ADVERTISEMENT

ಏರೋ ಇಂಡಿಯಾ 2023:ಲೋಹದ ಹಕ್ಕಿಗಳ ಪ್ರದರ್ಶನಕ್ಕೆ ತೆರೆ

ಏರೋ ಇಂಡಿಯಾ: ಕೊನೆ ದಿನ ಜನವೋ ಜನ l ಯುವಕರಿಗೆ ವಿಶೇಷ ತರಗತಿ ನಡೆಸಿದ ಹಿರಿಯ ಅಧಿಕಾರಿಗಳು

ಸಂತೋಷ ಜಿಗಳಿಕೊಪ್ಪ
Published 17 ಫೆಬ್ರುವರಿ 2023, 19:24 IST
Last Updated 17 ಫೆಬ್ರುವರಿ 2023, 19:24 IST
ಯಲಹಂಕ ವಾಯುನೆಲೆಯಲ್ಲಿ ಶುಕ್ರವಾರ ಪ್ರದರ್ಶನ ನೀಡಿದ ವಿಮಾನಗಳ ಜೋರು ಸದ್ದು ಕೇಳಿ ಮಕ್ಕಳಿಬ್ಬರು ಕಿವಿ ಮುಚ್ಚಿಕೊಂಡರು (ಎಡಚಿತ್ರ) ಯಲಹಂಕ ವಾಯುನೆಲೆ ಎದುರಿನ ಬಳ್ಳಾರಿ ರಸ್ತೆಯಲ್ಲಿ ವಿಪರೀತ ದಟ್ಟಣೆ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು
ಯಲಹಂಕ ವಾಯುನೆಲೆಯಲ್ಲಿ ಶುಕ್ರವಾರ ಪ್ರದರ್ಶನ ನೀಡಿದ ವಿಮಾನಗಳ ಜೋರು ಸದ್ದು ಕೇಳಿ ಮಕ್ಕಳಿಬ್ಬರು ಕಿವಿ ಮುಚ್ಚಿಕೊಂಡರು (ಎಡಚಿತ್ರ) ಯಲಹಂಕ ವಾಯುನೆಲೆ ಎದುರಿನ ಬಳ್ಳಾರಿ ರಸ್ತೆಯಲ್ಲಿ ವಿಪರೀತ ದಟ್ಟಣೆ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು   

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಆಯೋಜಿಸಿದ್ದ ಐದು ದಿನಗಳ ‘ಏರೋ ಇಂಡಿಯಾ-2023’ ವೈಮಾನಿಕ ಪ್ರದರ್ಶನಕ್ಕೆ ಶುಕ್ರವಾರ ತೆರೆಬಿದ್ದಿತು.

ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನದ 14ನೇ ಆವೃತ್ತಿಗೆ ಸೋಮವಾರ (ಫೆ. 13) ಚಾಲನೆ ನೀಡಲಾಗಿತ್ತು. ಅಂದಿನಿಂದ ದಿನಕ್ಕೆ ಎರಡು ಬಾರಿ ಲೋಹದ ಹಕ್ಕಿಗಳ ಹಾರಾಟ ಜನರನ್ನು ಬೆರಗುಗೊಳಿಸಿತು. ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು ಸ್ಪರ್ಧೆಗೆ ಇಳಿದ ರೀತಿಯಲ್ಲಿ ಕಸರತ್ತು ಮಾಡಿದವು.

