ADVERTISEMENT

ಮತ್ತೆರಡು ಯಾತ್ರೆ: ಕಾಂಗ್ರೆಸ್‌ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2022, 21:30 IST
Last Updated 27 ಅಕ್ಟೋಬರ್ 2022, 21:30 IST
   

ನವದೆಹಲಿ: ಕೃಷ್ಣಾ ನ್ಯಾಯಾಧೀಕರಣದ ತೀರ್ಪನ್ನು ಜಾರಿಗೊಳಿಸಲು ಅಧಿಸೂಚನೆ ಹೊರಡಿಸದೇ ಇರುವುದು, ಕಳಸಾ–ಬಂಡೂರಿ (ಮಹದಾಯಿ) ಯೋಜನೆಯ ಜಾರಿ ವಿಳಂಬ ಹಾಗೂ 371 ಜೆ ಸಮರ್ಪಕ ಅನುಷ್ಠಾನ ಆಗುತ್ತಿಲ್ಲ ಎಂಬ ವಿಚಾರಗಳನ್ನು ಮುಂದಿಟ್ಟುಕೊಂಡು ಮತ್ತೆರಡು ಯಾತ್ರೆಗಳನ್ನು ನಡೆಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಸಿದ್ಧತೆ ನಡೆಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಮಾಣವಚನ ಸಮಾ ರಂಭದಲ್ಲಿ ಭಾಗವಹಿಸಲು ಬಂದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ಸಂಬಂಧ ಪಕ್ಷದ ಹಿರಿಯ ನಾಯಕರ ಜತೆಗೆ ಸಮಾಲೋಚನೆ ನಡೆಸಿದರು. ಎಲ್ಲರೂ ಒಗ್ಗಟ್ಟಿನಿಂದ ಪಾಲ್ಗೊಂಡು ಈ ಯಾತ್ರೆ ನಡೆಸಬೇಕು ಎಂದು ಪಕ್ಷದ ಹಿರಿಯ ನಾಯಕರು ಸೂಚನೆ ನೀಡಿದರು. ಬಳಿಕ ಸಿದ್ದರಾಮಯ್ಯ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಅವರೊಂದಿಗೂ ಚರ್ಚಿಸಿದರು.

ಸುದ್ದಿಗಾರರ ಜತೆಗೆ ಮಾತನಾಡಿದ ಸಿದ್ದರಾಮಯ್ಯ, ‘ಮೂರು ವಿಚಾರ ಮುಂದಿಟ್ಟುಕೊಂಡು 2 ಯಾತ್ರೆಗಳನ್ನು ನಡೆಸಲು ಯೋಜಿಸಲಾಗಿದೆ. ಯಾತ್ರೆಯ ರೂಪರೇಷೆ ಇನ್ನೂ ಅಂತಿಮವಾಗಿಲ್ಲ. ಈ ಸಂಬಂಧ ತಂಡ ರಚಿಸಲಾಗುವುದು’ ಎಂದರು.

ADVERTISEMENT

‘ದಕ್ಷಿಣ ಕರ್ನಾಟಕಕ್ಕೆ ಸಂಬಂಧಿಸಿ ದಂತೆ ಈಗಾಗಲೇ ಮೇಕೆದಾಟು ಪಾದಯಾತ್ರೆ ಮಾಡಿದ್ದೇವೆ. ಉತ್ತರ ಕರ್ನಾಟಕದ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ವಿಳಂಬ ಮಾಡುತ್ತಿದೆ. ಈಗ ನಾವು ಪಾದಯಾತ್ರೆ ನಡೆಸುವುದಿಲ್ಲ. ಟ್ರ್ಯಾಕ್ಟರ್‌ ಹಾಗೂ ಇತರ ವಾಹನಗಳ ಮೂಲಕ ಯಾತ್ರೆ ನಡೆಸಲಿದ್ದೇವೆ’ ಎಂದರು.

ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಲು ಆದಷ್ಟು ಬೇಗ ರಾಜ್ಯ ಚುನಾವಣಾ ಸಮಿತಿ ಹಾಗೂ ಉನ್ನತ ಸಮಿತಿಗಳನ್ನು ರಚಿಸಬೇಕು ಎಂಬುದು ನಮ್ಮ ಆಲೋಚನೆ. ಈ ಬಗ್ಗೆ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಲಾಗಿದೆ ಎಂದರು. ನವೆಂಬರ್‌ ಅಂತ್ಯದೊಳಗೆ ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನುಅಂತಿಮಗೊಳಿಸಬೇಕು ಎಂಬ ಗುರಿ ಇರಿಸಿಕೊಂಡಿದ್ದೇವೆ ಎಂದರು.

ಮೀಸಲಾತಿ ಸಂಬಂಧ ಪಂಚಮ ಸಾಲಿ ಸಮುದಾಯದ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ‘ಈ ಸಂಬಂಧ ರಾಜ್ಯ ಸರ್ಕಾರವು ಸುಭಾಷ್‌ ಅಡಿ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಈ ಸಮಿತಿ ಇನ್ನೂ ವರದಿ ಕೊಟ್ಟಿಲ್ಲ. ಸಮಿತಿ ಮೊದಲು ವರದಿ ನೀಡಲಿ. ಆಮೇಲೆ ಆ ವಿಷಯದ ಬಗ್ಗೆ ಚರ್ಚಿಸೋಣ’ ಎಂದರು. ‘ಪರಿಶಿಷ್ಟರ ಮೀಸಲು ಹೆಚ್ಚಿಸುವ ಬಗ್ಗೆ ನಾವು ನ್ಯಾಯಮೂರ್ತಿ ನಾಗಮೋಹನದಾಸ್‌ ಸಮಿತಿ ರಚನೆ ಮಾಡಿದ್ದೆವು. ಆ ಸಮಿತಿ ವರದಿ ಕೊಟ್ಟಿತ್ತು. ಅದರ ಆಧಾರದಲ್ಲಿ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.