ಬೆಂಗಳೂರು: ಕರ್ನಾಟಕದಲ್ಲಿ 1,000 ಮೆಗಾವಾಟ್ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಉತ್ಪಾದನಾ ಘಟಕವನ್ನು, ₹5,000 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಭಾರತೀಯ ಅನಿಲ ಪ್ರಾಧಿಕಾರ (ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್–ಗೇಲ್) ಮತ್ತು ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿವೆ.
ವಿಧಾನಸೌಧದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಇಂಧನ ಸಚಿವ ಕೆ.ಜೆ.ಜಾರ್ಜ್ ಮತ್ತು ಕ್ರೆಡೆಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ ಸಮ್ಮುಖದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಗೇಲ್ ಕಾರ್ಯಕಾರಿ ನಿರ್ದೇಶಕ ಪರಿವೇಶ್ ಛುಗ್ ಸಿಂಗ್ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.
‘ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಭೂಮಿಯನ್ನು, ರೈತರಿಂದ ನೇರವಾಗಿ ಭೋಗ್ಯಕ್ಕೆ ಗೇಲ್ ಪಡೆದುಕೊಳ್ಳಬಹುದು. ಇಲ್ಲವೇ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದ ಮೂಲಕ ಅಗತ್ಯ ಜಮೀನನ್ನು ಒದಗಿಸಲಾಗುವುದು. ಇತರೆ ಸವಲತ್ತುಗಳನ್ನೂ ತ್ವರಿತವಾಗಿ ಒದಗಿಸಲಾಗುವುದು’ ಎಂದರು.
‘ನವೀಕರಿಸಬಹುದಾದ ಮತ್ತು ಮರುಬಳಕೆ ಇಂಧನ ಕ್ಷೇತ್ರದ ಹೂಡಿಕೆಯಲ್ಲಿ ರಾಜ್ಯವು ಅಗ್ರಸ್ಥಾನದಲ್ಲಿ ಇರುವಂತೆ ನೋಡಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಇದು ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ನಿರ್ಣಾಯಕವಾಗಿದೆ. ಇಲ್ಲಿನ ಕಾರ್ಯಪರಿಸರ, ಕೌಶಲಪೂರ್ಣ ಮಾನವ ಸಂಪನ್ಮೂಲವು ಪರಿಸರ ಸ್ನೇಹಿ ಇಂಧನ ಕ್ಷೇತ್ರದ ಹೂಡಿಕೆಗೆ ಕರ್ನಾಟಕವನ್ನು ಪ್ರಶಸ್ತ ತಾಣವಾಗಿಸಿವೆ’ ಎಂದರು.
‘ಈ ಒಪ್ಪಂದವು ಭಾರತದ ಪರಿಸರಸ್ನೇಹಿ ಇಂಧನ ವಲಯದ ಸಾಧನೆಗೆ ಬಲ ತುಂಬಲಿದೆ. ರಾಜ್ಯದಲ್ಲೂ ಈ ವಲಯದಲ್ಲಿ ಹೂಡಿಕೆಗೆ ವಿಪುಲ ಅವಕಾಶಗಳಿವೆ. ಪಾವಗಡದ ಸೋಲಾರ್‌ಪಾರ್ಕ್‌ನಲ್ಲಿ ವಾರ್ಷಿಕ 2,500 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಯೋಜನೆ ವಿಸ್ತರಿಸುವುದಾದರೆ, ಅಲ್ಲಿ ರೈತರು ಜಮೀನು ಬಿಟ್ಟುಕೊಡಲು ಮುಂದೆ ಬಂದಿದ್ದಾರೆ. 10,000 ಎಕರೆಗಳಷ್ಟು ಜಮೀನು ದೊರೆತರೆ ಅಲ್ಲಿ ಯೋಜನೆ ವಿಸ್ತರಿಸಲಾಗುವುದು’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಗೇಲ್ ಕಾರ್ಯನಿರ್ವಾಹಕ ನಿರ್ದೇಶಕ (ಮಾರುಕಟ್ಟೆ) ಸುಮಿತ್ ಕಿಶೋರ್, ಕ್ರೆಡೆಲ್ ವ್ಯವಸ್ಥಾಪಕ ನಿರ್ದೇಶಕ ರುದ್ರಪ್ಪಯ್ಯ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.