ADVERTISEMENT

ಮೆಕ್ಕಜೋಳ ಖರೀದಿ; ಕೇಂದ್ರಕ್ಕೆ ಪತ್ರ ಬರೆಯಿರಿ: ಸಿಎಂಗೆ ಸಚಿವ ಪಾಟೀಲ ಮನವಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 16:44 IST
Last Updated 29 ಅಕ್ಟೋಬರ್ 2025, 16:44 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ‘ಮೆಕ್ಕೆಜೋಳ ಬೆಲೆ ಕುಸಿತದಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸುವಂತೆ ಪ್ರಧಾನಿಗೆ ಪತ್ರ ಬರೆಯಿರಿ’ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿಯಾಗಿದ್ದ ಅವರು, ‘ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 15.50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದ್ದು, ಸುಮಾರು 50 ಲಕ್ಷ ಟನ್‌ ಇಳುವರಿ ನಿರೀಕ್ಷಿಸಲಾಗಿದೆ. ಆದರೆ, ಮೆಕ್ಕೆಜೋಳದ ಬೆಲೆ ಕುಸಿದಿರುವ ಕಾರಣ ಬೆಳೆಗಾರರು ಕಂಗಾಲಾಗಿದ್ದಾರೆ’ ಎಂದು ವಿವರಿಸಿರುವ ಮನವಿಪತ್ರ ಸಲ್ಲಿಸಿದರು. 

ADVERTISEMENT

‘ಎಥೆನಾಲ್‌ ಉತ್ಪಾದನೆ, ಜಾನುವಾರು ಮೇವು, ಡಿಸ್ಟಿಲರಿ ಮತ್ತಿತರ ಕೈಗಾರಿಕೆಗಳಲ್ಲಿ ಮೆಕ್ಕಜೋಳಕ್ಕೆ ಬೇಡಿಕೆ ಇದೆ. ಹಿಂದಿನ ಆರ್ಥಿಕ ವರ್ಷದಲ್ಲಿ ಎಥೆನಾಲ್‌ ತಯಾರಿಕೆಗಾಗಿ ಕೇಂದ್ರ ಸರ್ಕಾರವು ನಾಫೆಡ್‌ ಮೂಲಕ ರಾಜ್ಯದಿಂದ 410 ಟನ್‌ ಮೆಕ್ಕೆಜೋಳ ಖರೀದಿಸಿತ್ತು. ಈ ಬಾರಿಯೂ ಖರೀದಿಸಲು ಅವಕಾಶವಿದೆ’ ಎಂದಿದ್ದಾರೆ.

‘ಕೇಂದ್ರ ಸರ್ಕಾರವು ಪಡಿತರ ಮತ್ತು ಜೈವಿಕ ಇಂಧನ ಸಚಿವಾಲಯಗಳ ಅಧೀನದ ಎಫ್‌ಸಿಐ, ನಾಫೆಡ್‌, ಎನ್‌ಸಿಸಿಎಫ್‌ಗಳ ಮೂಲಕ ಮೆಕ್ಕೆಜೋಳ ಖರೀದಿಸಬಹುದಾಗಿದೆ. ಪ್ರತಿ ಕ್ವಿಂಟಲ್‌ಗೆ ₹2,400ರ ದರದಲ್ಲಿ ಖರೀದಿಸಿ ಎಂದು ಶಿಫಾರಸು ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಿರಿ’ ಎಂದು ಕೋರಿದ್ದಾರೆ.

ಅಧಿಕಾರಿಗಳಿಗೆ ಸೂಚನೆ: ಯಾವುದೇ ಕೃಷಿ ಉತ್ಪನ್ನವು ಮಾರುಕಟ್ಟೆಗೆ ಆವಕವಾಗುವ ಮೂರು ತಿಂಗಳು ಮೊದಲು, ಮಾರುಕಟ್ಟೆಯ ವ್ಯವಸ್ಥೆ ಮಾಡಬೇಕು ಎಂದು ಕೃಷಿ ಮಾರುಕಟ್ಟೆ ಅಧಿಕಾರಿಗಳಿಗೆ ಸಚಿವ ಶಿವಾನಂದ ಪಾಟೀಲ ನಿರ್ದೇಶನ ನೀಡಿದ್ದಾರೆ. ಪಶು ಆಹಾರ ಉತ್ಪಾದನೆಗೆ ರೈತರಿಂದ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳವನ್ನು ಖರೀದಿಸುವ ಬಗ್ಗೆ ಪರಿಶೀಲಿಸಿ ಎಂದು ಕೆಎಂಎಫ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.