ರ ವೈಮಾನಿಕ ಪ್ರದರ್ಶನದ ಲಾಂಛನಕ್ಕೆ ದೇಸಿ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಲಾದ ಲಘು ಯುದ್ಧ ವಿಮಾನ ‘ತೇಜಸ್‌’ ಪ್ರೇರಣೆ. ತೇಜಸ್‌ ವಿಮಾನದ ಆಕಾರದ ತ್ರಿವರ್ಣ ಛಾಯೆ ಹಾಗೂ ಅಶೋಕ ಚಕ್ರವನ್ನು ಇದು ಹೊಂದಿದೆ.

‘ಈ ಲಾಂಛನವು ನವಭಾರತದ ಉತ್ಸಾಹವನ್ನು ಬಿಂಬಿಸುತ್ತದೆ’ ಎಂದು ಸಂಘಟಕರು ಹೇಳಿಕೊಂಡಿದ್ದಾರೆ. ‘ಶತಕೋಟಿ ಅವಕಾಶಗಳಿಗೆ ರನ್‌ವೇ’ ಎಂಬ ಘೋಷವಾಕ್ಯ ಈ ಲಾಂಛನದ ಕೆಳಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.