ಪ್ರದರ್ಶನದ ಕೊನೆ ದಿನವಾದ ಶುಕ್ರವಾರ ವಿಮಾನಗಳ ಹಾರಾಟ ವೀಕ್ಷಿಸಲು ಜನಸಾಗರವೇ ಹರಿದು ಬಂದಿತ್ತು. ನೋಂದಣಿ ಮಾಡಿಕೊಂಡ ಜನರಿಗೆ ವಾಯುನೆಲೆಗೆ ಮುಕ್ತ ಪ್ರವೇಶ ಕಲ್ಪಿಸಲಾಗಿತ್ತು. ಕುಟುಂಬ ಸಮೇತ ವಾಯುನೆಲೆಗೆ ಲಗ್ಗೆ ಇಟ್ಟಿದ್ದ ಜನ, ಆಕಾಶದತ್ತ ಮುಖ ಮಾಡಿ ವಿಮಾನ ಹಾಗೂ ಹೆಲಿಕಾಪ್ಟರ್‌ಗಳ ತರಹೇವಾರಿ ಪ್ರದರ್ಶನಗಳನ್ನು ಕಣ್ತುಂಬಿಕೊಂಡರು. ವಿಮಾನಗಳ ಜೊತೆಯಲ್ಲಿ ಫೋಟೊ ಕ್ಲಿಕ್ಕಿಸಿಕೊಂಡರು.

ADVERTISEMENT

ಸುಖೋಯ್‌, ತೇಜಸ್‌, ಪ್ರಚಂಡ, ಸೂರ್ಯಕಿರಣ್ ತಂಡಗಳು ಎಂದಿನಂತೆ ಬಾನಿನಲ್ಲಿ ಚಿತ್ತಾರ ಮೂಡಿಸಿದವು. ಶುಕ್ರವಾರ ಸಂಜೆ ಕೊನೆಯದಾಗಿ ಆಕಾಶಕ್ಕೆ ಹಾರಿದ ‘ಸೂರ್ಯ ಕಿರಣ್’ ಲಘು ವಿಮಾನಗಳ ತಂಡದ ಪ್ರದರ್ಶನ ಜನಪ್ರಿಯವಾಗಿತ್ತು. ಈ ತಂಡದ ಪ್ರದರ್ಶನ ಮುಕ್ತಾಯಗೊಳ್ಳುತ್ತಿದ್ದಂತೆ ಏರೋ ಇಂಡಿಯಾಗೆ ತೆರೆಬಿದ್ದಿತು.

ಖರೀದಿಯೂ ಜೋರು: ವಾಯುನೆಲೆಯ ಗೇಟ್‌ ನಂ. 8 ಹಾಗೂ 9ರಲ್ಲಿ ಚಿಕ್ಕ ಮಾರುಕಟ್ಟೆ ಸೃಷ್ಟಿಸಲಾಗಿತ್ತು. ವಿಮಾನಗಳ ಕಂಪನಿ, ಸೇನೆಗಳಿಗೆ ಸಂಬಂಧಪಟ್ಟ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ಮಾರಾಟಕ್ಕೆ ಇರಿಸಲಾಗಿತ್ತು. ಮಳಿಗೆಗಳಲ್ಲಿ ಸುತ್ತಾಡಿದ ಜನ, ಹಲವು ವಸ್ತುಗಳನ್ನು ಖರೀದಿಸಿದರು.

ಆಟಿಕೆ ವಿಮಾನಗಳು, ಸೈನಿಕರ ಜಾಕೆಟ್‌, ಟೀ–ಶರ್ಟ್, ವಿಮಾನಗಳ ಕಲಾಕೃತಿಗಳು, ಆಲಂಕಾರಿಕ ವಸ್ತುಗಳು ಮಳಿಗೆಯಲ್ಲಿದ್ದವು.

ವಾಯುಪಡೆ ಸೇರಲು ಉತ್ತೇಜನ: ಯುವಕರನ್ನು ಸೇನೆಯತ್ತ ಸೆಳೆಯುವ ಉದ್ದೇಶದಿಂದ ಭಾರತೀಯ ವಾಯುಪಡೆಯು ವಿಶೇಷ ಮಳಿಗೆ ತೆರೆದಿತ್ತು.

