ADVERTISEMENT

ವಿದ್ಯಾರ್ಥಿಗಳಿಗಾಗಿ ಕೆಕೆಆರ್‌ಡಿಬಿ ನೆರವು ಕೋರಿದ ಕೃಷಿ ವಿವಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 12:26 IST
Last Updated 4 ನವೆಂಬರ್ 2019, 12:26 IST

ರಾಯಚೂರು: ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗಲು ಪ್ರತಿತಿಂಗಳು ಶಿಷ್ಯವೇತನದ ನೆರವು ಒದಗಿಸುವಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯನ್ನು ಕೋರಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಪ್ರಸ್ತಾವನೆಯೊಂದನ್ನು ಸಲ್ಲಿಸಲಾಗಿದೆ.

ಬಿಎಸ್‌ಸಿ ಕೃಷಿ ಹಾಗೂ ತಾಂತ್ರಿಕ ಪದವಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ₹5 ಸಾವಿರ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ₹6 ಸಾವಿರ ಹಾಗೂ ಪಿಎಚ್‌ಡಿ ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ ₹8 ಸಾವಿರ ಶಿಷ್ಯವೇತನ ನೀಡುವ ಯೋಜನೆಯನ್ನು ಜಾರಿಗೊಳಿಸಿದರೆ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಓದು ಮುಗಿಸಲು ಬೇಕಾಗುವ ಆರ್ಥಿಕ ಸಂಪನ್ಮೂಲ ಹೊಂದಿಸಲು ಪರದಾಡುತ್ತಿದ್ದಾರೆ. ಈ ಭಾಗದ ಶ್ರೇಯೋಭಿವೃದ್ಧಿಗಾಗಿ ಸ್ಥಾಪನೆಯಾದ ಕೆಕೆಆರ್‌ಡಿಬಿಯಿಂದ ನೆರವು ಒದಗಿಸಬೇಕು ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

ಕೃಷಿ ವಿಶ್ವವಿದ್ಯಾಲಯದ ಶೇ 70 ಪ್ರವೇಶ ಸೀಟುಗಳು ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಮೀಸಲಾಗಿವೆ. ಎಲ್ಲರಿಗೂ ಶಿಷ್ಯವೇತನ ದೊರಕಿಸಿದರೆ, ಸಂಕಷ್ಟವಿಲ್ಲದೆ ಓದಿನಲ್ಲಿ ತೊಡಗಿಸಿಕೊಂಡು ಗುಣಮಟ್ಟದ ಶಿಕ್ಷಣ ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಎನ್ನುವ ಯೋಜನೆ ವಿಶ್ವವಿದ್ಯಾಲಯದ್ದು.

ADVERTISEMENT

ಆಂಧ್ರಪ್ರದೇಶದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ಆ ರಾಜ್ಯದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಕೊಡುವ ವ್ಯವಸ್ಥೆಯನ್ನು ಅಲ್ಲಿನ ಸರ್ಕಾರ ಜಾರಿಗೆ ತಂದಿದೆ. ಅದೇ ಮಾದರಿಯನ್ನು ರಾಜ್ಯದಲ್ಲಿ ಅನುಸರಿಸಬೇಕು. ಕೃಷಿ ಪದವಿ ಓದಿಗೆ ಪ್ರೋತ್ಸಾಹಿಸಿದರೆ, ಕೃಷಿ ಕ್ಷೇತ್ರದ ಅಭಿವೃದ್ಧಿಯನ್ನು ಪ್ರೋತ್ಸಾಹಿಸಿದಂತಾಗುತ್ತದೆ. ರೈತ ಕುಟುಂಬ ಮೀಸಲಾತಿಯಡಿ ಬರುವ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ.

‘ಯಾವುದೇ ಪ್ರದೇಶದ ಅಭಿವೃದ್ಧಿಯು ಶಿಕ್ಷಣದ ಗುಣಮಟ್ಟ ಅವಲಂಬಿಸಿದೆ. ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದುಕೊಂಡು, ಈ ಭಾಗದ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಕೆಆರ್‌ಡಿಬಿ ಸ್ಪಂದಿಸುತ್ತದೆ ಎನ್ನುವ ನಿರೀಕ್ಷೆ ಇದೆ’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್‌. ಕಟ್ಟಿಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.