ADVERTISEMENT

ಬಿಜೆಪಿಗರ ವಿರುದ್ಧ ಅಹಿಂದ ಸಮಾವೇಶ: ಎಚ್‌.ಸಿ. ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2022, 15:16 IST
Last Updated 26 ಫೆಬ್ರುವರಿ 2022, 15:16 IST
ಎಚ್‌.ಸಿ. ಮಹಾದೇವಪ್ಪ
ಎಚ್‌.ಸಿ. ಮಹಾದೇವಪ್ಪ   

ಬೆಂಗಳೂರು: ‘ಬಿಜೆಪಿಗರ ಕೋಮುದ್ವೇಷದ ವಿರುದ್ಧ ಜನಾಂದೋಲನ ರೂಪಿಸಲು ಪರಿಶಿಷ್ಟರು (ಎಸ್‌ಸಿ, ಎಸ್‌ಟಿ), ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಒಗ್ಗೂಡಿಸಿ, ಭಾವೈಕ್ಯತಾ ಸಮಾವೇಶ ಆಯೋಜಿಸಲು ಉದ್ದೇಶಿಸಲಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ಎಸ್.ಸಿ. ಮಹದೇವಪ್ಪ ಹೇಳಿದ್ದಾರೆ.

‘ನೆಲ, ಜಲ, ಭಾಷೆಗಾಗಿ ಹೋರಾಡುವ ಜೊತೆಗೆ ಸಂವಿಧಾನದ ಆಶಯವನ್ನು ಉಳಿಸಲು ಈ ಸಮುದಾಯಗಳು ಒಗ್ಗೂಡುವ ಅಗತ್ಯವಿದೆ. ಸಂವಿಧಾನ, ಜನ, ಸಮಾಜ ವಿರೋಧಿಗಳಾದ ಬಿಜೆಪಿಗರಿಗೆ ಕೆಳವರ್ಗಗಳ ರಾಜಕೀಯ ಶಕ್ತಿ ಎಷ್ಟು ಬಲಿಷ್ಠವಾಗಿದೆ ಎಂದು ತೋರಿಸಿಕೊಡಬೇಕಿದೆ’ ಎಂದಿದ್ದಾರೆ.

‘ಹಿಂದೂ ಮುಸ್ಲಿಂ ಗಲಭೆಯ ನಂತರ ಪರಿಶಿಷ್ಟರನ್ನು ಮತ್ತೆ ಅಸ್ಪೃಶ್ಯರನ್ನಾಗಿಸುವ ಹಿಂದುತ್ವಕ್ಕೆ ಬಿಜೆಪಿ ಮುಂದಾಗಿದೆ. ಧರ್ಮಸ್ಥಳ ಬಳಿ ಬೆಳ್ತಂಗಡಿಯಲ್ಲಿ ಪರಿಶಿಷ್ಟ ವ್ಯಕ್ತಿಯನ್ನು ಬಜರಂಗದಳ ಕಾರ್ಯಕರ್ತನೊಬ್ಬ ಕೊಲೆ ಮಾಡಿದ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕಿದ್ದ ಹಿಂದೂ ಸಂಘಟನೆಗಳು, ಅದನ್ನು ಸಹಜ ಸಂಗತಿಯಂತೆ ಭಾವಿಸಿದೆ. ಮತ್ತೊಂದಡೆ, ಶಿವಮೊಗ್ಗದಲ್ಲಿ ಹರ್ಷನಂಥ ದಾರಿ ತಪ್ಪಿದ ಮಕ್ಕಳನ್ನೇ ದೇಶ ಪ್ರೇಮಿಗಳನ್ನಾಗಿಸುವ ಕೆಟ್ಟ ಕೆಲಸದಲ್ಲಿ ಬಿಜೆಪಿ ನಿರತವಾಗಿದ್ದು, ಮುಗ್ಧರ ತಲೆ ಕೆಡಿಸಿ ಅವರನ್ನು ಬಲಿ ಪಡೆದಿದೆ’ ಎಂದೂ ಆರೋಪಿಸಿದ್ದಾರೆ.

ADVERTISEMENT

‘ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕದ (ಎನ್‌ಸಿಆರ್‌ಬಿ) ಅಂಕಿ ಅಂಶಗಳ ಪ್ರಕಾರ ಎಸ್‌ಸಿ, ಎಸ್‌ಟಿ ಸಮುದಾಯದ ಮೇಲಿನ ದೌರ್ಜನ್ಯ ಪ್ರಕರಣಗಳು ಕ್ರಮವಾಗಿ ಶೇ 9.4 ಮತ್ತು ಶೇ 9.3ರಷ್ಟಿದೆ. ಹಿಂದುತ್ವದ ಪ್ರತಿಪಾದಕರಾದ ಬಿಜೆಪಿಗರಾಗಲಿ, ಬಿಜೆಪಿಯ ರಾಜಕೀಯ ಲಾಭಕ್ಕಾಗಿ ಹಿಂದುತ್ವದ ಹೆಸರಲ್ಲಿ ಕೆಲಸ ಮಾಡುವ ಸಂಘಟನೆಗಳಾಗಲಿ ಈ ಬಗ್ಗೆ ಚಕಾರ ಎತ್ತಿಲ್ಲ. ಪರಿಶಿಷ್ಟರು, ಹಿಂದುಳಿದವರು ಮತ್ತು ಆದಿವಾಸಿಗಳ ಮೇಲಿನ ಬಿಜೆಪಿಗರ ಧೋರಣೆ ಗಮನಿಸಿದವರಿಗೆ ಇದಕ್ಕೆ ಕಾರಣ ಅರ್ಥವಾಗುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.