ವಾಯುಪಡೆ ಸ್ಥಾಪನೆ, ಬೆಳವಣಿಗೆ, ವಿಮಾನಗಳ ಚಿತ್ರಾವಳಿ, ಸೈನಿಕರಿಗೆ ಸಿಗುವ ಸೌಲಭ್ಯಗಳನ್ನು ಮಳಿಗೆಯಲ್ಲಿ ತಿಳಿಸಲಾಯಿತು. ಮಳಿಗೆಗೆ ಭೇಟಿ ನೀಡಿದ್ದ ಆಸಕ್ತ ಯುವಕರಿಗೆ ವಿಶೇಷ ತರಗತಿಗಳನ್ನು ನಡೆಸಿದ ಹಿರಿಯ ಅಧಿಕಾರಿಗಳು, ವಾಯುಪಡೆ ಪರಿಚಯ ಮಾಡಿಕೊಟ್ಟರು. ವಾಯುಪಡೆಗೆ ಸೇರಲು ತಯಾರಿ ಹೇಗಿರಬೇಕೆಂದು ಮಾಹಿತಿ ನೀಡಿದರು.

‘ಪಿಯುಸಿ ಕಲಿಯುತ್ತಿದ್ದೇನೆ. ವಾಯುಪಡೆಯಲ್ಲಿ ಪೈಲಟ್ ಆಗಬೇಕೆಂಬ ಆಸೆ ಇತ್ತು. ಆದರೆ, ಹೇಗೆ ಎಂಬುದು ಗೊತ್ತಿರಲಿಲ್ಲ. ವಾಯುಪಡೆಯ ಅಧಿಕಾರಿಗಳೇ ಹಲವು ಗೊಂದಲಗಳನ್ನು ಬಗೆಹರಿಸಿದರು’ ಎಂದು ವಿದ್ಯಾರ್ಥಿ ಆಶಿಕ್ ಅವರು ಹೇಳಿದರು.

ವಿಪರೀತ ದಟ್ಟಣೆ: ಬಳ್ಳಾರಿ ರಸ್ತೆ ಹಾಗೂ ಸುತ್ತಮತ್ತಲಿನ ರಸ್ತೆಗಳಲ್ಲಿ ಶುಕ್ರವಾರ ಬೆಳಿಗ್ಗೆ ಹಾಗೂ ಸಂಜೆ ವಿಪರೀತ ದಟ್ಟಣೆ ಉಂಟಾಗಿ, ವಾಹನಗಳು ಗಂಟೆಗಟ್ಟಲೆ ನಿಂತಲ್ಲೇ ನಿಲ್ಲಬೇಕಾಯಿತು.

ವಾಯುನೆಲೆ ಎದುರಿನ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ದೇವನಹಳ್ಳಿಯಿಂದ ನಗರಕ್ಕೆ ಬರುತ್ತಿದ್ದ ಹಾಗೂ ನಗರದಿಂದ ದೇವನಹಳ್ಳಿಯತ್ತ ಹೊರಟಿದ್ದ ಪ್ರಯಾಣಿಕರು, ದಟ್ಟಣೆಯಲ್ಲಿ ಸಿಲುಕಿ ಪರದಾಡಿದರು.

ಕೊನೆ ದಿನವಾದ ಶುಕ್ರವಾರ ಬೆಳಿಗ್ಗೆಯಿಂದಲೇ ಜನರು ಕಾರು, ಬೈಕ್ ಹಾಗೂ ಬಸ್‌ಗಳಲ್ಲಿ ವಾಯುನೆಲೆಯತ್ತ ಆಗಮಿಸಿದರು. ಸಂಜೆ ಪ್ರದರ್ಶನ ಮುಗಿಯುತ್ತಿದ್ದಂತೆ ಜನರು ಒಟ್ಟಿಗೆ ವಾಯುನೆಲೆಯಿಂದ ವಾಪಸು ಹೊರಟರು. ವಾಯುನೆಲೆಯಿಂದ ಬಳ್ಳಾರಿ ರಸ್ತೆಗೆ ಸಂಪರ್ಕ ಕಲ್ಪಿಸುವ ಒಳರಸ್ತೆಗಳು ಕಿರಿದಾಗಿದ್ದರಿಂದ, ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು. ಈ ವಾಹನಗಳನ್ನು ಮುಂದಕ್ಕೆ ಕಳುಹಿಸುವುದಕ್ಕಾಗಿ, ಬಳ್ಳಾರಿ ರಸ್ತೆಯಲ್ಲಿ ಇತರೆ ವಾಹನಗಳ ಸಂಚಾರ ತಡೆಯಲಾಗಿತ್ತು. ಕೆಲ ವಾಹನಗಳು ಅಡ್ಡಾದಿಡ್ಡಿ ಸಂಚರಿಸಿ, ಎಲ್ಲೆಂದರಲ್ಲಿ ನಿಂತಿದ್ದರಿಂದ ವಿಪರೀತ ದಟ್ಟಣೆ ಕಂಡುಬಂತು. ದಟ್ಟಣೆ ನಿಯಂತ್ರಿಸಲು ಪೊಲೀಸರು ಹೈರಾಣಾದರು.

ವೈದ್ಯಕೀಯ ಮಾದರಿ ಸಾಗಣೆಗೆ ‘ಸಂಜೀವಿನಿ’ ಡ್ರೋನ್

ರಕ್ತ, ಮೂತ್ರ ಸೇರಿ ವಿವಿಧ ವೈದ್ಯಕೀಯ ಮಾದರಿಗಳ ತ್ವರಿತ ಸಾಗಣೆಗಾಗಿ ‘ಸಂಜೀವಿನಿ’ ಡ್ರೋನ್ ಉಪಯೋಗಿಸಲು ನಾರಾಯಣ ಹೆಲ್ತ್‌ ಮುಂದಾಗಿದ್ದು, ಈ ಸಂಬಂಧ ‘ಗರುಡ ಏರೋಸ್ಪೇಸ್’ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ವೈದ್ಯಕೀಯ ಮಾದರಿಗಳ ಸಾಗಣೆಗೆ ಹೆಚ್ಚಿನ ಸಮಯ ವ್ಯಯವಾಗುತ್ತಿದ್ದು, ಪರೀಕ್ಷೆ ವರದಿ ಸಿದ್ಧಪಡಿಸುವುದು ತಡವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಡ್ರೋನ್ ಬಳಸಲು ನಾರಾಯಣ್ ಹೆಲ್ತ್ ಆಸಕ್ತಿ ತೋರಿಸಿದೆ.

ಡ್ರೋನ್ ಪೂರೈಕೆ, ನಿರ್ವಹಣೆಗೆ ಸಂಬಂಧಪಟ್ಟ ಒಪ್ಪಂದಕ್ಕೆ ನಾರಾಯಣ್ ಹೆಲ್ತ್ ಅಧ್ಯಕ್ಷ ಡಾ. ದೇವಿ ಶೆಟ್ಟಿ ಹಾಗೂ ಗರುಡ ಏರೋಸ್ಪೇಸ್ ಸಂಸ್ಥಾಪಕ ಅಗ್ನೀಶ್ವರ್ ಜಯಪ್ರಕಾಶ್ ಸಹಿ ಹಾಕಿದರು. ಒಪ್ಪಂದಪತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

‘ಮೊದಲಿಗೆ ಬೆಂಗಳೂರಿನಲ್ಲಿ ಸಂಜೀವಿನಿ ಡ್ರೋನ್ ಬಳಸಲಾಗುವುದು. ನಂತರದ ದಿನಗಳಲ್ಲಿ 21 ಆಸ್ಪತ್ರೆಗಳಿಗೆ ವಿಸ್ತರಿಸಲಾಗುವುದು’ ಎಂದು ಡಾ. ದೇವಿ ಶೆಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.